ಅಫ್ಘಾನಿಸ್ತಾನ ಭೂಕಂಪ – ಸಾವಿನ ಸಂಖ್ಯೆ 800ಕ್ಕೆ ಏರಿಕೆ: 2000ಕ್ಕೂ ಹೆಚ್ಚು ಜನರಿಗೆ ಗಾಯ

By
2 Min Read

-ಮಾನವೀಯ ದೃಷ್ಟಿಯಿಂದ ಸಹಾಯ ಮಾಡಲು ಸಿದ್ಧ ಎಂದ ಮೋದಿ

ಕಾಬೂಲ್: ಅಫ್ಘಾನಿಸ್ತಾನದಲ್ಲಿ (Afghanistan) ಸಂಭವಿಸಿದ 6.0 ತೀವ್ರತೆಯ ಪ್ರಬಲ ಭೂಕಂಪದಿಂದಾಗಿ ಈವರೆಗೆ 800 ಮಂದಿ ಬಲಿಯಾಗಿದ್ದು, 2000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಭಾನುವಾರ ಮಧ್ಯರಾತ್ರಿ (ಆ.31) ಜಲಾಲಾಬಾದ್‌ನ ಪೂರ್ವ ಈಶಾನ್ಯಕ್ಕೆ ಸುಮಾರು 27 ಕಿ.ಮೀ ದೂರದಲ್ಲಿ 6.0 ತೀವ್ರತೆಯ ಭೂಕಂಪ ದಾಖಲಾಗಿದೆ. ಪೂರ್ವ ಅಫ್ಘಾನಿಸ್ತಾನದಾದ್ಯಂತ ಮೊದಲು ಭೂಕಂಪ ಸಂಭವಿಸಿದ ನಂತರ 30 ನಿಮಿಷಗಳ ಅವಧಿಯಲ್ಲಿಯೇ ಮತ್ತೆ ಮೂರರಿಂದ ನಾಲ್ಕು ಕಂಪನಗಳು ಸಂಭವಿಸಿವೆ. ಅವುಗಳ ತೀವ್ರತೆ 4 ರಿಂದ 5ರವರೆಗೆ ಇತ್ತು ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ – 622 ಮಂದಿ ಸಾವು, 500ಕ್ಕೂ ಹೆಚ್ಚು ಜನರಿಗೆ ಗಾಯ

ಈ ಕುರಿತು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ಪ್ರಕಾರ, ಸ್ಥಳೀಯ ಕಾಲಮಾನ ರಾತ್ರಿ 11:47ಕ್ಕೆ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದುವು ಆಗ್ನೇಯ ಅಫ್ಘಾನಿಸ್ತಾನದಲ್ಲಿ 160 ಕಿ.ಮೀ ಆಳದಲ್ಲಿ 34.50ಓ ಅಕ್ಷಾಂಶ ಮತ್ತು 70.81ಇ ರೇಖಾಂಶದಲ್ಲಿದೆ ಎಂದು ತಿಳಿಸಿದೆ.

ಭೂಕಂಪದಿಂದಾಗಿ ಕುನಾರ್ ಪ್ರಾಂತ್ಯದ ಮೂರು ಗ್ರಾಮಗಳು ಸಂಪೂರ್ಣವಾಗಿ ನೆಲಸಮವಾಗಿದ್ದು, ನುರ್ಗಲ್, ಚಾವ್ಕೇ ಮತ್ತು ವಾಟಪುರ್ ಜಿಲ್ಲೆಗಳಲ್ಲಿ ತೀವ್ರ ಹಾನಿಯಾಗಿದೆ. ಜೊತೆಗೆ ಹಲವರು ಮನೆಯ ಛಾವಣಿ ಅಡಿಯಲ್ಲಿಯೇ ಸಿಲುಕಿ ಸಾವನ್ನಪ್ಪಿದ್ದಾರೆ. ಸದ್ಯ ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರದೇಶದ ಗಡಿಯಲ್ಲಿ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿವೆ. ಪಾಕಿಸ್ತಾನ ಮತ್ತು ಉತ್ತರ ಭಾರತದ ಕೆಲವು ಪ್ರದೇಶಗಳಲ್ಲಿಯೂ ಭೂಕಂಪದ ಅನುಭವವಾಗಿದೆ. ದೆಹಲಿಯ ಎನ್‌ಸಿಆರ್ ಮತ್ತು ಇತರ ನಗರಗಳ ನಿವಾಸಿಗಳು ಕಂಪನದ ಅನುಭವವಾಗಿ ಭಯದಿಂದ ಮನೆಯಿಂದ ಹೊರಗೆ ಓಡಿದ್ದಾರೆ ಎಂದು ವರದಿಯಾಗಿದೆ.

ಇನ್ನೂ ಈ ಸಂಬಂಧ ಪ್ರಧಾನಿ ಮೋದಿ ಅಫ್ಘಾನಿಸ್ತಾನಕ್ಕೆ ಅಗತ್ಯ ನೆರವು ಕೊಡ್ತೇವೆ ಎಂದು ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಿಂದ ಉಂಟಾದ ಜೀವಹಾನಿಯಿಂದ ತೀವ್ರ ದುಃಖಿತನಾಗಿದ್ದೇನೆ. ಇಂತಹ ಸಮಯದಲ್ಲಿ ಮೃತರ ಕುಟುಂಬಸ್ಥರಿಗಾಗಿ ನಾವು ಪಾರ್ಥಿಸುತ್ತೇವೆ. ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ. ಮಾನವೀಯ ದೃಷ್ಟಿಯಿಂದ ಅಗತ್ಯವಿರುವ ಎಲ್ಲಾ ರೀತಿಯ ಸಹಾಯ ಮಾಡಲು ಸಿದ್ಧವಿದ್ದೇನೆ ಎಂದು ತಿಳಿಸಿದ್ದಾರೆ. ಇದರ ಬೆನ್ನಲ್ಲೇ 15 ಟನ್ ಪರಿಹಾರ ಸಾಮಾಗ್ರಿ ತೆರಳಿದೆ.ಇದನ್ನೂ ಓದಿ: ಭಯೋತ್ಪಾದನೆ ವಿಚಾರದಲ್ಲಿ ಡಬಲ್ ಸ್ಟ್ಯಾಂಡರ್ಡ್‌ ಸರಿಯಲ್ಲ: ಪಾಕ್ ಪ್ರಧಾನಿ ಮುಂದೆಯೇ ಪಹಲ್ಗಾಮ್ ದಾಳಿ ವಿಚಾರ ಪ್ರಸ್ತಾಪಿಸಿದ ಮೋದಿ

 

Share This Article