`ಅಗ್ನಿಪಥ್’ ಪ್ರತಿಭಟನೆ – ಸಿಕಂದರಾಬಾದ್ ಹಿಂಸಾಚಾರದ ಮಾಸ್ಟರ್ ಮೈಂಡ್ ಅರೆಸ್ಟ್

Public TV
1 Min Read

ಹೈದರಾಬಾದ್: `ಅಗ್ನಿಪಥ್’ ನೇಮಕಾತಿ ಯೋಜನೆ ವಿರೋಧಿಸಿ ಶುಕ್ರವಾರ ತೆಲಂಗಾಣದ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸೈನಿಕರೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲವಾರು ರೈಲುಗಳಿಗೆ ಬೆಂಕಿ ಹಚ್ಚಿ ಹಿಂಸಾಚಾರ ಕೃತ್ಯವೆಸಗಿದ ಪ್ರತಿಭಟನಾಕಾರರ ಹಿಂದೆ ಮಾಸ್ಟರ್ ಮೈಂಡ್ ಆವುಲಾ ಸುಬ್ಬಾ ರಾವ್ ಇದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಪ್ರತಿಭಟನೆ ನಡೆಸುತ್ತಿದ್ದ ಗುಂಪನ್ನು ಚದುರಿಸಲು ಪೊಲೀಸರು ಫೈರಿಂಗ್ ನಡೆಸಿದಾಗ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:  ದೇಶದಲ್ಲಿ ಅಗ್ನಿಪಥ್ ಪ್ರತಿಭಟನೆಯ ಕಾವು- ಉತ್ತರದ ಬಳಿಕ ದಕ್ಷಿಣದಲ್ಲಿ ಹಿಂಸಾತ್ಮಕ ಪ್ರೊಟೆಸ್ಟ್

ಪ್ರತಿಭಟನೆ ನಡೆಸಲು ಜನರನ್ನು ಸಜ್ಜುಗೊಳಿಸಲು ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಲಾಗಿತ್ತು. ಅಲ್ಲದೇ ಸಿಕಂದರಾಬಾದ್‍ನಲ್ಲಿ ರೈಲಿಗೆ ಬೆಂಕಿ ಹಚ್ಚಿ ಹಿಂಸಾಚಾರ ಕೃತ್ಯಗಳನ್ನು ಎಸಗಿದ್ದವರಲ್ಲಿ ಆವುಲಾ ಸುಬ್ಬಾ ರಾವ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಆವುಲಾ ಸುಬ್ಬಾ ರಾವ್ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯವರಾಗಿದ್ದು, ಕಳೆದ ಕೆಲವು ವರ್ಷಗಳಿಂದ ನರಸರಾವ್‍ಪೇಟೆ, ಹೈದರಾಬಾದ್ ಸೇರಿದಂತೆ ಸುಮಾರು ಏಳು ಸ್ಥಳಗಳಲ್ಲಿ ಶಾಖೆಗಳನ್ನು ಹೊಂದಿದ್ದು, ಸೇನಾ ಆಕಾಂಕ್ಷಿಗಳಿಗಾಗಿ ತರಬೇತಿ ಅಕಾಡೆಮಿಯನ್ನು ನಡೆಸುತ್ತಿದ್ದಾರೆ. ಇದನ್ನೂ ಓದಿ: ಇಸ್ರೇಲ್ ಮಾದರಿಯ ʼಅಗ್ನಿಪಥ್ʼ- ಏನಿದು ಯೋಜನೆ, ಯಾಕಿಷ್ಟು ವಿರೋಧ?

ಶುಕ್ರವಾರ ಸಿಕಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ಸಾವಿರಾರು ಪ್ರತಿಭಟನಾಕಾರರು ಜಮಾಯಿಸಿ ಮೂರು ಪ್ಯಾಸೆಂಜರ್ ರೈಲುಗಳಿಗೆ ಬೆಂಕಿ ಹಚ್ಚಿ ಕೋಚ್‍ಗಳನ್ನು ಸುಟ್ಟುಹಾಕಿ, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶಪಡಿಸಿದರು. ಘಟನೆ ವೇಳೆ ವಾರಂಗಲ್‍ನ ರಾಜೇಶ್(19) ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೋನಿ, ಕರ್ನೂಲ್, ಗುಂಟೂರು, ನೆಲ್ಲೂರು, ಅಮದಾಲವಲಸ, ವಿಶಾಖಪಟ್ಟಣಂ ಮತ್ತು ಯಲಮಂಚಿಲಿಯ ಹಲವಾರು ಮಂದಿಯನ್ನು
ಪೊಲೀಸರು ಬಂಧಿಸಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *