ಶಿವಮೊಗ್ಗ: ಚಾಮರಾಜನಗರದಲ್ಲಿ (Chamarajanagar) ರಸ್ತೆ ಅಪಘಾತದಲ್ಲಿ (Accident) ಮೃತಪಟ್ಟ ಅಗ್ನಿವೀರ್ ಯೋಧ (Agniveer Soldier) ಪ್ರಜ್ವಲ್ ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವದೊಂದಿಗೆ ಸಾಗರ (Sagar) ತಾಲೂಕಿನ ಜಿಗಳೆಮನೆ ಗ್ರಾಮದಲ್ಲಿ ನೆರವೇರಿತು.
ಗುರುವಾರ ಚಾಮರಾಜನಗರದಲ್ಲಿ ಸಂಭವಿಸಿದ ಅಪಘಾತದಲ್ಲಿ ಯೋಧ ಪ್ರಜ್ವಲ್ ಮೃತಪಟ್ಟಿದ್ದರು. ಇಂದು ಅವರ ಹುಟ್ಟೂರು ಜಿಗಳೆಮನೆ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿತು. ಅಗಲಿದ ಯೋಧನಿಗೆ ಸಾಗರ ತಾಲೂಕು ಅಡಳಿತದ ವತಿಯಿಂದ ಸರ್ಕಾರಿ ಗೌರವ ಸಲ್ಲಿಸಲಾಯಿತು. ಪೊಲೀಸ್ ಸಿಬ್ಬಂದಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು. ಇದನ್ನೂ ಓದಿ: ಚಾಮರಾಜನಗರ | ಎರಡು ಬೈಕ್ ನಡುವೆ ಡಿಕ್ಕಿ ಅಗ್ನಿವೀರ್ ಯೋಧ ಸಾವು
ಶಾಸಕ ಬೇಳೂರು ಗೋಪಾಲಕೃಷ್ಣ, ತಹಶೀಲ್ದಾರ್ ರಶ್ಮೀ ಹಾಲೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪ್ರಜ್ವಲ್ ಅವರ ಪಾರ್ಥೀವ ಶರೀರಕ್ಕೆ ಭಾರತೀಯ ಸೇನೆಯ ಯೋಧರು, ಮಾಜಿ ಸೈನಿಕರು ನಮನ ಸಲ್ಲಿಸಿದರು. ಇದೇ ವೇಳೆ ಪ್ರಜ್ವಲ್ ತಂದೆ ರಾಮಚಂದ್ರ ಮತ್ತು ತಾಯಿ ರಾಜೇಶ್ವರಿ ಅವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಲಾಯಿತು.
ಬಾಲ್ಯದಿಂದಲೂ ಸೇನೆಗೆ ಸೇರಬೇಕು ಎಂದು ಪ್ರಜ್ವಲ್ ಕನಸು ಕಂಡಿದ್ದರು. ಎರಡು ವರ್ಷದ ಹಿಂದೆ ಅಗ್ನಿವೀರ್ ಯೋಜನೆ ಅಡಿ ನೇಮಕವಾಗಿದ್ದರು. ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್‌ನಲ್ಲಿ ತರಬೇತಿ ಪಡೆದ ಪ್ರಜ್ವಲ್, ಪಶ್ಚಿಮ ಬಂಗಾಳದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಪ್ರಜ್ವಲ್ ತಂದೆ ರಾಮಚಂದ್ರ ಅವರು ಚಾಮರಾಜನಗರದಲ್ಲಿ ಶಿಕ್ಷಕರಾಗಿದ್ದಾರೆ. ಕೆಲಸಕ್ಕೆ ರಜೆ ಪಡೆದು ಬಂದಿದ್ದ ವೇಳೆ ಅವರು, ಚಾಮರಾಜನಗರದಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟಿದ್ದರು. ಇದನ್ನೂ ಓದಿ: Dharmasthala Case | ಇಡೀ ದೇಶದ ಹಿಂದೂಗಳಿಗೆ ನೋವಾಗಿದೆ – ಅನಾಮಿಕನನ್ನು ಬಂಧಿಸಿ: ಈಶ್ವರಪ್ಪ