23 ವರ್ಷಗಳ ಬಳಿಕ ಮಕರ ಸಂಕ್ರಾಂತಿಯಂದೇ ಷಟ್ತಿಲಾ ಏಕಾದಶಿ – ಏನಿದರ ವಿಶೇಷತೆ?

2 Min Read

ರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ. 2026ರ ಈ ಹಬ್ಬವು 23 ವರ್ಷಗಳ ಬಳಿಕ ಇನ್ನಷ್ಟು ವಿಶೇಷವಾಗಲಿದೆ.

ಹೌದು, ಈ ಬಾರಿಯ ಮಕರ ಸಂಕ್ರಾಂತಿಯಂದೇ (Makar Sankranti) ಷಟ್ತಿಲಾ ಏಕಾದಶಿ ಬಂದಿದೆ. 23 ವರ್ಷಗಳ ಬಳಿಕ ಒಂದೇ ದಿನ ಎರಡು ಧಾರ್ಮಿಕ ಆಚರಣೆಗಳು ಒಟ್ಟಾಗಿ ಬರುತ್ತಿರುವುದು ವಿಶೇಷಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಪಟ ಪಟ ಹಾರೋ ಗಾಳಿಪಟ… ಮಕರ ಸಂಕ್ರಾಂತಿಗೆ ಪಟ ಹಾರಿಸೋದೇಕೆ?

ಏನಿದರ ವಿಶೇಷತೆ:
ಮಕರ ಸಂಕ್ರಾಂತಿಯಂದು ಸೂರ್ಯನು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಇದೇ ದಿನವೇ ಮಹಾವಿಷ್ಣುವಿಗೆ ಪ್ರಿಯವಾದ ಷಟ್ತಿಲಾ ಏಕಾದಶಿಯೂ (Shattila Ekadashi) ಬಂದಿದೆ. ಹೀಗಾಗಿ ಈ ದಿನವನ್ನು ಅತ್ಯಂತ ಪುಣ್ಯದ ದಿನವೆಂದು ಪರಿಗಣಿಸಲಾಗಿದೆ.

ಷಟ್ತಿಲಾ ಏಕಾದಶಿಯ `ಷಟ್’ ಎಂದರೆ ಆರು, ತಿಲ ಎಂದರೆ ಎಳ್ಳು. ಹೀಗಾಗಿ ಆರು ವಿಧದಲ್ಲಿ ಎಳ್ಳಿನ ಬಳಕೆ ಮಾಡಬೇಕು. ಈ ದಿನ ಎಳ್ಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ.

ಆರು ವಿಧಗಳು:
ಎಳ್ಳು ಮಿಶ್ರಿತ ನೀರಿನ ಸ್ನಾನ: ಸೂರ್ಯೋದಯಕ್ಕೂ ಮುನ್ನ ಪವಿತ್ರ ನದಿಗಳಲ್ಲಿ ಅಥವಾ ಮನೆಯಲ್ಲಿ ಎಳ್ಳು ಬೆರೆಸಿದ ನೀರಿನ ಸ್ನಾನ.
ಎಳ್ಳೆಣ್ಣೆ ಅಥವಾ ಎಳ್ಳನ್ನು ಮೈಗೆ ಹಚ್ಚಿಕೊಳ್ಳುವುದು.
ಎಳ್ಳಿನ ತರ್ಪಣ: ಪಿತೃಗಳಿಗೆ ಎಳ್ಳು ಬಿಡುವುದು.
ಎಳ್ಳಿನ ದಾನ: ಬಡವರಿಗೆ ಅಥವಾ ಬ್ರಾಹ್ಮಣರಿಗೆ ಎಳ್ಳನ್ನು ದಾನ ಮಾಡುವುದು.
ಎಳ್ಳಿನ ಆಹಾರ: ಉಪವಾಸದ ನಂತರ ಎಳ್ಳಿನಿಂದ ಮಾಡಿದ ಅಡುಗೆಯನ್ನು ಸೇವಿಸುವುದು
ಎಳ್ಳಿನ ಹೋಮ: ಅಗ್ನಿಯಲ್ಲಿ ಎಳ್ಳನ್ನು ಅರ್ಪಿಸುವುದು.

ಈ ದಿನ ಎಳ್ಳನ್ನು ಬಳಸುವುದರಿಂದ ಶಾರೀರಿಕವಾಗಿ ಆರೋಗ್ಯ ದೊರೆಯುವುದರ ಜೊತೆಗೆ ಧಾರ್ಮಿಕವಾಗಿ ಮೋಕ್ಷದ ಹಾದಿ ಸುಗಮವಾಗುತ್ತದೆ ಎನ್ನುವುದು ಈ ದಿನದ ವಿಶೇಷ. ಮಕರ ಸಂಕ್ರಾಂತಿಯಂದು ಸೂರ್ಯ ದೇವನನ್ನು ಪೂಜಿಸಿದರೆ, ಏಕಾದಶಿಯಂದು ಶ್ರೀಮನ್ನಾರಾಯಣನನ್ನು ಪೂಜಿಸಲಾಗುತ್ತದೆ. ಈ ಎರಡೂ ವಿಶೇಷತೆಗಳು ಒಂದೇ ದಿನ ಬರುವುದರಿಂದ ಸೂರ್ಯನಾರಾಯಣನ ಕೃಪೆಗೆ ಇದು ಸಕಾಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ದಿನ ಮಾಡುವ ಪೂಜೆ ಮತ್ತು ದಾನವು ನೂರು ಪಟ್ಟು ಹೆಚ್ಚಿನ ಫಲವನ್ನು ನೀಡುತ್ತದೆ.

ಸಂಕ್ರಾಂತಿಯಂದು ಎಳ್ಳು-ಬೆಲ್ಲ ಹಂಚುವುದು ನಮ್ಮ ಸಂಪ್ರದಾಯ. ಜೊತೆಗೆ ಷಟ್ತಿಲಾ ಏಕಾದಶಿಯು ಬರುವದರಿಂದ ಈ ದಿನ ಅನ್ನದಾನ, ವಸ್ತ್ರದಾನ ಮತ್ತು ಮುಖ್ಯವಾಗಿ ಎಳ್ಳು ದಾನ ಮಾಡುವುದರಿಂದ ದಾರಿದ್ರ‍್ಯ ನೀಗಿ, ಪಾಪಗಳು ಪರಿಹಾರವಾಗುತ್ತವೆ ಎಂಬ ನಂಬಿಕೆಯಿದೆ.

ಜ.13ರ ಮಧ್ಯಾಹ್ನ 03:17ಕ್ಕೆ ಏಕಾದಶಿ ತಿಥಿ ಆರಂಭವಾಗಿ ಜ.14ರಂದು ಸಂಜೆ 05:52ಕ್ಕೆ ಮುಕ್ತಾಯವಾಗುತ್ತದೆ. ಜ.15ರಂದು ಬೆಳಿಗ್ಗೆ 07:15ರಿಂದ 09:21ರೊಳಗೆ ಉಪವಾಸ ಬಿಡುವ ಸಮಯವಾಗಿದೆ. ಸೂರ್ಯೋದಯದ ಸಮಯದಲ್ಲಿ ತಿಥಿ ಇರುವುದರಿಂದ ಜ.14ರಂದು ಪೂರ್ಣ ದಿನ ಏಕಾದಶಿ ಉಪವಾಸ ಮತ್ತು ಪೂಜೆಯ ವೃತ ಆಚರಣೆಗೆ ಪ್ರಶಸ್ತವಾಗಿದೆ. ಈ ಸಮಯದಲ್ಲಿ ದೇವರಿಗೆ ಎಳ್ಳಿನಿಂದ ಮಾಡಿದ ನೈವೇದ್ಯ ಅರ್ಪಿಸಿದರೆ ಒಳ್ಳೆಯದು.ಇದನ್ನೂ ಓದಿ: ಮಕರ ಸಂಕ್ರಾಂತಿ 2026: ಗಂಗೆ ಭಗಿರಥನಿಗೊಲಿದ ದಿನ – ಪವಿತ್ರ ಸ್ನಾನದಿಂದ ಕೋಟಿ ಪುಣ್ಯ!

Share This Article