ಗದಗ: ರೈತರ (Farmers) ಜಮೀನಿನಲ್ಲಿರುವ ಕೆರೆ-ಕಟ್ಟೆಗಳನ್ನು ಮುಚ್ಚಿ ಫ್ಯಾಕ್ಟರಿ ನಿರ್ಮಿಸಲು ಮುಂದಾಗಿರುವುದನ್ನು ವಿರೋಧಿಸಿ ಗದಗ (Gadag) ಹಿರೇಮಲ್ಲಾಪೂರ ಗ್ರಾಮದ ರೈತರು ಜಯಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಜಿಲ್ಲಾಡಳಿತ ಭವನ ಬಳಿ ಬೃಹತ್ ಪ್ರತಿಭಟನೆ ಮಾಡಿದರು.
ಈ ವೇಳೆ ಕಂಪನಿ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನ ಅಲೈನ್ ಎಥೆನಾಲ್ ಪ್ರೈವೆಟ್ ಲಿಮಿಟೆಡ್ ಎಂಬ ಕಂಪನಿ ಮಧ್ಯವರ್ತಿಗಳ ಮೂಲಕ ೩೦ ಎಕರೆಗೂ ಅಧಿಕ ಭೂಮಿ ಖರೀದಿಸಿದೆ. ಮೊದಲು ಕೃಷಿ ಚಟುವಟಿಕೆಗಳಿಗೆ ಎಂದು ರೈತರಿಗೆ ಸುಳ್ಳು ಹೇಳಿ ಭೂಮಿ ಖರೀದಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಇದನ್ನೂ ಓದಿ: ಒಂದಲ್ಲ ನೂರು FIR ಹಾಕಿದ್ರೂ ಹೆದರಲ್ಲ: ಮುನಿಸ್ವಾಮಿ
ಈಗ ಆ ಜಮೀನುಗಳಲ್ಲಿರುವ ಕೆರೆ, ಕೃಷಿ ಹೊಂಡಗಳನ್ನು ಮುಚ್ಚಿ ಫ್ಯಾಕ್ಟರಿ ನಿರ್ಮಿಸಲು ಮುಂದಾಗಿದ್ದಾರೆ. ಕೆರೆ ಕೃಷಿ ಹೊಂಡಗಳಿಂದ ಜನ, ಜಾನುವಾರುಗಳಿಗೆ ಸಾಕಷ್ಟು ಸಹಾಯವಾಗಿದ್ದವು. ಈಗ ಅಲೈನ್ ಎಥೆನಾಲ್ ಪ್ರೈವೆಟ್ ಲಿಮಿಟೆಡ್‌ನವರು ಕೆರೆ-ಕಟ್ಟೆಗಳನ್ನು ಮುಚ್ಚಿ ಫ್ಯಾಕ್ಟರಿ ನಿರ್ಮಿಸಲು ಮುಂದಾಗುವುದಕ್ಕೆ ರೈತರ ವಿರೋಧವಿದೆ ಎಂದರು. ಇದನ್ನೂ ಓದಿ: Hassan Tragedy | ಟ್ರಕ್ ಅಪಘಾತ ನಡೆದ ಜಾಗದಲ್ಲಿ ಹಂಪ್ಸ್ ನಿರ್ಮಿಸಲು ತೀರ್ಮಾನ
ಫ್ಯಾಕ್ಟರಿಯ ಸುತ್ತಮುತ್ತಲಿನ ಗ್ರಾಮಗಳಾದ ಹಿರೇಮಲ್ಲಾಪೂರ, ಪುಟಗಾಂವ ಬಡ್ಡಿ, ಸೂರಣಗಿ ಹರದಗಟ್ಟಿ, ಅಮರಾಪುರ ಗ್ರಾಮಗಳ ಜನ ಹಾಗೂ ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತಿದೆ. ಜೊತೆಗೆ ಈ ಭಾಗದಲ್ಲಿ ಕಾಯ್ದಿಟ್ಟ ಅರಣ್ಯ ಪ್ರದೇಶವಿದ್ದು, ಅದಕ್ಕೆ ಹೊಂದಿಕೊಂಡು ಕಂಪನಿಯನ್ನು ಪ್ರಾರಂಭಿಸುತ್ತಿದ್ದಾರೆ. ಇದು ರೈತರು ಹಾಗೂ ವನ್ಯಜೀವಿಗಳಿಗೆ ತೊಂದರೆಯುಂಟು ಮಾಡುತ್ತದೆ. ಇದರಿಂದ ಕೆರೆಗಳನ್ನು ಮುಚ್ಚಿಸಬಾರದು. ಕಂಪನಿಯನ್ನು ಅಲ್ಲಿಂದ ಸ್ಥಳಾಂತರಿಸಬೇಕು ಎಂದು ಪಟ್ಟುಹಿಡಿದರು.
ಪ್ರತಿಭಟನಾಕಾರರು ಗದಗ ನಗರದ ಮುಳಗುಂದ ನಾಕಾದಿಂದ ಜಿಲ್ಲಾಡಳಿತ ಭವನದ ವರೆಗೆ ಪಾದಯಾತ್ರೆ ನಡೆಸಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ನೀಡಿದರು.