– ಟಿ20 ವಿಶ್ವಕಪ್ ಪಂದ್ಯಗಳ ಸ್ಥಳ ಬದಲಾವಣೆ ಮಾಡುವಂತೆ ಐಸಿಸಿಗೆ ಮನವಿ
ಢಾಕಾ/ನವದೆಹಲಿ: ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ (Mustafizur Rahman) ಅವರನ್ನು ಐಪಿಎಲ್‌ನಿಂದ ಹೊರದಬ್ಬಿದ ಬಳಿಕ ಬಾಂಗ್ಲಾ (Bangladesh) ಹೊಸ ಕ್ಯಾತೆ ತೆಗೆದಿದೆ. 2026ರ ಟಿ20 ವಿಶ್ವಕಪ್ ಪಂದ್ಯಗಳನ್ನ ಆಡಲು ಭಾರತಕ್ಕೆ ಬರುವುದಿಲ್ಲ ಎಂದು ಹೇಳಿದೆ.
2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಪಂದ್ಯಗಳಿಗೆ ಸ್ಥಳ ಬದಲಾವಣೆ ಮಾಡುವಂತೆ ಕೋರಲು ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಬಾಂಗ್ಲಾ ಕ್ರಿಕೆಟ್ ಮಂಡಳಿಗೆ ಸೂಚಿಸಿದೆ. ಭಾರತದಲ್ಲಿ ನಿಯೋಜನೆಗೊಂಡಿರುವ ತನ್ನ ದೇಶದ ಎಲ್ಲಾ ಲೀಗ್ ಪಂದ್ಯಗಳನ್ನ ಭಾರತದಿಂದ ಹೊರಗೆ ಸ್ಥಳಾಂತರಿಸುವಂತೆ ಐಸಿಸಿಗೆ ಮನವಿ ಮಾಡುವಂತೆ ಹೇಳಿದೆ. ಇದನ್ನೂ ಓದಿ: ಬಾಂಗ್ಲಾ ಘರ್ಷಣೆ – ಐಪಿಎಲ್‌ನಿಂದ ಮುಸ್ತಾಫಿಜುರ್ ಔಟ್
ಈ ಕುರಿತು ಬಾಂಗ್ಲಾದೇಶದ ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್ (Asif Nazrul), ಈ ನಿರ್ಧಾರ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ದೃಢಪಡಿಸಿದ್ದಾರೆ. ಭಾರತದಲ್ಲಿ ನಿಗದಿಪಡಿಸಿರುವ ಬಾಂಗ್ಲಾದ ಎಲ್ಲಾ ಪಂದ್ಯಗಳನ್ನ ಶ್ರೀಲಂಕಾಗೆ (Sri Lanka) ಸ್ಥಳಾಂತರಿಸಲು ಐಸಿಸಿಗೆ ಮನವಿ ಮಾಡುವಂತೆ ಮಧ್ಯಂತರ ಸರ್ಕಾರ ನಿರ್ದೇಶನ ನೀಡಿದೆ. ಸರ್ಕಾರದ ಸೂಚನೆ ಬಳಿಕ ಶನಿವಾರವೇ ಬಾಂಗ್ಲಾ ಕ್ರಿಕೆಟ್ ಮಂಡಳಿ ತುರ್ತು ಸಭೆ ನಡೆಸಿದ್ದು, ಈ ವಿಷಯವನ್ನ ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: IND vs NZ | ಕಿವೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ – ಪಾಂಡ್ಯ, ಶಮಿಗೆ ಕೂಡಿಬಾರದ ಮುಹೂರ್ತ!
ಐಪಿಎಲ್ ಪ್ರಸಾರ ಬಂದ್
ಮುಂದುವರಿದು… ಕೋಮುವಾದಿ ಶಕ್ತಿಗಳಿಗೆ ತಲೆಬಾಗಿ ಬಿಸಿಸಿಐ (BCCI) ಮುಸ್ತಾಫಿಜುರ್ ಅವರನ್ನ ತಂಡದಿಂದ ಕೈಬಿಡುವಂತೆ ನಿರ್ದೇಶನ ನೀಡಿದೆ. ಇದನ್ನ ನಾವು ಬಲವಾಗಿ ಖಂಡಿಸುತ್ತೇವೆ, ಇದರ ವಿರುದ್ಧ ಪ್ರತಿಭಟನೆ ದಾಖಲಿಸುತ್ತೇವೆ. ಗುಲಾಮಗಿರಿಯ ದಿನಗಳು ಮುಗಿದಿವೆ. ಬಾಂಗ್ಲಾದೇಶ, ಬಾಂಗ್ಲಾದೇಶದ ಕ್ರಿಕೆಟ್ ಅಥವಾ ಬಾಂಗ್ಲಾ ಕ್ರಿಕೆಟಿಗರ ಅವಮಾನವನ್ನ ನಾವು ಸಹಿಸುವುದಿಲ್ಲ. ಹಾಗಾಗಿ ದೇಶದಲ್ಲಿ ಐಪಿಎಲ್ ಪ್ರಸಾರವನ್ನೂ ನಿಲ್ಲಿಸುವಂತೆ ಸೂಚಿಸಿದ್ದಾನೆ ಎಂದು ನಜ್ರುಲ್ ಎಚ್ಚರಿಸಿದ್ದಾರೆ. ಇದನ್ನೂ ಓದಿ: 6,6,6,6,6,4 – ಒಂದೇ ಓವರ್‌ನಲ್ಲೇ 34 ರನ್ ಚಚ್ಚಿ ಶತಕ; ಪಾಂಡ್ಯ ಬೆಂಕಿ ಆಟಕ್ಕೆ ವಿದರ್ಭ ಸುಸ್ತು!
ದಾಖಲೆ ಬೆಲೆಗೆ ಬಿಕರಿಯಾಗಿದ್ದ ರೆಹಮಾನ್
2026ರ ಐಪಿಎಲ್ ಟೂರ್ನಿಗಾಗಿ ಡಿಸೆಂಬರ್‌ನಲ್ಲಿ ನಡೆದ ಹರಾಜಿನಲ್ಲಿ ಮುಸ್ತಾಫಿಜುರ್ ರೆಹಮಾನ್ ಅವರನ್ನ ಕೆಕೆಆರ್ ಫ್ರಾಂಚೈಸಿಯು 9.20 ಕೋಟಿ ರೂ. ನೀಡಿ ಖರೀದಿಸಿತ್ತು. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಬಾಂಗ್ಲಾ ಆಟಗಾರ ಎಂಬ ಹೆಗ್ಗಳಿಕೆಗೂ ಮುಸ್ತಾಫಿಜುರ್ ಪಾತ್ರವಾಗಿದ್ದರು. ಆದ್ರೆ ಶೇಖ್ ಹಸೀನಾ ಸರ್ಕಾರ ಪತನದ ಬಳಿಕ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ಹಾಳಾಗಿದೆ. ಈಗ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿರುವ ಕಾರಣ ಬಾಂಗ್ಲಾದೇಶದ ಆಟಗಾರರು ಐಪಿಎಲ್‌ನಲ್ಲಿ (IPL) ಆಡಬಾರದು ಎಂಬ ಆಕ್ರೋಶ ಕ್ರಿಕೆಟ್ ಅಭಿಮಾನಿಗಳಿಂದ ವ್ಯಕ್ತವಾಗಿತ್ತು. ಒತ್ತಡ ಜಾಸ್ತಿಯಾಗುತ್ತಿದ್ದಂತೆ ಬಿಸಿಸಿಐ ಮಧ್ಯಪ್ರವೇಶಿಸಿ ಮುಸ್ತಾಫಿಜುರ್ ರೆಹಮಾನ್ ಅವರನ್ನ ಕೆಕೆಆರ್‌ನಿಂದ ಕೈಬಿಡುವಂತೆ ಫ್ರಾಂಚೈಸಿಗೆ ಸೂಚಿಸಿತ್ತು.
ಫೆಬ್ರವರಿಯಲ್ಲಿ ಟಿ20 ವಿಶ್ವಕಪ್
2026ರ ಟಿ20 ವಿಶ್ವಕಪ್ ಟೂರ್ನಿಯ ಹಕ್ಕು ಭಾರತದ್ದೇ ಆದರೂ ಶ್ರೀಲಂಕಾ ಜೊತೆಗಿನ ಜಂಟಿ ಆತಿಥ್ಯದಲ್ಲಿ ನಡೆಸಲಾಗುತ್ತಿದೆ. ಭಾರತ ಮತ್ತು ಪಾಕ್ ನಡುವಿನ ಸಂಬಂಧ ಹದಗೆಟ್ಟಿದ್ದರಿಂದ, ಪಾಕಿಸ್ತಾನದ ಎಲ್ಲಾ ಪಂದ್ಯಗಳು ಲಂಕಾದಲ್ಲಿ ನಡೆಯಲಿದೆ. ಬಾಂಗ್ಲಾ ತಂಡವು ಫೆಬ್ರವರಿ 7 ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತನ್ನ ವಿಶ್ವಕಪ್ ಅಭಿಯಾನವನ್ನ ಶುರು ಮಾಡಲಿದೆ. ಫೆ.9 ರಂದು ಇಟೇ ವಿರುದ್ಧ, ಫೆ.14 ರಂದು ಇಂಗ್ಲೆಂಡ್ ವಿರುದ್ಧ ಈಡನ್ ಗಾರ್ಡನ್‌ನಲ್ಲಿ ಹಾಗೂ ಅಂತಿಮ ಲೀಗ್ ಸುತ್ತಿನ ಪಂದ್ಯವನ್ನ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನೇಪಾಳದ ವಿರುದ್ಧ ಆಡಬೇಕಿದೆ. ಆದ್ರೆ ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯಿಂದಾಗಿ ಬಾಂಗ್ಲಾ ಭಾರತದಿಂದ ಹೊರಗೆ ಲೀಗ್ ಪಂದ್ಯಗಳನ್ನ ನಿಗದಿ ಮಾಡುವಂತೆ ಕೇಳಿಕೊಂಡಿದೆ.




