ಪಿಎಲ್‍ಡಿ ಬ್ಯಾಂಕ್ ನಂತರ, ಇದೀಗ ಡಿಸಿಸಿ ಬ್ಯಾಂಕ್ ಚುನಾವಣೆ- ಕುಂದಾ ನಗರದ ಕದನ

Public TV
1 Min Read

ಬೆಂಗಳೂರು: ಒಂದು ವರ್ಷದ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬೆಳಗಾವಿ ಕಾಂಗ್ರೆಸ್ ಶಾಸಕರ ನಡುವೆ ಪಿಎಲ್‍ಡಿ ಬ್ಯಾಂಕ್ ಚುನಾವಣೆ ಕದನ ಜೋರಾಗಿತ್ತು. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಜಾರಕಿಹೋಳಿ ಸಹೋದರರ ನಡುವೆ ಶುರುವಾದ ಜಟಾಪಟಿ ಅಂತಿಮವಾಗಿ ಸಮ್ಮಿಶ್ರ ಸರ್ಕಾರದ ಪಥನಕ್ಕೆ ಕಾರಣವಾಗಿತ್ತು.

ಅದೇ ಬೆಳಗಾವಿಯಲ್ಲಿ ಈಗ ಡಿಸಿಸಿ ಬ್ಯಾಂಕ್ ಚುನಾವಣೆ ಗಲಾಟೆ ಗರಿಗೆದರಿದೆ. ಅಂದು ಕಾಂಗ್ರೆಸ್ ಶಾಸಕರ ನಡುವೆ ನಡೆದ ಕದನದ ರೀತಿಯಲ್ಲೇ ಬಿಜೆಪಿ ಶಾಸಕರ ನಡಯವೆಯೂ ಇದೀಗ ಫೈಟ್ ಆರಂಭವಾಗಿದೆ. ಬಿಜೆಪಿ ನಾಯಕರಾದ ಡಿಸಿಎಂ ಲಕ್ಷ್ಮಣ ಸವದಿ, ಪ್ರಭಾಕರ್ ಕೋರೆ ಹಾಗೂ ಸಂಸದ ಸುರೇಶ್ ಅಂಗಡಿ ಒಂದು ಕಡೆಯಾದರೆ ಬಿಜೆಪಿ ಶಾಸಕರು ಸಚಿವರಾದ ರಮೇಶ್ ಜಾರಕಿಹೊಳಿ, ಉಮೇಶ್ ಕತ್ತಿ ಹಾಗೂ ಬಾಲಚಂದ್ರ ಜಾರಕಿಹೋಳಿ ಮತ್ತೊಂದು ಕಡೆ ನಿಂತಿದ್ದಾರೆ.

ಎರಡೂ ಬಣದವರು ಬಿಜೆಪಿಯವರೇ ಆಗಿದ್ದರೂ, ಮಾರ್ಚ್ ತಿಂಗಳಲ್ಲಿ ನಡೆಯುವ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ತಮ್ಮ ಬಣವೇ ಗೆಲ್ಲಬೇಕು ಎನ್ನುವ ಜಿದ್ದಿಗೆ ಬಿದ್ದಿದ್ದಾರೆ. ಇದರ ಮಧ್ಯೆ ಲಕ್ಷಣ ಸವದಿಯವರನ್ನು ಡಿಸಿಎಂ ಆಗಿ ಮುಂದುವರಿಸಿದ್ದು ಜಾರಕಿಹೊಳಿ ಬಣಕ್ಕೆ ಇಷ್ಟ ಇರಲಿಲ್ಲ. ಅಲ್ಲದೆ ಉಮೇಶ್ ಕತ್ತಿಯವರನ್ನು ಸಚಿವರನ್ನಾಗಿ ಮಾಡದಿರುವುದು ಕತ್ತಿ ಬಣದ ಸಿಟ್ಟಿಗೆ ಕಾರಣವಾಗಿದೆ.

ತಮ್ಮ ವಿರೋಧಿಗಳ ಸಿಟ್ಟನ್ನು ಅರಿತ ಡಿಸಿಎಂ ಲಕ್ಷ್ಮಣ್ ಸವದಿ ಪ್ರಭಾಕರ್ ಕೋರೆ ಹಾಗೂ ಸುರೇಶ್ ಅಂಗಡಿ ಜೊತೆ ಸೇರಿ ಶತಾಯಗತಾಯ ಕತ್ತಿ ಹಾಗೂ ಜಾರಕಿಹೋಳಿ ಗುಂಪಿಗೆ ಮುಖಭಂಗ ಮಾಡುವ ಪಣ ತೊಟ್ಟಿದ್ದಾರೆ. ಹೀಗೆ ಬೆಳಗಾವಿ ಅಖಾಡದಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ಗಲಾಟೆ ಜೋರಾಗುವ ಲಕ್ಷಣಗಳು ಕಾಣತೊಡಗಿವೆ. ಮೊದಲೇ ಸಚಿವ ಸ್ಥಾನ ಸಿಗದ ಸಿಟ್ಟು. ಡಿಸಿಎಂ ಪೋಸ್ಟ್ ಗಲಾಟೆ ಎಲ್ಲವೂ ಸೇರಿಕೊಂಡು ಪಿಎಲ್‍ಡಿ ಬ್ಯಾಂಕ್ ಗಲಾಟೆ ಮಾದರಿಯಲ್ಲೇ ಡಿಸಿಸಿ ಬ್ಯಾಂಕ್ ಚುನಾವಣೆ ಸರ್ಕಾರದ ಪಾಲಿಗೆ ಮಗ್ಗಲ ಮುಳ್ಳಾಗುತ್ತಾ ಎನ್ನುವ ಆತಂಕವಂತೂ ಬಿಜೆಪಿ ಪಾಳಯದಲ್ಲಿ ಮನೆ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *