– ಪ್ರಕರಣದ ತನಿಖೆ ಸಿಬಿಐಗೆ ಒಪ್ಪಿಸಿದ್ದ ಸುಪ್ರೀಂ ಕೋರ್ಟ್
– ತಿಂಗಳೊಳಗೆ ಆರೋಪಿಗಳ ಬಂಧನಕ್ಕೆ ಆದೇಶಿಸಿದ್ದ ನ್ಯಾಯಾಲಯ
ಶ್ರೀನಗರ: ಕಾಶ್ಮೀರದ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರಿಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ (Custodial Violence) ನೀಡಿದ ಆರೋಪದ ಮೇಲೆ ಪೊಲೀಸ್ ಉಪ ವರಿಷ್ಠಾಧಿಕಾರಿ ಮತ್ತು ಇನ್ಸ್‌ಪೆಕ್ಟರ್ ಸೇರಿದಂತೆ 6 ಪೊಲೀಸರನ್ನು ಹಾಗೂ ಇಬ್ಬರು ನಾಗರಿಕರನ್ನು ಕೇಂದ್ರ ತನಿಖಾ ದಳ (CBI) ಬಂಧಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾನ್ಸ್‌ಟೇಬಲ್ ಖುರ್ಷೀದ್ ಅಹ್ಮದ್ ಚೌಹಾಣ್ ಅವರ ಮೇಲೆ ನಡೆದಿದ್ದ ಚಿತ್ರಹಿಂಸೆಯನ್ನು ಗಂಭೀರವಾಗಿ ಪರಿಗಣಸಿದ್ದ ಸುಪ್ರೀಂ ಕೋರ್ಟ್ (Supreme Court) ಜು.21ರಂದು ಬಂಧನಕ್ಕೆ ನಿರ್ದೇಶನ ನೀಡಿತ್ತು. ಕೋರ್ಟ್‌ನ ಆದೇಶದ ಅನ್ವಯ ಕುಪ್ವಾರಾದ ಜಂಟಿ ವಿಚಾರಣಾ ಕೇಂದ್ರದ ಡಿಎಸ್ಪಿ ಐಜಾಜ್ ಅಹ್ಮದ್ ನಾಯ್ಕು ಮತ್ತು ಸಬ್ ಇನ್ಸ್‌ಪೆಕ್ಟರ್ ರಿಯಾಜ್ ಅಹ್ಮದ್, ಜಹಾಂಗೀರ್ ಅಹ್ಮದ್, ಇಮ್ತಿಯಾಜ್ ಅಹ್ಮದ್, ಮೊಹಮ್ಮದ್ ಯೂನಿಸ್ ಮತ್ತು ಶಾಕಿರ್ ಅಹ್ಮದ್ ಸೇರಿದಂತೆ ಇಬ್ಬರು ನಾಗರೀಕರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರದ ಪೇದೆಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ – ಸಿಬಿಐ ತನಿಖೆಗೆ ಆದೇಶಿಸಿದ ಸುಪ್ರೀಂ ಕೋರ್ಟ್
ಕಾನ್ಸ್‌ಟೇಬಲ್ ಖುರ್ಷೀದ್ ಅಹ್ಮದ್ ಚೌಹಾಣ್, ತಮ್ಮನ್ನು 2023 ರಲ್ಲಿ ಕುಪ್ವಾರಾದಲ್ಲಿ ಹಲವಾರು ದಿನಗಳ ಕಾಲ ಅಕ್ರಮವಾಗಿ ಬಂಧಿಸಲಾಗಿತ್ತು. ಈ ಸಮಯದಲ್ಲಿ ಖಾಸಗಿ ಭಾಗಗಳನ್ನು ವಿರೂಪಗೊಳಿಸುವುದು ಸೇರಿದಂತೆ, ಅಮಾನವೀಯವಾಗಿ ಅಧಿಕಾರಿಗಳು ವರ್ತಿಸಿದ್ದರು ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಏನಿದು ಪ್ರಕರಣ?
ಮಾದಕವಸ್ತು ಪ್ರಕರಣದಲ್ಲಿ ಸಮನ್ಸ್ ನೀಡಿದ ಬಳಿಕ ತಮ್ಮ ಪತಿಯನ್ನು ಅಕ್ರಮವಾಗಿ ಬಂಧಿಸಿ 6 ದಿನಗಳ ಕಾಲ ಚಿತ್ರ ಹಿಂಸೆ ನೀಡಲಾಗಿತ್ತು ಎಂದು ಚೌಹಣ್ ಅವರ ಪತ್ನಿ ರುಬೀನಾ ಅಖ್ತರ್ ದೂರು ದಾಖಲಿಸಿದ್ದರು. ಅಲ್ಲದೇ ಪತಿ ಮೇಲೆ ಕಬ್ಬಿಣದ ಸಲಾಕೆ ಹಾಗೂ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದರು. ಎಲೆಕ್ಟ್ರಿಕ್ ಶಾಕ್ ನೀಡಲಾಗಿತ್ತು ಎಂದು ಆರೋಪಿಸಿದ್ದರು. ಈ ಪ್ರಕರಣದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಕಳೆದ ಜುಲೈನಲ್ಲಿ ವಿಚಾರಣೆ ನಡೆಸಿತ್ತು.
ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ, ಕಸ್ಟಡಿ ಹಿಂಸಾಚಾರದಲ್ಲಿ ಭಾಗಿಯಾದ ಆರೋಪಿ ಅಧಿಕಾರಿಗಳನ್ನು ಒಂದು ತಿಂಗಳೊಳಗೆ ಬಂಧಿಸಬೇಕು. ಅಲ್ಲದೇ ತನಿಖೆಯನ್ನು 3 ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಆದೇಶಿಸಿತ್ತು. ಇದನ್ನೂ ಓದಿ: ಪೋಕ್ಸೊ ಪ್ರಕರಣದಲ್ಲಿ ಮಹಿಳೆಗೆ 20 ವರ್ಷ ಜೈಲು