T20 World Cup: ಸ್ಕಾಟ್‌ಲೆಂಡ್‌ ಬಳಿಕ ಐರ್ಲೆಂಡ್‌ ಜೆರ್ಸಿಯಲ್ಲಿ ಮಿಂಚಿದ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್‌!

Public TV
3 Min Read

– 5 ವಿದೇಶಿ ತಂಡಗಳಿಗೆ ಭಾರತದ ಹಾಲು ಉತ್ಪನ್ನ ಸಂಸ್ಥೆಗಳಿಂದ ಪ್ರಾಯೋಕತ್ವ

ನವದೆಹಲಿ: ಸ್ಕಾಟ್‌ಲೆಂಡ್‌ ಬಳಿಕ ತನಗೆ ಪ್ರಾಯೋಜಕತ್ವ ವಹಿಸಿರುವ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ (KMF) ಬ್ರ್ಯಾಂಡ್‌ ಲೋಗೋ ಹೊಂದಿದ ಹೊಸ ಜೆರ್ಸಿಯನ್ನು (Ireland Jersey) ಐರ್ಲೆಂಡ್‌ ಕ್ರಿಕೆಟ್‌ ತಂಡ ಅನಾವರಣಗೊಳಿಸಿದೆ. ಈ ಮೂಲಕ ವಿದೇಶಗಳಲ್ಲೂ ಕರ್ನಾಟಕದ ನಂದಿನಿ ಬ್ರ್ಯಾಂಡ್‌ ರಾರಾಜಿಸುವಂತಾಗಿದೆ.

ವೆಸ್ಟ್‌ ಇಂಡೀಸ್‌ ಹಾಗೂ ಯುಎಸ್‌ಎ ಆತಿಥ್ಯದಲ್ಲಿ ಆರಂಭಗೊಂಡಿರುವ 2024ರ ಟಿ20 ವಿಶ್ವಕಪ್‌ ಟೂರ್ನಿಗಾಗಿ ಐರ್ಲೆಂಡ್‌ ಮತ್ತು ಸ್ಕಾಟ್‌ಲೆಂಡ್‌ ತಂಡಗಳಿಗೆ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ ಪ್ರಾಯೋಜಕತ್ವ ವಹಿಸಿದೆ. ಐರ್ಲೆಂಡ್‌ ಬಿಡುಗಡೆಗೊಳಿಸಿದ ಕಡು ಹಸಿರು ಜೆರ್ಸಿಯ ತೋಳಿನ ಮೇಲ್ಭಾಗದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳಲ್ಲೂ ʻನಂದಿನಿʼ ಬ್ರ್ಯಾಂಡ್‌ (Nandini Brand) ಲೋಗೋವನ್ನ ಮುದ್ರಿಸಲಾಗಿದೆ. ಜೊತೆಗೆ ಕೋಚ್‌ಗಳಿಗೆ ವಿತರಿಸಲಾದ ಜೆರ್ಸಿಯಲ್ಲಿ ಎದೆಯ ಭಾಗದ ಮೇಲ್ಭಾಗದಲ್ಲಿ ದೊಡ್ಡ ಪ್ರಮಾಣದ ಲೋಗೋಗಳನ್ನ ಮುದ್ರಿಸಿರುವುದು ಕಂಡುಬಂದಿದೆ. ಇದನ್ನೂ ಓದಿ: ಬಾಂಗ್ಲಾ ವಿರುದ್ಧ ಟೀಂ ಇಂಡಿಯಾಗೆ 60 ರನ್‌ಗಳ ಭರ್ಜರಿ ಜಯ

ಒಟ್ಟಿನಲ್ಲಿ ಕರ್ನಾಟಕದ ಮನೆ-ಮನಗಳಲ್ಲಿ ಹೆಸರುವಾಸಿಯಾಗಿದ್ದ ನಂದಿನಿ ಬ್ರ್ಯಾಂಡ್‌ ಇದೀಗ ವಿದೇಶಗಳಲ್ಲಿ ತನ್ನ ಕೀರ್ತಿಪತಾಕೆ ಹಾರಿಸುವತ್ತ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಮೂಲಗಳ ಪ್ರಕಾರ, ಈ ಎರಡೂ ತಂಡಗಳ ಪ್ರಾಯೋಜಕತ್ವಕ್ಕೆ ಕೆಎಂಎಫ್‌ ತಲಾ 2.5 ಕೋಟಿ ರೂ. ವಿನಿಯೋಗಿಸಿದೆ ಎಂದು ತಿಳಿದುಬಂದಿದೆ. ಆದ್ರೆ ಈ ಬಗ್ಗೆ ಕೆಎಂಎಫ್‌ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಇದನ್ನೂ ಓದಿ: ಭಾರತ vs ಪಾಕಿಸ್ತಾನ T20 ವಿಶ್ವಕಪ್ ಪಂದ್ಯಕ್ಕೆ ಬೆದರಿಕೆ ಕರೆ – ಕ್ರೀಡಾಂಗಣದಲ್ಲಿ ಭದ್ರತೆ ಹೆಚ್ಚಳ

5 ವಿದೇಶಿ ತಂಡಗಳಿಗೆ ಭಾರತೀಯ ಸಂಸ್ಥೆ ಪ್ರಾಯೋಜಕತ್ವ:
ಭಾರತದ ಅಮುಲ್‌ ಪ್ರಸಕ್ತ ಟಿ20 ವಿಶ್ವಕಪ್‌ (T20 World Cup) ಟೂರ್ನಿಯಲ್ಲಿ ಶ್ರೀಲಂಕಾ, ದಕ್ಷಿಣ ಆಫ್ರಿಕಾ ಹಾಗೂ ಯುಎಸ್‌ಎ ತಂಡಗಳನ್ನ ಪ್ರಾಯೋಜಿಸುತ್ತಿದ್ದರೆ, ನಂದಿನಿ ಸ್ಕಾಟ್‌ಲೆಂಡ್‌ ಹಾಗೂ ಐರ್ಲೆಂಡ್‌ ತಂಡಗಳಿಗೆ ಪ್ರಾಯೋಜಕತ್ವ ವಹಿಸಿದೆ. ಒಟ್ಟಿನಲ್ಲಿ ಭಾರತೀಯ ಎರಡು ಹಾಲು ಉತ್ಪನ್ನ ಸಂಸ್ಥೆಗಳು 5 ತಂಡಗಳಿಗೆ ಪ್ರಾಯೋಜಕತ್ವ ವಹಿಸುತ್ತಿರುವುದು ದೇಶದ ಮತ್ತೊಂದು ಹೆಗ್ಗಳಿಕೆಯಾಗಿದೆ.

ನಂದಿನಿ ‌ಪ್ರಾಯೋಜಕತ್ವದ ಕುರಿತು ಪ್ರತಿಕ್ರಿಯೆ ನೀಡಿರುವ ಕ್ರಿಕೆಟ್ ಐರ್ಲೆಂಡ್‌ (Cricket Ireland) ಸಂಸ್ಥೆ ಮುಖ್ಯ ಹಣಕಾಸು ಅಧಿಕಾರಿ ಆಂಡ್ರ್ಯೂ, ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ ಪ್ರಾಯೋಕತ್ವವು ಸಂತಸ ತಂದಿದೆ. ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅಧಿಕೃತ ಪ್ರಾಯೋಜಕರಾಗಿ ನಂದಿನಿಯನ್ನು ಘೋಷಿಸಲು ಸಂತೋಷವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವದ ನಂ.1 ಮ್ಯಾಗ್ನಸ್‌ ಕಾರ್ಲ್‌ಸನ್‌ಗೆ ಸೋಲುಣಿಸಿದ ಗ್ರ್ಯಾಂಡ್‌ಮಾಸ್ಟರ್‌ ಪ್ರಜ್ಞಾನಂದ!

ಇನ್ನೂ ನಂದಿನಿಯ ಮಾತೃಸಂಸ್ಥೆಯಾದ ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ ಜಗದೀಶ್ ಮಾತನಾಡಿ, ಟಿ20 ವಿಶ್ವಕಪ್ ಅಭಿಯಾನಕ್ಕಾಗಿ ಐರ್ಲೆಂಡ್ ಕ್ರಿಕೆಟ್ ತಂಡದೊಂದಿಗೆ ನಮ್ಮ ಪಾಲುದಾರಿಕೆಯನ್ನು ಘೋಷಿಸಲು ನಮಗೆ ತುಂಬಾ ಸಂತೋಷವಾಗಿದೆ. ನಂದಿನಿ, ಒಂದು ಬ್ರಾಂಡ್‌ನಂತೆ, ಶ್ರೇಷ್ಠತೆ ಮತ್ತು ಶುದ್ಧತೆಯನ್ನೂ ಪ್ರತಿನಿಧಿಸುತ್ತದೆ. ಕಳೆದ 40 ವರ್ಷಗಳಲ್ಲಿ, ನಾವು ಜಾಗತಿಕ ಉಪಸ್ಥಿತಿಗೆ ವಿಸ್ತರಿಸಿದ್ದೇವೆ. ಆದ್ರೆ ವಿಶ್ವಕಪ್‌ಗಾಗಿ ಐರ್ಲೆಂಡ್‌ ಕ್ರಿಕೆಟ್‌ ಸಂಸ್ಥೆಯೊಂದಿಗಿನ ನಮ್ಮ ಪ್ರಾಯೋಜಕತ್ವವು ಜಾಗತಿಕ ಕ್ರಿಕೆಟ್‌ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಲು ಅನುವು ಮಾಡಿಕೊಟ್ಟಿದೆ. ಈ ಮೂಲಕ ನಮ್ಮ ಬ್ರ್ಯಾಂಡ್ ಅನ್ನು ವಿಶ್ವದಾದ್ಯಂತ ಹೆಚ್ಚಿನ ದೇಶಗಳಿಗೆ ವಿಸ್ತರಿಸುವಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Share This Article