ಇಸ್ಲಾಮಾಬಾದ್: ಪಾಕಿಸ್ತಾನ-ಅಫ್ಘಾನಿಸ್ತಾನದ (Afghanistan-Pakistan) ನಡುವೆ ತಾರಕಕ್ಕೇರಿದ್ದ ಸಂಘರ್ಷಕ್ಕೆ ತೆರೆ ಬಿದ್ದಿದೆ. ಕತಾರ್ ಮತ್ತು ಟರ್ಕಿಯ ಮಧ್ಯಸ್ಥಿಕೆಯೊಂದಿಗೆ, ಎರಡೂ ರಾಷ್ಟ್ರಗಳು ತಕ್ಷಣದಿಂದಲೇ ಜಾರಿಗೆ ಬರುವಂತೆ ಕದನ ವಿರಾಮಕ್ಕೆ (Ceasefire) ಒಪ್ಪಿಕೊಂಡಿವೆ ಎಂದು ಕತಾರ್‌ನ ವಿದೇಶಾಂಗ ಸಚಿವಾಲಯ ಖಚಿತಪಡಿಸಿದೆ.
ದೋಹಾದಲ್ಲಿ ಪಾಕಿಸ್ತಾನದ ನಿಯೋಗದಲ್ಲಿ ರಕ್ಷಣಾ ಸಚಿವ ಖವಾಜಾ ಆಸಿಫ್ ಮತ್ತು ಗುಪ್ತಚರ ಮುಖ್ಯಸ್ಥ ಜನರಲ್ ಅಸಿಮ್ ಮಲಿಕ್ ಇದ್ದರು. ಅಫ್ಘಾನಿಸ್ತಾನದ ಪರವಾಗಿ ರಕ್ಷಣಾ ಸಚಿವ ಮೊಹಮ್ಮದ್ ಯಾಕೂಬ್ ನೇತೃತ್ವ ವಹಿಸಿದ್ದರು ಎಂದು ತಾಲಿಬಾನ್ ತಿಳಿಸಿದೆ.
ಈ ಹೊಸ ಒಪ್ಪಂದದ ಹೊರತಾಗಿಯೂ, ಉಭಯ ದೇಶಗಳು ಕದನ ವಿರಾಮ ಉಲ್ಲಂಘನೆಯ ಬಗ್ಗೆ ಪರಸ್ಪರ ಆರೋಪಗಳನ್ನು ಮುಂದುವರಿಸಿವೆ. ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ಪ್ರಧಾನಿ ಮೊಹಮ್ಮದ್ ಹಸನ್ ಅಖುಂದ್, ಅಫ್ಘಾನಿಸ್ತಾನ ಯುದ್ಧದ ಪರವಾಗಿಲ್ಲ ಮತ್ತು ಪಾಕಿಸ್ತಾನವು ಅಫ್ಘಾನಿಸ್ತಾನದ ಭೂಪ್ರದೇಶವನ್ನು ಉಲ್ಲಂಘಿಸುವ ಮೂಲಕ ಹೊಸ ದಾಳಿ ಪ್ರಾರಂಭಿಸಿದೆ ಎಂದು ಆರೋಪಿಸಿದ್ದಾರೆ.