– ಅಫ್ಘಾನ್ನಲ್ಲಿ ತಾಲಿಬಾನ್ ಅಧಿಕಾರಕ್ಕೆ ಏರಿದ ಬಳಿಕ ಮೊದಲ ಭೇಟಿ
ನವದೆಹಲಿ: ತಾಲಿಬಾನ್ ಸರ್ಕಾರದ ಅಫ್ಘಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ (Amir Khan Muttaqi) ದೆಹಲಿಗೆ ಆಗಮಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ (Afghanistan) ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ ಅಲ್ಲಿನ ಸಚಿವರೊಬ್ಬರ ಮೊದಲ ಭಾರತ ಭೇಟಿ ಇದಾಗಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮುತಾಕಿ ಅವರಿಗೆ ಅಂತರರಾಷ್ಟ್ರೀಯ ಪ್ರಯಾಣ ನಿರ್ಬಂಧಗಳಿಂದ ತಾತ್ಕಾಲಿಕ ವಿನಾಯಿತಿ ನೀಡಿದ್ದರಿಂದ ಮುತ್ತಕಿ ಭಾರತಕ್ಕೆ ಬಂದಿದ್ದಾರೆ. ಭದ್ರತಾ ಮಂಡಳಿ ಅ.9 ಮತ್ತು 16 ರ ನಡುವೆ ಭಾರತಕ್ಕೆ (India) ಭೇಟಿ ನೀಡಲು ಅವಕಾಶ ನೀಡಿದೆ.
2021ರ ಆಗಸ್ಟ್ನಲ್ಲಿ ತಾಲಿಬಾನ್ (Taliban) ಅಧಿಕಾರ ವಶಪಡಿಸಿಕೊಂಡ ನಂತರ ಮೊದಲ ಉನ್ನತ ಮಟ್ಟದ ಸಭೆ ನಡೆಯಲಿರುವ ಕಾರಣ ಭಾರತ-ಅಫ್ಘಾನ್ ಸಂಬಂಧದ ಹೊಸ ಅಧ್ಯಾಯ ತೆರೆಯಲಿದೆ.
ಜೂನ್ 2022 ರಲ್ಲಿ ಹಿರಿಯ ರಾಜತಾಂತ್ರಿಕ ಜೆಪಿ ಸಿಂಗ್ ನೇತೃತ್ವದ ತಂಡ ಕಾಬೂಲ್ನಲ್ಲಿ ಅಮೀರ್ ಖಾನ್ ಮುತ್ತಕಿ ಅವರನ್ನು ಭೇಟಿಯಾಗಿದ್ದರು. ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಇದು ಭಾರತದ ಮೊದಲ ಭೇಟಿಯಾಗಿತ್ತು. ಇದನ್ನೂ ಓದಿ: ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಘರ್ಷಣೆ; 11 ಪಾಕಿಸ್ತಾನಿ ಸೈನಿಕರು, ಟಿಟಿಪಿಯ 19 ಉಗ್ರರು ಸಾವು
Warm welcome to Afghan Foreign Minister, Mawlawi Amir Khan Muttaqi on his arrival in New Delhi.
We look forward to engaging discussions with him on bilateral relations and regional issues. pic.twitter.com/Z4eo6dTctJ
— Randhir Jaiswal (@MEAIndia) October 9, 2025
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ಹಿರಿಯ ಐಎಫ್ಎಸ್ ಅಧಿಕಾರಿ ಜೆ.ಪಿ. ಸಿಂಗ್ ಸೇರಿದಂತೆ ಭಾರತೀಯ ಅಧಿಕಾರಿಗಳು ಮುತ್ತಕಿ ಮತ್ತು ಇತರ ತಾಲಿಬಾನ್ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆಗಾಗ ದುಬೈನಂತಹ ತಟಸ್ಥ ಸ್ಥಳಗಳಲ್ಲಿ ಭೇಟಿಯಾಗುತ್ತಿದ್ದರು.
ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ದುಬೈನಲ್ಲಿ ಅಫ್ಘಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರನ್ನು ಭೇಟಿಯಾಗಿದ್ದರು. ಭಾರತವು ಅಫ್ಘಾನಿಸ್ತಾನಕ್ಕೆ ನೀಡುತ್ತಿರುವ ಮಾನವೀಯ ನೆರವು, ವಿಶೇಷವಾಗಿ ಆರೋಗ್ಯ ವಲಯವನ್ನು ಬಲಪಡಿಸುವುದು ಮತ್ತು ನಿರಾಶ್ರಿತರ ಪುನರ್ವಸತಿಯನ್ನು ಬೆಂಬಲಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.
ಕೋವಿಡ್ ಸಮಯದಲ್ಲಿ ಭಾರತ ಉಚಿತವಾಗಿ ಲಸಿಕೆಯನ್ನು ನೀಡಿತ್ತು. ಈಗಲೂ ಭಾರತ ಅಫ್ಘಾನಿಸ್ತಾನಕ್ಕೆ ಆಹಾರ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ.
ಭಾರತವು ಪಾಕಿಸ್ತಾನದ ವಿರುದ್ಧ ಯಶಸ್ವಿಯಾಗಿ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ನಂತರ ಮೇ 15 ರಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮುತ್ತಕಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದರು. ಇದು 2021 ರ ನಂತರದ ಮೊದಲ ಸಚಿವ ಮಟ್ಟದ ಸಂಪರ್ಕವಾಗಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ತಾಲಿಬಾನ್ ಖಂಡಿಸಿದ್ದಕ್ಕಾಗಿ ಜೈಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಭಾರತ ಮತ್ತು ಅಫ್ಘಾನ್ ಜನರೊಂದಿಗಿನ ಸಾಂಪ್ರದಾಯಿಕ ಸ್ನೇಹವನ್ನು ಪುನರುಚ್ಚರಿಸಿದರು.