ಹಳಸಿದ ದಾಲ್‌ ಬಡಿಸಿದ್ದಕ್ಕೆ ಶಾಸಕನಿಂದ ಕ್ಯಾಂಟೀನ್‌ ಸಿಬ್ಬಂದಿ ಮೇಲೆ ಹಲ್ಲೆ – ಕ್ಯಾಂಟೀನ್‌ ಲೈಸೆನ್ಸೇ ರದ್ದು

Public TV
1 Min Read

ಮುಂಬೈ: ಹಳಸಿದ ದಾಲ್‌ ನೀಡಿದ ಆರೋಪದಲ್ಲಿ ಶಿವಸೇನಾ ಶಾಸಕನಿಂದ ಕ್ಯಾಂಟೀನ್‌ ಸಿಬ್ಬಂದಿ ಹಲ್ಲೆಗೊಳಗಾಗಿದ್ದ ಸುದ್ದಿ ಸದ್ದು ಮಾಡಿತ್ತು. ಈಗ ಆ ಕ್ಯಾಂಟೀನ್‌ ಪರವಾನಗಿಯನ್ನೇ ರದ್ದು ಮಾಡಲಾಗಿದೆ.

ಕ್ಯಾಂಟೀನ್‌ನ ಪರವಾನಗಿಯನ್ನು ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಮಂಡಳಿ ರದ್ದುಗೊಳಿಸಿದೆ. ಹಳಸಿದ ದಾಳ್‌ ನೀಡಿದ್ದಾರೆಂದು ಆರೋಪಿಸಿ ಶಾಸಕ ಸಂಜಯ್ ಗಾಯಕ್ವಾಡ್, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆ ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಗಿದ್ದು, ಶಿವಸೇನಾ ನಾಯಕನ ನಡವಳಿಕೆಗೆ ಖಂಡನೆ ವ್ಯಕ್ತವಾಗಿದೆ.

ಶಾಸಕರು ಸಿಬ್ಬಂದಿ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಪರೀಕ್ಷೆಗಾಗಿ ಆಹಾರದ ಮಾದರಿಗಳನ್ನು ಸಂಗ್ರಹಿಸಿದ ಕೆಲವೇ ಗಂಟೆಗಳ ನಂತರ ಪರವಾನಗಿ ರದ್ದುಗೊಳಿಸುವ ನಿರ್ಧಾರ ಬಂದಿದೆ. ಹಳಸಿದ ಆಹಾರವನ್ನು ನೀಡಲಾಗಿತ್ತು ಎಂದು ಶಾಸಕ ಗಂಭೀರ ಆರೋಪ ಮಾಡಿದ್ದಾರೆ.

ಶಾಸಕರು ಈ ಕೃತ್ಯವನ್ನು ಸಮರ್ಥಿಸಿಕೊಂಡರು. ಅದಾದ ನಂತರ, ಆಹಾರದ ಗುಣಮಟ್ಟವನ್ನು ಪರೀಕ್ಷಿಸಲು FDA ಮಾದರಿಗಳನ್ನು ಸಂಗ್ರಹಿಸಿತು. ಅಡುಗೆಮನೆಯ ನೆಲದ ಮೇಲೆ ತ್ಯಾಜ್ಯ ವಸ್ತುಗಳು ಬಿದ್ದಿರುವುದು ಕಂಡುಬಂದಿದ್ದು, ಅದನ್ನು ಸರಿಯಾಗಿ ಸ್ವಚ್ಛಗೊಳಿಸಲಾಗಿಲ್ಲ. ಮಾಂಸಾಹಾರ ಮತ್ತು ತರಕಾರಿ ತಯಾರಿಕೆಗೆ ಸೂಕ್ತ ಪ್ರತ್ಯೇಕ ವ್ಯವಸ್ಥೆಗಳಿಲ್ಲ. ಕೆಲಸಗಾರರಿಗೆ ಬಟ್ಟೆ ಬದಲಾಯಿಸುವ ಕೊಠಡಿ ಇಲ್ಲ. ತೆರೆದ ಕಸದ ಬುಟ್ಟಿಗಳು, ನೆಲದ ಮೇಲೆ ಮೊಟ್ಟೆಯ ಚಿಪ್ಪುಗಳು ಮತ್ತು ಕಸದ ಬುಟ್ಟಿಗಳ ಬಳಿ ಇರಿಸಲಾದ ಸಿದ್ಧಪಡಿಸಿದ ಆಹಾರ, ಕಾರ್ಮಿಕರು ಕೈಗವಸುಗಳು ಮತ್ತು ಸಮವಸ್ತ್ರಗಳಿಲ್ಲದೇ ಕೆಲಸ ಮಾಡುತ್ತಿರುವುದು.. ಮೊದಲಾದ ಅವ್ಯವಸ್ಥೆ ಗಮನಿಸಿ ಈ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಲಾಗಿದೆ.

Share This Article