ರಾಮನಗರ ಆಯ್ತು, ಈಗ ಬೆಂಗಳೂರು ದಕ್ಷಿಣ ಜಿಲ್ಲೆಗೆ ಕುಣಿಗಲ್ ವಿಲೀನ?

Public TV
2 Min Read

ತುಮಕೂರು: ರಾಮನಗರವನ್ನು (Ramangara) ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ವಿಲೀನಗೊಳಿಸಲಾಗಿದೆ. ಈಗ ತುಮಕೂರು ಜಿಲ್ಲೆಯ ಕುಣಿಗಲ್ (Kunigal) ತಾಲೂಕು ವಿಲೀನಗೊಳ್ಳುತ್ತಾ ಎಂಬ ಪ್ರಶ್ನೆ ಎದ್ದಿದೆ. ಕುಣಿಗಲ್ ತಾಲೂಕನ್ನೂ ಬೆಂಗಳೂರು ದಕ್ಷಿಣ (Bengaluru South) ಜಿಲ್ಲೆಯಲ್ಲಿ ವಿಲೀನಗೊಳಿಸುವ ಕಸರತ್ತು ಆರಂಭಗೊಂಡಿದೆ.

ಹೌದು. ಕುಣಿಗಲ್ ತಾಲೂಕನ್ನು ಸಂಪೂರ್ಣವಾಗಿ ತುಮಕೂರು (Tumakuru) ಜಿಲ್ಲೆಯಿಂದ ಬೇರ್ಪಡಿಸಿ ಬೆಂಗಳೂರು ಜಿಲ್ಲೆಯಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ಸದ್ದಿಲ್ಲದೆ ನಡೆದಿದೆ. ಇದಕ್ಕೆ ಪುಷ್ಠಿಕೊಡುವಂತೆ ʼಬೆಂಗಳೂರಿಗೆ ಕುಣಿಗಲ್ ಸೇರ್ಪಡೆ ಸಮಿತಿʼ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ. ಈ ಮನವಿ ಆಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ (CM Siddaramaiah) ವಿಶೇಷಾಧಿಕಾರಿ ಶಾಂತಪ್ಪನವರು ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿಗಳಿಗೆ ಕ್ರಮಕೈಗೊಳ್ಳುವಂತೆ ಪತ್ರ ಬರೆದಿದ್ದಾರೆ.

ಸದ್ಯ ಈ ಪತ್ರ ವೈರಲ್ ಆಗಿದ್ದು ಕುಣಿಗಲ್ ತಾಲೂಕಿನ ಜನರಲ್ಲಿ ಆಕ್ರೋಶ ಹುಟ್ಟುಹಾಕಿದೆ. ರಾಮನಗರವನ್ನು ಬೆಂಗಳೂರು ಜಿಲ್ಲೆಗೆ ವಿಲೀನಗೊಳಿಸಿದ ಡಿಕೆ ಬ್ರದರ್ಸ್ ಕುಣಿಗಲ್‌ನ್ನೂ ದೋಚಲು ಹವಣಿಸುತಿದ್ದಾರೆ ಎಂದು ಹೋರಾಟಗಾರ ಜಿ.ಕೆ ನಾಗಣ್ಣ ಸಿಟ್ಟು ಹೊರಹಾಕಿದ್ದಾರೆ.

ಕುಣಿಗಲ್ ತಾಲೂಕು ತುಮಕೂರು ಜಿಲ್ಲಾ ಕೇಂದ್ರಕ್ಕೆ 38 ಕಿ.ಮೀ ಸಮೀಪದಲ್ಲಿದೆ. ಬೆಂಗಳೂರಿಗೆ 72 ಕಿ.ಮೀ ದೂರದಲ್ಲಿದೆ. ಆದಾಗ್ಯೂ ವ್ಯವಹಾರಿಕ, ಔದ್ಯೋಗಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಸಂಬಂಧಗಳು ಬೆಂಗಳೂರಿನೊಂದಿಗೆ ಹೆಚ್ಚಾಗಿದೆ. ಉದ್ಯೋಗ ಅರಸಿ ಹೋದ ಲಕ್ಷಾಂತರ ಕುಟುಂಬ ಬೆಂಗಳೂರಲ್ಲೇ ನೆಲೆ ಕಂಡಿವೆ. ತಾಲೂಕಿನ ಜನ ಉದ್ಯೋಗ ಅರಸಿ ಮತ್ತು ವಿದ್ಯಾಭ್ಯಾಸಕ್ಕಾಗಿ ಹಾಗೂ ವಾಣಿಜ್ಯ ವ್ಯವಹಾರಕ್ಕಾಗಿ ಪ್ರತಿ ದಿನ ಬೆಂಗಳೂರಿಗೆ ಹೋಗಿ ಬರುತ್ತಿದ್ದಾರೆ.

ಈಗಾಗಲೇ ಕುಣಿಗಲ್ ತಾಲೂಕು ಬೆಂಗಳೂರು ಗ್ರಾಮಾಂತರ (Bengaluru Rural) ಲೋಕಾಸಭಾ ವ್ಯಾಪ್ತಿಗೆ ಸೇರುತ್ತದೆ. ತುಮಕೂರಿನ ಹೇಮಾವತಿ ನೀರನ್ನು ರಾಮನಗರಕ್ಕೆ ಕೊಂಡೊಯ್ಯುವಂತೆ ಜಿಲ್ಲೆಯನ್ನೂ ಇಬ್ಬಾಗ ಮಾಡಲು ಡಿಕೆ ಬ್ರದರ್ಸ್ ಮುಂದಾಗಿದ್ದಾರೆ. ಸಂಬಂಧಿ ಕುಣಿಗಲ್ ಶಾಸಕ ಡಾ. ರಂಗನಾಥರಿಂದ ಡಿಕೆ ಶಿವಕುಮಾರ್‌ (DK Shivakumar) ಈ ಕೆಲಸ ಮಾಡುತಿದ್ದಾರೆ ಎಂಬ ಆರೋಪ ಬಂದಿದೆ.

ಆಡಳಿತಾತ್ಮಕವಾಗಿ ಕುಣಿಗಲ್ ತಾಲೂಕಿಗೆ ತುಮಕೂರು ಹತ್ತಿರವಿರುವುದರಿಂದ ತಾಲೂಕಿನ ಜನರಿಗೆ ಸಾಕಷ್ಟು ಅನುಕೂಲವಿದೆ. ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸಿದರೆ ತಾಲೂಕಿನ ಜನರಿಗೆ ಸಾಕಷ್ಟು ತೊಂದರೆ ಉಂಟಾಗಲಿದೆ. ಹಾಗಾಗಿ ಕುಣಿಗಲ್ ತಾಲೂಕನ್ನು ತುಮಕೂರು ಜಿಲ್ಲೆಗೆ ಉಳಿಸಿಕೊಳ್ಳಬೇಕೆಂದು ಜನ ಒತ್ತಾಯಿಸಿದ್ದಾರೆ. ಈ ಪ್ರಸ್ತಾಪಕ್ಕೆ ಶಾಸಕ ರಂಗನಾಥ್‌ ಅವರು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಜೊತೆ ಕುಣಿಗಲ್‌ ವಿಲೀನಗೊಳ್ಳುತ್ತಾ? ಇಲ್ವೋ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.

Share This Article