5,000 ವಿದ್ಯಾರ್ಥಿಗಳಿಗೆ ವಿಷವುಣಿಸಿದ ಬಳಿಕ ಇರಾನ್‌ನಲ್ಲಿ ಕಿಡಿಗೇಡಿಗಳ ಬಂಧನ ಪ್ರಾರಂಭ

Public TV
2 Min Read

ಟೆಹ್ರಾನ್: ಕಳೆದ ವರ್ಷ ನವೆಂಬರ್‌ನಿಂದ ಇರಾನ್‌ನಲ್ಲಿ (Iran) ಹೆಣ್ಣುಮಕ್ಕಳಿಗೆ ಶಾಲೆಗೆ ಹೋಗದಂತೆ ತಡೆಯಲು ನಿಗೂಢವಾಗಿ ವಿಷವುಣಿಸಲಾಗುತ್ತಿತ್ತು. ದೇಶಾದ್ಯಂತ ಸುಮಾರು 5,000 ವಿದ್ಯಾರ್ಥಿಗಳು (Students) ವಿಷಪ್ರಾಶನಕ್ಕೊಳಗಾಗಿ (Poisoning) ಅಸ್ವಸ್ಥರಾದ ಬಳಿಕ ಇದೀಗ ಅಲ್ಲಿನ ಗುಪ್ತಚರ ಸಂಸ್ಥೆ ಘಟನೆಗೆ ಸಂಬಂಧಪಟ್ಟಂತೆ ಮೊದಲ ಬಾರಿ ಬಂಧನ ಕಾರ್ಯವನ್ನು ಪ್ರಾರಂಭಿಸಿದೆ.

ಇರಾನ್‌ನ ಸುಮಾರು 6 ಪ್ರಾಂತ್ಯಗಳಲ್ಲಿ ವಿದ್ಯಾರ್ಥಿನಿಯರಿಗೆ ವಿಷವುಣಿಸಿದ ಆರೋಪದ ಮೇಲೆ ಕೆಲ ವಿದ್ಯಾರ್ಥಿನಿಯರ ಪೋಷಕರು ಸೇರಿದಂತೆ ಹಲವರನ್ನು ಬಂಧನ ಮಾಡಲಾಗಿದೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ. ವರದಿಗಳ ಪ್ರಕಾರ, ಇರಾನ್‌ನ ಉಪ ಆಂತರಿಕ ಸಚಿವ ಮಜಿದ್ ಮಿರಹ್ಮಾಡಿ, ಗುಪ್ತಚರ ಸಂಸ್ಥೆಗಳು ಆರೋಪಿಗಳ ಬಂಧನ ಕಾರ್ಯವನ್ನು ಪ್ರಾರಂಭಿಸಿದೆ. ಹಲವರನ್ನು ಈಗಾಗಲೇ ಬಂಧನ ಮಾಡಲಾಗಿದೆ. ಸಂಬಂಧಿತ ಏಜೆನ್ಸಿಗಳು ಘಟನೆ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

ಖುಜೆಸ್ತಾನ್, ಪಶ್ಚಿಮ ಅಜೆರ್ಬೈಜಾನ್, ಫಾರ್ಸ್, ಕೆರ್ಮಾನ್ಶಾ, ಖೊರಾಸನ್ ಹಾಗೂ ಅಲ್ಬೋರ್ಜ್ ಪ್ರದೇಶಗಳಲ್ಲಿ ಹಲವರ ಬಂಧನವಾಗಿದೆ. ನವೆಂಬರ್‌ನಲ್ಲಿ ಹಿಜಬ್ ಅನ್ನು ಸರಿಯಾಗಿ ಧರಿಸದೇ ಇದ್ದುದಕ್ಕೆ ಮಹ್ಸಾ ಅಮಿನಿ ಎಂಬ ಯುವತಿ ಬಂಧನವಾಗಿ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಳು. ಈ ಸಾವಿನ ಬಳಿಕ ಇರಾನ್‌ನಾದ್ಯಂತ ಭಾರೀ ಪ್ರತಿಭಟನೆ ನಡೆದು, ಹಲವರು ಸಾವನ್ನಪ್ಪಿದ್ದರು. ಈ ಘಟನೆಯ ಬೆನ್ನಲ್ಲೇ ವಿದ್ಯಾರ್ಥಿನಿಯರಿಗೆ ಶಾಲೆಗೆ ಹೋಗದಂತೆ ತಡೆಯಲು ವಿಷಪ್ರಾಶನ ಮಾಡಿರುವುದಾಗಿ ವರದಿಯಾಗಿದೆ.

ಕಳೆದ ವರ್ಷ ನವೆಂಬರ್ ಅಂತ್ಯದ ವೇಳೆಗೆ ಇರಾನ್‌ನ ಶಿಯಾ ಮುಸ್ಲಿಂ ನಗರವಾದ ಕೋಮ್‌ನಲ್ಲಿ ಮೊದಲ ಬಾರಿ ವಿದ್ಯಾರ್ಥಿನಿಯರಿಗೆ ವಿಷವುಣಿಸಿರುವ ಘಟನೆ ವರದಿಯಾಗಿತ್ತು. ಪ್ರಾರಂಭದಲ್ಲಿ ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿಲ್ಲ, ಇದು ಆಕಸ್ಮಿಕ ಎಂದು ಹೇಳಲಾಯಿತಾದರೂ ಬಳಿಕ ಇಂತಹುದೇ ಘಟನೆ ದೇಶದೆಲ್ಲೆಡೆ ವರದಿಯಾಗುತ್ತಲೇ ಹೋಯಿತು. ಇದರಿಂದ ವಿದ್ಯಾರ್ಥಿನಿಯರು ಶಾಲೆಗೆ ಹೋಗುವುದನ್ನು ತಡೆಯಲು ಈ ಕೃತ್ಯ ಮಾಡಲಾಗುತ್ತಿದೆ ಎಂಬುದು ಬಯಲಿಗೆ ಬಂದಿತು. ಇದನ್ನೂ ಓದಿ: PublicTV Explainer: ಇರಾನ್‌ನಲ್ಲಿ ಹಿಜಬ್‌ ವಿರುದ್ಧದ ಹೋರಾಟದ ಹೊತ್ತಲ್ಲೇ ನೂರಾರು ಶಾಲಾ ವಿದ್ಯಾರ್ಥಿನಿಯರಿಗೆ ವಿಷವಿಕ್ಕಿದ ದುರುಳರು – ಏನಾಗ್ತಿದೆ ಅಲ್ಲಿ?

ಇರಾನ್‌ನ 31 ಪ್ರಾಂತ್ಯಗಳ ಪೈಕಿ 25 ಪ್ರಾಂತ್ಯಗಳಲ್ಲಿ ವಿದ್ಯಾರ್ಥಿನಿಯರಿಗೆ ವಿಷವುಣಿಸಿರುವ ಪ್ರಕರಣ ವರದಿಯಾಗಿದೆ. ಸುಮಾರು 230 ಶಾಲೆಗಳಲ್ಲಿ 5,000 ವಿದ್ಯಾರ್ಥಿಗಳಿಗೆ ವಿಷಪ್ರಾಶನ ಮಾಡಲಾಗಿದೆ ಎನ್ನಲಾಗಿದೆ. ಸದ್ಯ ವಿಷ ಸೇವಿಸಿದ ವಿದ್ಯಾರ್ಥಿನಿಯರಲ್ಲಿ ಯಾರೂ ಇಲ್ಲಿಯವರೆಗೆ ಸಾವನ್ನಪ್ಪಿಲ್ಲ. ಆದರೆ ಅವರಲ್ಲಿ ಉಸಿರಾಟದ ತೊಂದರೆ, ವಾಕರಿಕೆ, ತಲೆತಿರುಗುವಿಕೆಗಳಂತಹ ಸಮಸ್ಯೆಗಳು ಕಂಡುಬಂದಿದೆ. ಇದನ್ನೂ ಓದಿ: ಶ್ರದ್ಧಾ ಹತ್ಯೆ ಪ್ರಕರಣ- ಮಾಂಸ ಸಂರಕ್ಷಣೆಯ ತರಬೇತಿ ಪಡೆದಿದ್ದ ಅಫ್ತಾಬ್

Share This Article
Leave a Comment

Leave a Reply

Your email address will not be published. Required fields are marked *