ಕೃಷಿ, ತೋಟಗಾರಿಕೆ ಉತ್ಪನ್ನಗಳಿಗೆ ಬೆಂಬಲ ಬೆಲೆ; ರೈತರಿಗೆ ಸಿಗಲಿದೆ 8 ಸಾವಿರ ಕೋಟಿ: ಚಲುವರಾಯಸ್ವಾಮಿ

Public TV
2 Min Read

– ದಲ್ಲಾಳಿಗಳ ಹಾವಳಿ ತಡೆಗೆ ಬೆಳೆ ಸಮೀಕ್ಷೆ ವರದಿಯೊಂದಿಗೆ ತಾಳೆ ಹಾಕಲು ನಿರ್ಧಾರ

ಬೆಂಗಳೂರು: ಈ ಬಾರಿ ರೈತರಿಗೆ (Farmers) ಸಿಹಿ ಸುದ್ದಿ ಕೊಡಲು ನಿರ್ಧಾರ ಮಾಡಿದ್ದೇವೆ. ಕೃಷಿ (Agriculture) ಹಾಗೂ ತೋಟಗಾರಿಕೆ ಉತ್ಪನ್ನಗಳಿಗೆ ಬೆಂಬಲ ಬೆಲೆ (Support price) ನೀಡಲು ಮುಂದಾಗಿದ್ದು, 8 ಸಾವಿರ ಕೋಟಿ ರೂ. ರೈತರಿಗೆ ಸಿಗಲಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ (N. Chaluvaraya Swamy) ಹೇಳಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಲು ಮುಂದಾಗಿದ್ದೇವೆ. ಸುಮಾರು 7 ಲಕ್ಷ ರೈತರಿಂದ ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳಿಗೆ ಬೆಂಬಲ ಬೆಲೆ ಅಡಿ ಖರೀದಿಗೆ ನಿರ್ಧಾರ ಮಾಡಲಾಗಿದೆ. ಈ ವರ್ಷ ರಾಗಿ 6 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ನಿರ್ಧಾರ ಮಾಡಲಾಗಿದೆ. ಈ ಬಾರಿ ಪ್ರತಿ ರೈತರಿಂದ ಗರಿಷ್ಠ 50 ಕ್ವಿಂಟಾಲ್ ಖರೀದಿಗೆ ನಿರ್ಧರಿಸಲಾಗಿದೆ. ಸೆಪ್ಟೆಂಬರ್‍ನಿಂದ ನೋಂದಣಿ ಪ್ರಾರಂಭ ಮಾಡುತ್ತೇವೆ. ಜನವರಿಯಿಂದ ಮಾರ್ಚ್ ವರೆಗೂ ಖರೀದಿ ಮಾಡ್ತೀವಿ. 4,886 ರೂ. ಪ್ರತಿ ಕ್ವಿಂಟಾಲ್‍ಗೆ ನೀಡಿ ಖರೀದಿಗೆ ನಿರ್ಧಾರ ಮಾಡಲಾಗಿದೆ. ಕಳೆದ ವರ್ಷಕ್ಕಿಂತ 596 ರೂ.ಹೆಚ್ಚಳ ಮಾಡಲಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿರುವ 6,291 ಪ್ರಾಥಮಿಕ ಕೃಷಿ ಸಾಲ ಸಂಘಗಳಲ್ಲಿ 125 ಸಂಘಗಳು ದಿವಾಳಿ ಅಂಚಿನಲ್ಲಿವೆ: ಅಮಿತ್ ಶಾ

ಭತ್ತ 3 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ನಿರ್ಧರಿಸಲಾಗಿದೆ. ಇದು ಸಹ ಸೆಪ್ಟೆಂಬರ್‍ನಿಂದ ನೋಂದಣಿ ಶುರುವಾಗಲಿದೆ. ನವೆಂಬರ್, ಡಿಸೆಂಬರ್‍ನಲ್ಲಿ ಖರೀದಿ ಮಾಡುತ್ತೇವೆ. 2,369 ರೂ. ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್ ಕೊಡುತ್ತೇವೆ. ಈ ವರ್ಷ 69 ರೂ. ಜಾಸ್ತಿ ಕೊಡ್ತಿದ್ದೇವೆ. ಇನ್ನೂ ಬಿಳಿ ಜೋಳ 3 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ನಿರ್ಧರಿಸಲಾಗಿದ್ದು, ಪ್ರತಿ ಕ್ವಿಂಟಾಲ್‍ಗೆ 3,669 ರೂ. ಕೊಡಲು ನಿರ್ಧಾರ ಮಾಡಲಾಗಿದೆ. ಕಳೆದ ವರ್ಷಕ್ಕಿಂತ 328 ರೂ. ಜಾಸ್ತಿ ನೀಡಲಾಗುತ್ತಿದೆ. ಅಕ್ಟೋಬರ್‍ನಿಂದ ನೋಂದಣಿ ಪ್ರಾರಂಭವಾಗಲಿದ್ದು, ಡಿಸೆಂಬರ್ ನಿಂದ ಮಾರ್ಚ್‍ವರೆಗೆ ಖರೀದಿ ಮಾಡಲಾಗುತ್ತದೆ.

ಇದೇ ಮೊದಲ ಬಾರಿಗೆ ನವಣೆ, ಸಾಮೆ, ಹಾಕರ ಮುಂತಾದ ಸಿರಿಧಾನ್ಯಗಳು ಖರೀದಿಗೆ ನಿರ್ಧಾರ ಮಾಡಲಾಗಿದೆ. ಎಂಎಸ್‍ಪಿ 4,886 ಜೊತೆಗೆ ಸರ್ಕಾರದಿಂದ 114 ರೂ. ಸೇರಿ 5,000 ರೂ. ಪ್ರತಿ ಕ್ವಿಂಟಾಲ್‍ಗೆ ನೀಡಿ ಖರೀದಿಸಲಾಗುತ್ತದೆ. ಒಟ್ಟಾರೆ 7 ಲಕ್ಷಕ್ಕೂ ಹೆಚ್ಚು ರೈತರಿಂದ 15 ಲಕ್ಷ ಮೆಟ್ರಿಕ್ ಟನ್ ಉತ್ಪನ್ನಗಳನ್ನ ಅಂದಾಜು 8 ಸಾವಿರ ಕೋಟಿ ರೂ. ವೆಚ್ಚದಲ್ಲಿ ಖರೀದಿಗೆ ನಿರ್ಧಾರ ಮಾಡಲಾಗಿದೆ. ಯೋಜನೆಯ ಲಾಭವನ್ನು ಮಧ್ಯವರ್ತಿಗಳು ಪಡೆಯುವುದನ್ನ ತಡೆಯಲು ಕರ್ನಾಟಕ ರಿಮೋಟ್ ಸೆನ್ಸಿಂಗ್ ಏಜನ್ಸಿಯಿಂದ ಉಪಗ್ರಹ ಛಾಯಾಚಿತ್ರ ಪಡೆದು ಬೆಳೆ ಸಮೀಕ್ಷೆ ವರದಿಯೊಂದಿಗೆ ತಾಳೆ ಮಾಡಿ ನೈಜ ರೈತರಿಗೆ ಲಾಭ ತಲುಪಿಸಲು ಕ್ರಮಕೈಗೊಳ್ಳಲಾಗಿದೆ.

ಈ ಬಾರಿ ಕೇಂದ್ರ ಸರ್ಕಾರ ಜೊತೆ ಸೇರಿ 10.23 ಲಕ್ಷ ಕ್ವಿಂಟಾಲ್ ಮಾವಿಗೆ, 15 ಸಾವಿರ ಫಲಾನುಭವಿಗಳಿಗೆ 42 ಕೋಟಿ ರೂ. ಪರಿಹಾರ ಕೊಡಲಾಗಿದೆ. ಇನ್ನೂ ರಾಗಿಯನ್ನು ಅರ್ಧ ಕೆಜಿ, 1 ಕೆಜಿ ಪ್ಯಾಕ್ ಮಾಡಿ ಬೇರೆ ರಾಜ್ಯಗಳಿಗೆ ಮಾರಾಟ ಮಾಡುವ ಯೋಚನೆ ಇದೆ. ಅದನ್ನು ಮುಂದಿನ ದಿನಗಳಲ್ಲಿ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: 100 ಕೃಷಿ ಜಿಲ್ಲೆಗಳ ಅಭಿವೃದ್ಧಿಗೆ ನಿರ್ಧಾರ – 24,000 ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ಸಂಪುಟ ಅಸ್ತು

Share This Article