ಎಕ್ಸ್‌ಪ್ರೆಸ್‌ವೇಗೆ ಸಿದ್ದರಾಮಯ್ಯ-ಮಹದೇವಪ್ಪ ಜೋಡಿ ರಸ್ತೆ ಅಂತ ಹೆಸರಿಡೋಣ: ಪ್ರತಾಪ್ ಸಿಂಹ ವ್ಯಂಗ್ಯ

Public TV
2 Min Read

ಮೈಸೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ರಸ್ತೆಗೆ (Bengaluru Mysuru Expressway) ಸಿದ್ದರಾಮಯ್ಯ ಇಷ್ಟು ಅನುದಾನ ಕೊಟ್ಟಿದ್ದೀನಿ ಅಂತ ಹೇಳಿಬಿಡಲಿ, ಅವರ ಹೆಸರನ್ನೇ ರಸ್ತೆಗೆ ಇಡೋಣ. ಬೇಕಿದ್ದರೆ ಸಿದ್ದರಾಮಯ್ಯ-ಮಹದೇವಪ್ಪ ಜೋಡಿ ರಸ್ತೆ ಅಂತಾನೇ ನಾಮಕರಣ ಮಾಡೋಣ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ವ್ಯಂಗ್ಯವಾಡಿದ್ದಾರೆ.

ಮೈಸೂರಿನಲ್ಲಿ (Mysuru) ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಎಕ್ಸ್‌ಪ್ರೆಸ್‌ವೇ ನಿರ್ಮಾಣ ಯೋಜನೆಗೆ 8,500 ಕೋಟಿ ರೂ. ಖರ್ಚಾಗಿದೆ. ಅದರಲ್ಲಿ ಸಿದ್ದರಾಮಯ್ಯ (Siddaramaiah) ಮತ್ತು ಮಹದೇವಪ್ಪ (HC Mahadevappa) ಅವರು ಎಂಟುವರೆ ರೂಪಾಯಿಯನ್ನೂ ಕೊಟ್ಟಿಲ್ಲ. ಅವರು ಇಷ್ಟು ಕೊಟ್ಟಿದ್ದೀನಿ ಅಂತ ಹೇಳಿದ್ರೆ ರಸ್ತೆಗೆ ಅವರ ಹೆಸರನ್ನೇ ಇಡೋಣ ಎಂದು ಕುಟುಕಿದ್ದಾರೆ.

ಎಕ್ಸ್‌ಪ್ರೆಸ್‌ವೇ ಹೆದ್ದಾರಿ ಆರಂಭವಾಗುವುದಕ್ಕೂ ಮುಂಚಿನಿಂದಲೂ ಕ್ರೆಡಿಟ್‌ ವಾರ್ ನಡೆಯುತ್ತಿದೆ. ಈ ವಿಚಾರದಲ್ಲಿ ಇತ್ತೀಚೆಗಷ್ಟೇ ಸಿಎಂ ವಿರುದ್ಧ ಸಿಂಹ ವಾಗ್ದಾಳಿ ನಡೆಸಿದ್ದರು. ಯಾರು ಬುರುಡೆ ಬಿಡುತ್ತಿದ್ದಾರೆ, ಖಾಲಿ ಡಬ್ಬ ಅಲ್ಲಾಡಿಸುತ್ತಿದ್ದಾರೆ ಎಂಬುದು ಆ ರಸ್ತೆಯಲ್ಲಿ ಓಡಾಡುತ್ತಿರುವ ಜನರಿಗೆ ಗೊತ್ತು. ರಸ್ತೆಯಲ್ಲಿ ನೀರು ತುಂಬಿದ್ದಾಗ, ಅಂಡರ್ ಪಾಸ್‌ನಲ್ಲಿ ನೀರು ತುಂಬಿದಾಗ ಬೈಯ್ದಿದ್ದು ಯಾರನ್ನಾ? ಆ ಸಮಸ್ಯೆ ಪರಿಹರಿಸಿದ್ದು ಯಾರು? ರಸ್ತೆಯಲ್ಲಿ ಅಪಘಾತ ಹೆಚ್ಚಾದಾಗ ಬೈಯ್ದಿದ್ದು ಯಾರನ್ನ? ಆ ಸಮಸ್ಯೆ ಬಗೆಹರಿಸಿದ್ದು ಯಾರು? ಬೈಯ್ದಿದ್ದು ಪ್ರತಾಪ್ ಸಿಂಹನನ್ನೇ ಸಮಸ್ಯೆ ಪರಿಹರಿಸಿದ್ದೂ ಪ್ರತಾಪ್ ಸಿಂಹನೇ ಎಂದು ತಿರುಗೇಟು ನೀಡಿದ್ದರು.

ಸಮಸ್ಯೆ ಆದಾಗ ಸಿದ್ದರಾಮಯ್ಯ, ಮಹಾದೇವಪ್ಪ ಆಗ ಎಲ್ಲಿ ಹೋಗಿದ್ದರು. 8,500 ಸಾವಿರ ಕೋಟಿ ರೂ. ಯೋಜನೆ ಇದು. ಈ ಪ್ರಾಜೆಕ್ಟ್ಗೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ 8 ರೂಪಾಯಿನಾದ್ರೂ ಕೊಟ್ಟಿದ್ದರೆ ಸಿದ್ದರಾಮಯ್ಯ-ಮಹಾದೇವಪ್ಪ ಜೋಡಿ ರಸ್ತೆ ಅಂತಾ ಬೇಕಾದರೆ ಹೆಸರಿಡೋಣ ಎಂದು ಸವಾಲ್ ಹಾಕಿದ್ದರು. ಇದನ್ನೂ ಓದಿ: ಆ ಪ್ರಶ್ನೆ ಬಿಟ್ಟು ಬೇರೆ ಏನಾದರೂ ಇದ್ದರೆ ಕೇಳಿ: ಪ್ರತಾಪ್‌ ಸಿಂಹ

ಇದು ಮೋದಿ ಹೈವೆ, ನಾನು ಮೇಸ್ತ್ರಿ: ಇದು ನನ್ನ ರಸ್ತೆಯಲ್ಲ, ಮೋದಿ (Narendra Modi) ಅವರ ರಸ್ತೆ. ನಾನು ಒಬ್ಬ ಮೇಸ್ತ್ರಿ. ಮೋದಿ ಅವರ ಹೈವೆ ಇದು. ನಾನು ಮೋದಿ ಹೇಳಿದ ಕೆಲಸ ಮಾಡುವ ಮೇಸ್ತ್ರಿ ಎಂದು ಹೇಳಿದ್ದರು. ಇದನ್ನೂ ಓದಿ: ಪ್ರತಾಪ್‌ ಸಿಂಹ ಅವ್ರು ಯಾವ ಹಿನ್ನೆಲೆಯಲ್ಲಿ ಪಾಸ್‌ ಕೊಟ್ಟರು ಎಲ್ಲವೂ ತನಿಖೆ ಆಗುತ್ತೆ: ಪ್ರಹ್ಲಾದ್‌ ಜೋಶಿ

Share This Article