ಧರ್ಮಸ್ಥಳದ ನಂತರ ರಾಯರ ಮಂತ್ರಾಲಯಕ್ಕೂ ತಟ್ಟಿದ ಬರದ ಬಿಸಿ!

Public TV
1 Min Read

ರಾಯಚೂರು: ಧರ್ಮಸ್ಥಳದ ನಂತರ ಈ ಬಾರಿಯ ಬರಗಾಲದ ಎಫೆಕ್ಟ್ ಗುರುರಾಯರ ಸನ್ನಿಧಿ ಮಂತ್ರಾಲಯಕ್ಕೂ ತಟ್ಟಿದೆ. ಮಂತ್ರಾಲಯಕ್ಕೆ ಬರುವ ಭಕ್ತರಿಗೆ ನೀರಿನ ಸಮಸ್ಯೆ ಎದುರಾಗಿದೆ.

ಈ ಬಾರಿಯ ಬರಗಾಲ ಎಲ್ಲ ಕಡೆ ನೀರಿನ ಸಮಸ್ಯೆಯನ್ನು ಉಂಟು ಮಾಡಿದೆ. ಈ ಪರಿಣಾಮ ಈಗ ಪುಣ್ಯಕ್ಷೇತ್ರಗಳಿಗೂ ತಟ್ಟಿದೆ. ತುಂಗಭದ್ರಾ ನದಿ ದಡದಲ್ಲಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಬರುವ ಭಕ್ತರಿಗೆ ನೀರಿನ ಸಮಸ್ಯೆ ಎದುರಾಗಿದೆ. ನದಿ ಸಂಪೂರ್ಣ ಬತ್ತಿರುವುದರಿಂದ ಭಕ್ತರು ಪುಣ್ಯ ಸ್ನಾನ ಮಾಡಲು ಆಗದೆ ಪರದಾಡುವಂತಾಗಿದೆ.

ಕಳೆದ ಮೂರು ತಿಂಗಳುಗಳಿಂದ ನದಿ ಸಂಪೂರ್ಣ ಬತ್ತಿ ಹೋಗಿದ್ದು, ನೀರಿನ ಸಮಸ್ಯೆ ಉಂಟಾಗಿದೆ ಆದ್ದರಿಂದ ಭಕ್ತರ ಸ್ನಾನಕ್ಕೆ ನೀರಿನ ಸಮಸ್ಯೆಯಾಗಿದೆ. ಪ್ರತಿ ವರ್ಷ ತುಂಗಭದ್ರಾ ನದಿ ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ಖಾಲಿಯಾಗುತ್ತಿತ್ತು. ಆದರೆ ಈ ಬಾರಿ ಮಾರ್ಚ್ ತಿಂಗಳಲ್ಲಿಯೇ ತುಂಗಭದ್ರಾ ನದಿಯೂ ಸಂಪೂರ್ಣ ಬತ್ತಿ ಹೋಗಿದೆ. ಇದರಿಂದ ಗುರುವಾರ ಹಾಗೂ ವಿಶೇಷ ಸಂದರ್ಭದಲ್ಲಿ ಕ್ಷೇತ್ರಕ್ಕೆ ಆಗಮಿಸುವ ಲಕ್ಷಾಂತರ ಸಂಖ್ಯೆಯ ಭಕ್ತರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

ಮಠದ ವತಿಯಿಂದ ಕೊಳವೆ ಬಾವಿ ಕೊರೆಸಿದ್ದು ಇದರಿಂದ ನೀರು ಪಡೆದು ಭಕ್ತರು ಸ್ನಾನ ಘಟ್ಟದಲ್ಲಿ ನಲ್ಲಿಗಳ ಮೂಲಕ ಸ್ನಾನ ಮಾಡುತ್ತಿದ್ದಾರೆ. ಕುಡಿಯುವ ನೀರಿಗೆ ಮಠ ಹಾಗೂ ಖಾಸಗಿಯವರು ಅಲ್ಲಲ್ಲಿ ವ್ಯವಸ್ಥೆಗಳನ್ನು ಮಾಡಿದ್ದಾರೆ. ಇದೇ ರೀತಿಯಲ್ಲಿ ಧರ್ಮಸ್ಥಳದಲ್ಲೂ ನೀರಿನ ಸಮಸ್ಯೆ ಉಂಟಾದ ಕಾರಣ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಕ್ಷೇತ್ರದಲ್ಲಿ ನೀರಿನ ಸಮಸ್ಯೆ ತುಂಬ ಇದೆ. ಆದ್ದರಿಂದ ಭಕ್ತರು ಕ್ಷೇತ್ರಕ್ಕೆ ಬರುವುದನ್ನು ಮುಂದೂಡಿ ಎಂದು ವಿನಂತಿ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *