SSLC ಪರೀಕ್ಷೆಗೂ ಮುನ್ನ ಮಕ್ಕಳಿಗೆ ಪುನರ್ ಮನನ ತರಗತಿ: ಸುರೇಶ್ ಕುಮಾರ್

Public TV
1 Min Read

ಚಾಮರಾಜನಗರ: ಸುದೀರ್ಘ ರಜೆಯಿಂದ SSLC ವಿದ್ಯಾರ್ಥಿಗಳನ್ನು ಪುನಃ ಪರೀಕ್ಷೆಯ ಮನಸ್ಥಿತಿಗೆ ತರಲು ಪುನರ್ ಮನನದ ತರಗತಿಗಳು ನಡೆಯಲಿವೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.

ದೀರ್ಘ ಕಾಲದ ರಜೆಯಿಂದ ಪರೀಕ್ಷೆಯ ಮನಸ್ಥಿತಿಗೆ ಮಕ್ಕಳನ್ನು ಕರೆತರುವ ಸಲುವಾಗಿ ಪುನರ್ ಮನನದ ತರಗತಿ ನಡೆಯಲಿದೆ ಎಂದು ಶಿಕ್ಷಣ ಸಚಿವರು ಹೇಳಿದರು. ಪುಣಜನೂರು ಚೆಕ್‍ಪೋಸ್ಟ್ ಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಮಕ್ಕಳನ್ನು ಪರೀಕ್ಷೆಗೆ ಸಿದ್ಧಗೊಳಿಸುವ ಸಲುವಾಗಿ ಪರೀಕ್ಷೆಗೂ ಮುನ್ನ 1 ವಾರ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪುನರ್ ಮನನ ತರಗತಿ ನಡೆಯಲಿದೆ. ಏ. 14ರ ಬಳಿಕ ಪರೀಕ್ಷಾ ವೇಳಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ದೆಹಲಿಯ ನಿಜಾಮುದ್ದಿನ್ ಸಭೆ ಆಗದಿದ್ದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಬಹಳಷ್ಟು ಕಡಿಮೆಯಾಗುತ್ತಿತ್ತು. ಹಾಗೆಯೇ ಜುಬಿಲಿಯೆಂಟ್ ಪ್ರಕರಣದಿಂದ ಸೋಂಕಿತರ ಸಂಖ್ಯೆ ಏರಿದೆ. ರಾಜ್ಯದಲ್ಲಿ ಕೊರೊನಾ ತಡೆಗಟ್ಟಲು ಅಗತ್ಯ ಕ್ರಮ ಕೈಗೊಂಡಿದ್ದು ಏ. 14ರವರೆಗೆ ಕೊರೊನಾ ನಿಯಂತ್ರಣಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಾಗೆಯೇ ಮೋದಿ ಕರೆ ಬಗ್ಗೆ ಪ್ರತಿಕ್ರಿಯಿಸಿ, ದೀಪ ಬೆಳಗಲು ಮೋದಿ ಅವರು ಕರೆ ನೀಡಿದ್ದಾರೆ. ಇದು ಒಂದು ಆಂದೋಲನ ಹಾಗೂ ಚಟುವಟಿಕೆಯಾಗಿದೆ. ಕೊರೊನಾ ವಿರುದ್ಧ ಹೋರಾಟದಲ್ಲಿ ನಮ್ಮ ಒಗ್ಗಟ್ಟನ್ನು ಇದು ತೋರಿಸಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಪುಣಜನೂರು ಗಿರಿಜನ ಆಶ್ರಮ ಶಾಲೆಗೆ ಭೇಟಿ ನೀಡಿ ನಿರ್ಗತಿಕರ ಕ್ಷೇಮ ವಿಚಾರಿಸಿ ಲಾಕ್‍ಡೌನ್ ಮುಗಿಯುತ್ತಿದ್ದಂತೆ ನಿಮ್ಮ ನಿಮ್ಮ ಊರುಗಳಿಗೆ ಕಳುಹಿಸಲಾಗುವುದು ಎಂದು ಅವರಿಗೆ ಸಚಿವರು ಧೈರ್ಯ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *