ಭ್ರಷ್ಟಾಚಾರದ ವಿರುದ್ಧ ಸಮರ – 22 ತೆರಿಗೆ ಅಧಿಕಾರಿಗಳು ವಜಾ

Public TV
2 Min Read

– ಇತ್ತೀಚೆಗಷ್ಟೇ 27 ಅಧಿಕಾರಿಗಳನ್ನು ವಜಾ ಮಾಡಲಾಗಿತ್ತು

ನವದೆಹಲಿ: ಭ್ರಷ್ಟಾಚಾರ ಹಾಗೂ ಗಂಭೀರ ಅಕ್ರಮ ಎಸಗಿದ ಆರೋಪ ಹೊಂದಿದ್ದ 22 ತೆರಿಗೆ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ವಜಾ ಮಾಡಿ ಸೋಮವಾರ ಆದೇಶ ಹೊರಡಿಸಿದೆ.

ಭ್ರಷ್ಟಾಚಾರ ಕಿತ್ತೊಗೆಯಲು ಪ್ರಧಾನಿ ಮೋದಿಯವರ ವ್ಯವಸ್ಥೆಯ ಶುದ್ಧೀಕರಣದ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇತ್ತೀಚೆಗಷ್ಟೇ ಹಣಕಾಸು ಸಚಿವಾಲಯ 12 ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳನ್ನು ಸೇರಿ ಕಂದಾಯ ಇಲಾಖೆಯ ಒಟ್ಟು 27 ಹಿರಿಯ ಅಧಿಕಾರಿಗಳನ್ನು ವಜಾ ಮಾಡಿ ಕ್ರಮ ಕೈಗೊಂಡಿತ್ತು.

ಇದೀಗ ಕೇಂದ್ರ ನೇರ ತೆರಿಗೆ ಮತ್ತು ಸೀಮಾ ಸುಂಕ ಮಂಡಳಿ(ಸಿಬಿಐಸಿ) ಇದೀಗ ಸುಪರಿಂಟೆಂಡೆಂಟ್ ಹಾಗೂ ಆಡಳಿತಾಧಿಕಾರಿ ದರ್ಜೆಯ 22 ಹಿರಿಯ ಅಧಿಕಾರಿಗಳನ್ನು ಮೂಲಭೂತ ನಿಯಮ 56(ಜೆ) ಅಡಿ ಭಷ್ಟಾಚಾರ, ಇತರ ಆರೋಪಗಳು ಹಾಗೂ ಸಿಬಿಐ ಬಲೆಗೆ ಬಿದ್ದಿದ್ದರಿಂದ ಅವರು ಕಡ್ಡಾಯ ನಿವೃತ್ತಿ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.

ಈ ಮೂಲಕ ಭ್ರಷ್ಟಾಚಾರ ಹಾಗೂ ಇತರ ಗಂಭೀರ ಆರೋಪಗಳನ್ನು ಮಾಡಿದ ಅಧಿಕಾರಿಗಳಿಗೆ ಕೇವಲ ನೋಟಿಸ್ ಹಾಗೂ ಸಮನ್ಸ್ ನೀಡುವ ಸಂಸ್ಕೃತಿಗೆ ಸರ್ಕಾರ ತಿಲಾಂಜಲಿ ಹಾಡಿದ್ದು, ಭ್ರಷ್ಟಾಚಾರದಲ್ಲಿ ತೊಡಗುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಈ ಕುರಿತು ಖಡಕ್ ಎಚ್ಚರಿಕೆ ನೀಡಿದ್ದು, ಅಕ್ಟೋಬರ್ 1 ರಿಂದ ಆದಾಯ ತೆರಿಗೆ ಅಧಿಕಾರಿಗಳ ಎಲ್ಲ ನೋಟಿಸ್, ಸಮನ್ಸ್ ಹಾಗೂ ಆದೇಶಗಳು ಕೇಂದ್ರೀಕೃತ ಕಂಪ್ಯೂಟರ್ ವ್ಯವಸ್ಥೆಯ ಮೂಲಕ ನೀಡಲಾಗುವುದು. ಅಲ್ಲದೆ, ಕಂಪ್ಯೂಟರ್ ದಾಖಲೆಗಳು ವಿಶೇಷ ಗುರುತಿನ ಸಂಖ್ಯೆಯನ್ನು ಹೊಂದಿರುತ್ತವೆ ಎಂದು ತಿಳಿಸಿದ್ದಾರೆ.

ಕಂಪ್ಯೂಟರ್ ಜನರೇಟೆಡ್ ಡಿಐಎನ್ ಇಲ್ಲದೆ, ನಡೆಸಲಾಗುವ ಯಾವುದೇ ಸಂವಹನ ಕಾನೂನಿನಿಂದ ಹೊರಗುಳಿಯಲಿದೆ. ಅಲ್ಲದೆ, ಯಾವುದೇ ಕಂಪನಿ ಪ್ರತಿಕ್ರಿಯೆ ನೀಡಿದ ಮೂರು ತಿಂಗಳೊಳಗೆ ತೆರಿಗೆ ಇಲಾಖೆಯು ಆ ಪ್ರಕರಣವನ್ನು ನಿರ್ಧರಿಸದಿದ್ದಲ್ಲಿ ತೆರಿಗೆ ನೋಟಿಸ್ ತನ್ನ ಮೌಲ್ಯವನ್ನು ಕಳೆದುಕೊಳ್ಳಲಿದೆ ಎಂದು ಕಳೆದ ಬಾರಿಯ ಸುದ್ದಿಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮ್ ತಿಳಿಸಿದ್ದರು.

ಇತ್ತೀಚೆಗೆ ನಿವೃತ್ತಿ ಹೊಂದಿದ ಪರೋಕ್ಷ ತೆರಿಗೆ ಹಾಗೂ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳನ್ನು ಈ ಹಿಂದೆ ಕೇಂದ್ರ ತನಿಖಾ ದಳ(ಸಿಬಿಐ)ದ ಅಧಿಕಾರಿಗಳು ಬಂಧಿಸಿದ್ದರು. ಇದರಲ್ಲಿ ಇನ್ನೂ ಕೆಲವರ ವಿಚಾರಣೆಯನ್ನು ನಡೆಸಲಾಗುತ್ತಿದೆ.

22 ಅಧಿಕಾರಿಗಳಲ್ಲಿ 9 ಮಂದಿ ಭೋಪಾಲ್ ಮೂಲದವರಾಗಿದ್ದು, ಇವರು ಸಿಗರೇಟ್ ತಯಾರಿಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಸಿಗರೇಟ್‍ಗಳನ್ನು ರಹಸ್ಯವಾಗಿ ಉತ್ಪಾದಿಸಲು ಅನುಮತಿ ನೀಡಿರುವುದು ಮತ್ತು ಅವುಗಳನ್ನು ಸರಬರಾಜು ಮಾಡಲು ಅನುಕೂಲ ಮಡಿಕೊಡುತ್ತಿದ್ದ ಎಂಬ ಆರೋಪ ಎದುರಿಸುತ್ತಿದ್ದಾರೆ.

2003ರಲ್ಲಿ ಬೆಂಗಳೂರಿನ ಇನ್ನೊಬ್ಬ ಅಧಿಕಾರಿ ಮೊಬೈಲ್ ಸ್ಮಗ್ಲಿಂಗ್ ಹಾಗೂ ಕಂಪ್ಯೂಟರ್ ಬಿಡಿ ಭಾಗಗಳನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಲು ಸಂಚು ರೂಪಿಸಿದ್ದವರಿಗೆ ಸಹಾಯ ಮಾಡಿದ್ದರು. ಹೀಗಾಗಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯವು ಈ ವಸ್ತುಗಳನ್ನು ವಶಪಡಿಸಿಕೊಂಡು ಅಧಿಕಾರಿಯನ್ನು ವಜಾ ಮಾಡಲಾಗಿತ್ತು.

ದೆಹಲಿಯ ಇನ್ನೊಂದು ಪ್ರಕರಣದಲ್ಲಿ, ದೆಹಲಿಯ ಜಿಎಸ್‍ಟಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ತೆರಿಗೆ ಅಧಿಕಾರಿಯೊಬ್ಬರು ಕಳೆದ ವರ್ಷ ದುಬೈನಿಂದ 1,200 ಗ್ರಾಂ. ತೂಕದ 10 ಬಾರ್ ಚಿನ್ನವನ್ನು ಕಳ್ಳಸಾಗಣೆ ಮಾಡಲು ಸಹಾಯ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದರು. ಇವರನ್ನು ಕಸ್ಟಮ್ಸ್ ಅಧಿಕಾರಿಗಳು ಹಿಡಿದಿದ್ದರು.

ಹಣಕಾಸು ಇಲಾಖೆಯ 56 (ಜೆ) ನಿಯಮದ ಹಲವು ದಶಕಗಳಿಂದ ಅಸ್ವಿತ್ವದಲ್ಲಿದ್ದು ಇಲ್ಲಿಯವರೆಗೆ ಪರಿಣಾಮಕಾರಿಯಾಗಿ ಜಾರಿಯಾಗಿರಲಿಲ್ಲ. ಆದರೆ ಈಗ ಈ ನಿಯಮದ ಅಡಿ ನಿವೃತ್ತಿ ಪಡೆಯಲು ಸೂಚಿಸಿದ್ದು ಮಹತ್ವ ಎನಿಸಿಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *