ಮುಡಾ ಆಯ್ತು ಈಗ ಬುಡಾ ಹಗರಣ – ಅಧ್ಯಕ್ಷನ ವಿರುದ್ಧ ಕಾಂಗ್ರೆಸ್‌ ಶಾಸಕರಿಂದಲೇ ದೂರು

Public TV
2 Min Read

– ಲೇಔಟ್ ನಿರ್ಮಾಣ, ಅನುಮತಿ, ಹಂಚಿಕೆಯಲ್ಲಿ ಅಕ್ರಮ

ಬಳ್ಳಾರಿ: ರಾಜ್ಯದಲ್ಲಿ ಮುಡಾ ಹಗರಣ (MUDA Scam) ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿ ಮಾಡಿದೆ. ಇದರ ಬೆನ್ನಲ್ಲೇ ಇತ್ತ ಬಳ್ಳಾರಿಯಲ್ಲಿ ಬುಡಾ ಹಗರಣ (BUDA Scam) ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಶುರು ಮಾಡಿದೆ. ಡಿಸಿಎಂ ಡಿಕೆ ಶಿವಕುಮಾರ್‌ ಆಪ್ತ, ಬುಡಾ ಅಧ್ಯಕ್ಷ ತನ್ನ ಅಧಿಕಾರ ದುರುಪಯೋಗ ಮಾಡಿ ಅಕ್ರಮ ಎಸೆಗಿದ್ದಾರೆ ಎಂದು ಸ್ವಪಕ್ಷೀಯ ಕಾಂಗ್ರೆಸ್ (Congress) ಶಾಸಕರೇ ಪತ್ರ ಬರೆದಿರುವುದು ಈಗ ಸಂಚಲನ ಸೃಷ್ಟಿಸಿದೆ.

ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್ ಆಂಜನೇಯಲು (GS Anjineyalu) ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡು ಅಕ್ರಮ ಎಸಗಿದ್ದಾರೆ ಎನ್ನುವ ಗಂಭೀರ ಅರೋಪ ಕೇಳಿ ಬಂದಿದೆ.  ಇದನ್ನೂ ಓದಿ: ರಾಜಕೀಯ ಬದಲಾವಣೆ ಬೆಳಗಾವಿಯಿಂದಲೇ ಆಗುತ್ತಾ?

ಹೌದು ಲೇಔಟ್ ನಿರ್ಮಾಣ, ಅನುಮತಿ ಮತ್ತು ಹಂಚಿಕೆ ಸಂಬಂಧ ಮಾಚ್ 7 ಮತ್ತು ಜುಲೈ 8ನೇ ತಾರೀಖು ನಡೆದ ಸಭೆಯ ನಡಾವಳಿಯಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡು, ಆ ಮೂಲಕ ಭ್ರಷ್ಟಾಚಾರ ಮಾಡಲಾಗಿದೆ ಎಂದು ಆರೋಪಿಸಿ ಜೆ ಎಸ್ ಆಂಜಿನೇಯಲು ವಿರುದ್ದ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಬುಡಾ ಅಕ್ರಮದ ಬಗ್ಗೆ ತನಿಖೆ ನಡೆಸಬೇಕೆಂದು ಸರ್ಕಾರಕ್ಕೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ (Nara Bharath Reddy) ಹಾಗೂ ಕಂಪ್ಲಿ ಶಾಸಕ ಜೆ ಎಸ್ ಗಣೇಶ್ (GS Gansh) ಪತ್ರ ಬರೆದು ಆಗ್ರಹಿಸಿದ್ದಾರೆ.

 

ಸರ್ಕಾರ ಕೂಡಲೇ ಎಚ್ಚೆತ್ತು ಶಾಸಕರ ಪತ್ರ ಉಲ್ಲೇಖಿಸಿ ಬುಡಾ ಅಕ್ರಮದ ತನಿಖೆಗೆ ಆದೇಶ ಮಾಡಿದೆ. ತನಿಖೆಗಾಗಿ ಆರು ಜನ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ.

ಬುಡಾ ಅಧ್ಯಕ್ಷ ಜೆ ಎಸ್ ಆಂಜನೇಯಲು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಆಪ್ತರು ಕೂಡ ಹೌದು. ಇದೇ ವರ್ಷದ ಫೆಬ್ರವರಿ 28ಕ್ಕೆ ಬುಡಾ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಅಂದರೆ ಅಧಿಕಾರ ಸ್ವೀಕರಿಸಿ ಕೇವಲ ಏಳು ತಿಂಗಳು ಮಾತ್ರ ಕಳೆದಿದೆ. ಅಷ್ಟರಲ್ಲೇ ಇಷ್ಟು ದೊಡ್ಡ ಆರೋಪ ಸ್ವಪಕ್ಷಿಯ ಶಾಸಕರಿಂದಲೇ ಕೇಳಿ ಬಂದಿರೋದು ಸರ್ಕಾರಕ್ಕೆ ದೊಡ್ಡ ಮಟ್ಟದ ಮುಜುಗರ ಉಂಟು ಮಾಡಿದೆ.

 

Share This Article