ಚಿತ್ರದುರ್ಗ: ಪ್ರಾಣ ಬೆದರಿಕೆಯ ಹಿನ್ನೆಲೆಯಲ್ಲಿ ಪ್ರೀತಿಸಿ ಮದುವೆಯಾದ ಜೋಡಿಯೊಂದು ಇದೀಗ ರಕ್ಷಣೆ ಕೋರಿ ಚಿತ್ರದುರ್ಗ ಎಸ್‍ಪಿ ಕಚೇರಿಗೆ ಮೊರೆಹೋಗಿದೆ.
ಚಿತ್ರದುರ್ಗದ ಮಾರುತಿ-ರುಕ್ಸಾರ್ (ಹೆಸರು ಬದಲಾಯಿಸಲಾಗಿದೆ) ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮೂಲತಃ ಚಿಕ್ಕಮಗಳೂರಿನಲ್ಲಿರುವ ಯುವತಿ ಕುಟುಂಬ ನೆಲೆಸಿದ್ದು, ಈ ಹಿಂದೆ ಕುಟುಂಬ ಚಿತ್ರದುರ್ಗದಲ್ಲಿ ನೆಲೆಸಿದ್ದಾಗ ಮಾರುತಿ ಮೇಲೆ ಪ್ರೇಮಾಂಕುರವಾಗಿತ್ತು. ಸದ್ಯ ಇವರಿಬ್ಬರ ಪ್ರೀತಿ ವಿಚಾರ ಮನೆಯವರಿಗೆ ತಿಳಿದಿದ್ದು, ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಜೋಡಿ ಮಾರ್ಚ್ 8ರಂದು ಚಿತ್ರದುರ್ಗ ತಾಲೂಕಿನ ಜಾನಕೊಂಡ ಗ್ರಾಮದ ರಂಗನಾಥಸ್ವಾಮಿ ದೇಗುಲದಲ್ಲಿ ಪ್ರೇಮವಿವಾಹ ಆಗಿದ್ದರು. ಆದರೆ ಯುವತಿಯ ಪೋಷಕರು ಮಾರುತಿ ವಿರುದ್ಧ ಚಿಕ್ಕಮಗಳೂರು ಠಾಣೆಯಲ್ಲಿ ಅಪಹರಣ ಪ್ರಕರಣವನ್ನು ದಾಖಲಿಸಿದ್ದಾರೆ.
ನಂತರ ಯುವತಿಯ ಪೋಷಕರ ವಿರುದ್ಧ ಪ್ರೇಮಿಗಳು ಪ್ರಾಣ ಬೆದರಿಕೆ ಆರೋಪವನ್ನು ದಾಖಲಿಸಿದ್ದು, ರಕ್ಷಣೆ ಕೋರಿ ಚಿತ್ರದುರ್ಗ ಎಸ್‍ಪಿ ಕಚೇರಿಗೆ ಮೊರೆ ಹೋಗಿದ್ದಾರೆ.