ಐಟಿ ದಾಳಿ ಬಳಿಕ ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ಮೊದಲ ಪ್ರತಿಕ್ರಿಯೆ

Public TV
2 Min Read

ಬೆಂಗಳೂರು: ಕೆಜಿಎಫ್ ಸಿನಿಮಾ ದೊಡ್ಡ ಸಕ್ಸಸ್ ಆಗಿತ್ತು. ಚಿತ್ರ ಬಿಡುಗಡೆಯಾದ ಎರಡನೇ ವಾರವೇ ಐಟಿ ಅಧಿಕಾರಿಗಳು ನನ್ನ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿದರು. ಸಿನಿಮಾ ಮತ್ತು ನನ್ನ ವೈಯಕ್ತಿಕ ಆದಾಯಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲನೆ ನಡೆಸಿ, ನಮ್ಮಿಂದ ಕೆಲ ಮಾಹಿತಿಗಳನ್ನು ಪಡೆದುಕೊಂಡರು. ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇವೆ. ಕೆಜಿಎಫ್ ದೊಡ್ಡ ಹಿಟ್ ಪಡೆದಿದ್ದರಿಂದ ನನ್ನ ಮೇಲೆ ಐಟಿ ದಾಳಿಯಾಗಿರುವ ಸಾಧ್ಯತೆಗಳಿವೆ. ಬೇರೆ ನಟ ಮತ್ತು ನಿರ್ಮಾಪಕರ ಮೇಲೆ ಯಾವ ಕಾರಣಕ್ಕೆ ದಾಳಿ ಆಗಿದೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದಾರೆ.

ಐಟಿ ದಾಳಿ ಅಂತ್ಯವಾಗಿದ್ದು, ವಿಚಾರಣೆಗೆ ಕರೆದಾಗ ಹಾಜರಾಗಬೇಕೆಂದು ಸೂಚಿಸಿದ್ದಾರೆ. ಸಿನಿಮಾ ಬಿಡುಗಡೆಯಾದ ಎರಡನೇ ವಾರ ಅಧಿಕಾರಿಗಳು ದಾಳಿ ನಡೆಸಿದ್ದರಿಂದ ಚಿತ್ರದ ಪ್ರಮೋಷನ್ ಗೆ ಹೊಡೆತ ಬಿದ್ದಿದೆ. ಮೂರನೇ ವಾರದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ತೆರಳಿ ಸಿನಿಮಾದ ಪ್ರಚಾರ ಮಾಡಬೇಕೆಂದು ಯಶ್ ಸೇರಿದಂತೆ ಎಲ್ಲರು ಪ್ಲಾನ್ ಮಾಡಿದ್ದೀವಿ. ಅಧಿಕಾರಿಗಳು ತಮಗೆ ಬಂದಿರುವ ಮಾಹಿತಿ ಸತ್ಯನೋ ಅಥವಾ ಸುಳ್ಳೋ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಬರುತ್ತಾರೆ. ಆದಾಯ ಅಧಿಕಾರಿಗಳು ತಮ್ಮ ಮೇಲಾಧಿಕಾರಿಗಳ ಆದೇಶದ ಮೇರೆಗೆ ಮನೆಗೆ ಬಂದು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿದರು.

ನಾನು ಯಾವುದೇ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿಲ್ಲ. ಕನ್ಸ್ಟ್ರಕ್ಷನ್ ಬ್ಯುಸಿನೆಸ್ ಜೊತೆ ಸಿನಿಮಾಗಳಿಗೆ ನಿರ್ಮಾಪಕನಾಗಿ ಕೆಲಸ ಮಾಡಿಕೊಂಡಿದ್ದೇನೆ. ಅಧಿಕಾರಿಗಳು ಮನೆಗೆ ಬಂದ ಮೊದಲ ದಿನವೇ ಎಲ್ಲ ಪರಿಶೀಲನೆ ಮುಗಿದಿತ್ತು. ಏಕಕಾಲದಲ್ಲಿ ಎಲ್ಲರ ಮನೆ ಮೇಲೆ ಐಟಿ ದಾಳಿ ನಡೆದಿದ್ದರಿಂದ ಬೇರೆಯವರ ವಿಚಾರಣೆ ಮುಗಿಯುವವರೆಗೂ ಸಹಕರಿಸಬೇಕೆಂದು ಮನವಿ ಮಾಡಿಕೊಂಡಿದ್ದರು. ಹಾಗಾಗಿ ಎರಡು ದಿನ ಹೊರಗೆ ಬರಲಿಲ್ಲ ಅಂತಾ ಹೇಳಿದರು.

ಇದು ಆದಾಯಕ್ಕೆ ಸಂಬಂಧಿಸಿದಂತಹ ವಿಷಯ. ಯಾವುದೇ ರಾಜಕೀಯ ವಿಚಾರಕ್ಕೆ ಸಂಬಂಧಿಸಿಲ್ಲ. ಅಧಿಕಾರಿಗಳು ಕೇಳಿದ ದಾಖಲಾತಿಗಳನ್ನು ನಾವು ನೀಡಿದ್ದೇವೆ. ತನಿಖೆಗೂ ಸಹಕಾರ ನೀಡಿದ್ದೇವೆ. ಯಾವುದೇ ಗೊಂದಲ ಬೇಡ ಎಂದು ಅಭಿಮಾನಿಗಳಲ್ಲಿ ವಿಜಯ್ ಮನವಿ ಮಾಡಿಕೊಂಡರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *