ನೀರಿಗಾಗಿ ಹಾಹಾಕಾರ – ಇನ್ನು 5ವರ್ಷ ಮಾತ್ರ ಬಾಕಿ.. ಈ ನಗರದಲ್ಲಿ ನೀರೇ ಇರಲ್ಲ!

Public TV
3 Min Read

ಫ್ಘಾನಿಸ್ತಾನದ (Afghanistan) ರಾಜಧಾನಿ ಕಾಬೂಲ್​ನಲ್ಲಿ (Kabul) ನೀರಿನ ತೀವ್ರ ಸಂಕಷ್ಟ ಎಂದುರಾಗಿದೆ. ಕೇವಲ 5 ವರ್ಷಗಳಲ್ಲಿ ಈ ಮಹಾನಗರ ನೀರಿಲ್ಲದೇ (Water) ಒಣಗಿ ಹೋಗುವ ಸಾಧ್ಯತೆ ಇದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆ ಮರ್ಸಿ ಕಾರ್ಪ್ಸ್ ಎಚ್ಚರಿಕೆಯ ವರದಿಯನ್ನು ನೀಡಿದೆ.

ನೀರಿನ ಸಮಸ್ಯೆಯಿಂದಾಗಿ ಜನ ತಳ್ಳುವ ಗಾಡಿಗಳಲ್ಲಿ ನೀರು ಸಂಗ್ರಹಿಸಲು ಕಿಲೋ ಮೀಟರ್‌ಗಟ್ಟಲೇ ಅಲೆಯಬೇಕಾಗಿದೆ. ಕಾಬೂಲ್​ನಲ್ಲಿರುವ ತೋಟಗಳು, ಮರಗಳೆಲ್ಲಾ ಒಣಗಿ ಹೋಗುತ್ತಿವೆ. ಈಗಾಗಲೇ ನಗರದ ಅರ್ಧದಷ್ಟು ಬೋರ್‌ವೆಲ್‌ಗಳು ನೀರಿಲ್ಲದೆ ಬತ್ತಿ ಹೋಗಿವೆ. ನೀರಿನ ಕೊರತೆ ಆ ದೇಶಕ್ಕೆ ಮಾರಕವಾಗಿ ಕಾಡುತ್ತಿದೆ.

ನೀರಿನ ಕೊರತೆ ಉಂಟಾಗಿದ್ದು ಯಾಕೆ? 

ಅಫ್ಘಾನಿಸ್ಥಾನದಲ್ಲಿ ಹವಾಮಾನ ವೈಪರೀತ್ಯ ಹೆಚ್ಚಾಗಿದೆ. ಅದರ ಜೊತೆಗೆ ಜನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. 2001ರಲ್ಲಿ ಕಾಬೂಲ್​​ನಲ್ಲಿ 1 ಮಿಲಿಯನ್‌ಗಿಂತಲೂ ಕಡಿಮೆ ಜನರಿದ್ದರು. ಆದರೆ ಆ ಸಂಖ್ಯೆ ಈಗ 7 ಪಟ್ಟು ಹೆಚ್ಚಾಗಿದೆ! ಇದರಿಂದ ನೀರಿನ ಬಳಕೆ ಕೂಡ ಹೆಚ್ಚಾಗಿದೆ. ಇಲ್ಲಿನ ನೀರನ್ನೂ ಪ್ರತಿದಿನದ ದಿನಸಿ ಸಾಮಾನುಗಳಂತೆ ಕೊಂಡುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಆ ಮಟ್ಟದಲ್ಲಿ ನೀರಿನ ಬರ ಎದುರಾಗಿದೆ.

ಕಾಬೂಲ್​ ನಗರದಲ್ಲಿ 80% ಅಂತರ್ಜಲ ಇದೆ. ಆದರೆ​ ಆ ನೀರು  ಕಲುಷಿತಗೊಂಡಿದೆ. ಇಲ್ಲಿ ಹೆಚ್ಚಿನ ಮಟ್ಟದಲ್ಲಿ ಒಳಚರಂಡಿ, ಲವಣಾಂಶ ಮತ್ತು ಆರ್ಸೆನಿಕ್ ಸೇರಿರುವ ನೀರು ಸೇರಿಕೊಂಡಿದೆ. ಇದು ಕುಡಿಯಲು ಹಾಗೂ ಕೃಷಿಗೆ ಬಳಸಲು ಯೋಗ್ಯವಾಗಿಲ್ಲ. ಈಗಾಗಲೇ ಕಾಬೂಲ್​ನ ಜನ ನೀರಿನ ಸಮಸ್ಯೆಯಿಂದ ವಲಸೆ ಹೋಗುತ್ತಿದ್ದಾರೆ. 

ನೀರಿಗಾಗಿ ಪಂಜ್‌ಶೀರ್ ನದಿ ಪೈಪ್‌ಲೈನ್

ಪಂಜ್‌ಶೀರ್ ನದಿ ಪೈಪ್‌ಲೈನ್ ಯೋಜನೆ ಮೂಲಕ ಕಾಬೂಲ್‌ಗೆ ನೀರು ತರಲು ಪ್ರಯತ್ನಿಸಲಾಗುತ್ತಿದೆ. ಈ ಯೋಜನೆಯ ಕಾಮಗಾರಿ ಇನ್ನೂ ನಡೆಯುತ್ತಿದೆ. ಈ ಯೋಜನೆ ಪೂರ್ತಿಯಾದರೆ ನಗರದ ಅಂತರ್ಜಲ ಮಟ್ಟ  ಹೆಚ್ಚಾಗುವ ಸಾಧ್ಯತೆ ಕೂಡ ಇದೆ. ಈ ಯೋಜನೆಯ ಪೂರ್ತಿಗೊಳಿಸಲು ಬಜೆಟ್​ ಅನುಮೋದನೆಗಾಗಿ ಕಾಯಲಾಗುತ್ತಿದೆ.

ಕಾರ್ಪ್ಸ್ ವರದಿಯಲ್ಲಿ ಏನಿದೆ?

ಕಾಬೂಲ್‌ನಲ್ಲಿ ಪ್ರತೀ ವರ್ಷ ಬಳಸುವ ನೀರಿನ ಪ್ರಮಾಣವು ಪ್ರಕೃತಿಯಿಂದ ಮರುಪೂರಣಗೊಳ್ಳುವುದಕ್ಕಿಂತ 44 ಮಿಲಿಯನ್ ಘನ ಮೀಟರ್ ಹೆಚ್ಚಾಗಿದೆ. ಇದರ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಕಾಬೂಲ್ ತೀವ್ರ ನೀರಿನ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಕಳೆದ ದಶಕದಲ್ಲಿ, ಕಾಬೂಲ್‌ನ ಅಂತರ್ಜಲ ಮಟ್ಟವು 25 ರಿಂದ 30 ಮೀಟರ್‌ಗಳಷ್ಟು (82 ರಿಂದ 98 ಅಡಿ) ಕುಸಿದಿದೆ. ವರ್ಷಕ್ಕೆ 44 ಮಿಲಿಯನ್ ಘನ ಮೀಟರ್‌ಗಳಷ್ಟು ನೀರನ್ನು ಹೊರತೆಗೆಯುತ್ತಿರುವುದೇ ಈ ಪರಿಸ್ಥಿತಿಗೆ ಕಾರಣವಾಗಿದೆ. ಇದು ಮುಂದುವರಿದರೆ, 2030 ರ ವೇಳೆಗೆ ಕಾಬೂಲ್‌ನ ಅಂತರ್ಜಲ ಮಟ್ಟ ಮತ್ತಷ್ಟು ಕುಸಿದು ನೀರೇ ಇಲ್ಲದ ನಗರವಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ನೀರಿಲ್ಲದೆ ಕಾಬೂಲ್‌ನ ಜನರು ತಮ್ಮ ಮನೆಗಳನ್ನು ತೊರೆಯಬೇಕಾಗುತ್ತದೆ. ಈಗ ಕ್ರಮ ಕೈಗೊಳ್ಳದಿದ್ದರೆ, ದೇಶಾದ್ಯಂತ ವ್ಯಾಪಕ ವಲಸೆ ಮತ್ತು ಬಿಕ್ಕಟ್ಟು ಉಂಟಾಗುತ್ತದೆ. ಕಾಬೂಲ್‌ನ ಕುಡಿಯುವ ನೀರಿನ ಪ್ರಮುಖ ಮೂಲವಾಗಿದ್ದ ಭೂಗತ ಕೊಳವೆಬಾವಿಗಳಲ್ಲಿ ಅರ್ಧದಷ್ಟು ಈಗಾಗಲೇ ಬತ್ತಿಹೋಗಿವೆ. 2001 ರಿಂದ ಕಾಬೂಲ್‌ನ ಜನಸಂಖ್ಯೆ 7 ಪಟ್ಟು ಹೆಚ್ಚಾಗಿದೆ. ಇದರಿಂದ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಪಂಜ್‌ಶೀರ್ ನದಿಯಿಂದ ನೀರಿನ ಪೈಪ್‌ಲೈನ್ ಯೋಜನೆಯು ಕಾಬೂಲ್‌ನ ಸುಮಾರು 20 ಲಕ್ಷ ಜನರಿಗೆ ನೀರನ್ನು ಒದಗಿಸಬಹುದು. ಆದರೆ ಇದಕ್ಕೆ ಭಾರೀ ಹಣ ಖರ್ಚುಮಾಡಬೇಕಿದೆ.

ಹಲವು ವರ್ಷಗಳಿಂದ ಮಳೆ ಕೊರತೆ 

ಕಾಬೂಲ್‌ನಲ್ಲಿ ಕಳೆದ ಕೆಲವು ವರ್ಷಗಳಿಂದ ಮಳೆ ತೀವ್ರವಾಗಿ ಕಡಿಮೆಯಾಗಿದೆ. ಅಂತರ್ಜಲವು ಮುಖ್ಯವಾಗಿ ಹಿಂದೂ ಕುಶ್ ಪರ್ವತಗಳಿಂದ ಬರುವ ಹಿಮ ಕರಗುವಿಕೆ ಮತ್ತು ಹಿಮನದಿಗಳಿಂದ ಮರುಪೂರಣಗೊಳ್ಳುತ್ತದೆ. ಆದರೆ ಅಕ್ಟೋಬರ್ 2023 ರಿಂದ ಜನವರಿ 2024 ರವರೆಗೆ, ಅಫ್ಘಾನಿಸ್ತಾನವು ತನ್ನ ಸಾಮಾನ್ಯ ಚಳಿಗಾಲದ ಮಳೆಯ ಕೇವಲ 45 ರಿಂದ 60% ಮಾತ್ರ ಪಡೆದಿದೆ. ಇದರ ಪರಿಣಾಮವಾಗಿ, ಭವಿಷ್ಯದಲ್ಲಿ ನೀರಿನ ಸಮಸ್ಯೆ ತೀವ್ರಗೊಳ್ಳುವ ಸಾಧ್ಯತೆಯಿದೆ.

ಈ ಬಿಕ್ಕಟ್ಟಿನ ಪರಿಣಾಮವಾಗಿ, ಕನಿಷ್ಠ 30 ಲಕ್ಷ ಜನರು ತಮ್ಮ ಮನೆಗಳನ್ನು ತೊರೆದು ಸ್ಥಳಾಂತರಗೊಳ್ಳಬೇಕಾಗಬಹುದು. ಯುನಿಸೆಫ್ ನೀಡಿರುವ ಮಾಹಿತಿ ಪ್ರಕಾರ, 50% ಬಾವಿಗಳು ಬತ್ತಿ ಹೋಗಿವೆ. ಇವು ನಗರದ ಹೆಚ್ಚಿನ ಜನರಿಗೆ ಕುಡಿಯುವ ನೀರಿನ ಮೂಲವಾಗಿದ್ದವು. ಈಗ ಜನರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.  

Share This Article