ಪೆರೋಲ್ ಮೇಲೆ ಹೊರಬಂದವ 11 ವರ್ಷದ ನಂತ್ರ ಸೆರೆಸಿಕ್ಕ!

Public TV
1 Min Read

ಚಿಕ್ಕಮಗಳೂರು: ಪೆರೋಲ್ ಮೇಲೆ ಹೊರಬಂದು 11 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿಕೊಂಡು ಮರುಮದುವೆಯಾಗಿ ಮೂರು ಮಕ್ಕಳ ತಂದೆಯಾಗಿದ್ದ ಅಪರಾಧಿಯನ್ನು ಇದೀಗ ಬಂಧಿಸುವಲ್ಲಿ ಚಿಕ್ಕಮಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

2007ರಲ್ಲಿ ಹೆಂಡತಿಯನ್ನು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಆರೋಪದಡಿ ಶಿವಮೊಗ್ಗ ಸಾಗರ ಮೂಲದ ಅಬ್ದಲ್ ಘನಿ ಪೆರೋಲ್ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದನು. ಆ ನಂತ್ರ ಆತ ಪೆರೋಲ್ ಮೇಲೆ ಹೊರಬಂದಿದ್ದ. ಬಂದವನು ವಾಪಸ್ ಹೋಗದೆ ತನ್ನ ಇತಿಹಾಸವನ್ನೆಲ್ಲಾ ಬದಲಿಸಿಕೊಂಡು, ಮದುವೆಯಾಗಿ ಮೂರು ಮಕ್ಕಳ ತಂದೆಯಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬೈಕಿನ ಲೈಸನ್ಸ್ ಎಲ್ಲವನ್ನೂ ಮಾಡಿಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸವಿದ್ದನು. ಆದರೆ ಈತ ತನ್ನ ದ್ವಿಚಕ್ರವನ್ನು ಸ್ನೇಹಿತನಿಗೆ ನೀಡಿದ್ದನು.

ಕುರಿ ಕದ್ದು ಸಿಕ್ಕಿಬಿದ್ದ:
ಕುರಿ ಕದಿಯುವಾಗ ಸಿಕ್ಕಿಬಿದ್ದ ಅಬ್ದುಲ್ ಘನಿ, ದಕ್ಷಿಣ ಕನ್ನಡದ ಕಡಬ ಠಾಣೆ ಮೆಟ್ಟಿಲೇರಿದ್ದ. ಅಲ್ಲಿನ ಪೊಲೀಸರು ಈತನ ಫಿಂಗರ್ ಪ್ರಿಂಟ್ ಅನ್ನು ಪೊಲೀಸ್ ಇಲಾಖೆಯ ಕ್ರೈಂ ವಿಭಾಗದ ಡಾಟಾಸ್‍ಗೆ ಅಪ್‍ಲೋಡ್ ಮಾಡಿದ್ದಾರೆ. 11 ವರ್ಷದ ಹಿಂದೆ ಇದೇ ಅಬ್ದುಲ್ ಘನಿ ನೀಡಿದ್ದ ಫಿಂಗರ್ ಪ್ರಿಂಟ್ ಮ್ಯಾಚ್ ಆಗಿ ಪೂರ್ವಪರ ಕೆದಕಿದಾಗ ಸಿಕ್ಕಿ ಬಿದ್ದಿದ್ದಾನೆ.

ಜಾಮೀನು ಫೋರ್ಜರಿ:
ಈತನ ಮೂಲ ಶಿವಮೊಗ್ಗ. ಪೆರೋಲ್ ಮೇಲೆ ಬಂದವನು ತನ್ನ ಜೀವನದ ಸತ್ಯವನ್ನೆಲ್ಲಾ ಬದಲಿಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸವಿದ್ದನು. ಆದ್ರೆ ಇದೀಗ ಈತನನ್ನು ಬಂಧಿಸಿದ್ದು ಮಾತ್ರ ಚಿಕ್ಕಮಗಳೂರಿನ ಪೊಲೀಸರು. ಯಾಕಂದ್ರೆ ಈತ 2007ರಲ್ಲಿ ಪೆರೋಲ್ ಮೇಲೆ ಹೊರಬರುವಾಗ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅಜ್ಜಂಪುರ ಹೋಬಳಿಯ ಸೊಲ್ಲಾಪುರ ಗ್ರಾಮ ಪಂಚಾಯತಿಯ ಅಧ್ಯಕ್ಷ ಪೆರೋಲ್ ಗೆ ಜಾಮೀನಾಗಿದ್ದನು. ಆದರೆ ಈತ ಜೈಲಿಗೆ ವಾಪಸ್ ಬರದಾಗ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಜಾಮೀನು ಫೋರ್ಜರಿ ಎಂದು ತಿಳಿದು ಪೊಲೀಸರು ಕೈಚೆಲ್ಲಿದ್ರು. ಆದರೆ ಸದ್ಯ ಅಪರಾಧಿಯ ಫಿಂಗರ್ ಪ್ರಿಂಟ್ ಬರೋಬ್ಬರಿ 11 ವರ್ಷಗಳ ಬಳಿಕ ಈತನನ್ನು ಬಂಧಿಸುವಲ್ಲಿ ಸಹಾಯ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *