ಅಫ್ಘಾನಿಸ್ತಾನದಲ್ಲಿ ಭೂಕಂಪಕ್ಕೆ 800 ಮಂದಿ ಸಾವು – ನೆರವಿಗೆ ನಿಂತ ಭಾರತ; 15 ಟನ್‌ ಆಹಾರ ಸಾಮಗ್ರಿ ರವಾನೆ

By
1 Min Read

ಕಾಬೂಲ್: ಪೂರ್ವ ಅಫ್ಘಾನಿಸ್ತಾನದಲ್ಲಿ (Afghanistan) ಸಂಭವಿಸಿದ 6.3 ತೀವ್ರತೆಯ ಭೂಕಂಪಕ್ಕೆ ಇದುವರೆಗೆ ಸುಮಾರು 800 ಮಂದಿ ಮೃತಪಟ್ಟಿದ್ದಾರೆ. ದುರಂತಕ್ಕೆ ವಿಷಾದ ವ್ಯಕ್ತಪಡಿಸಿರುವ ಭಾರತ ಅಗತ್ಯ ನೆರವಿಗೆ ಧಾವಿಸಿದೆ.

ಭೂಕಂಪವು ಅಫ್ಘಾನಿಸ್ತಾನ ಮತ್ತು ನೆರೆಯ ಪಾಕಿಸ್ತಾನವನ್ನು ಕಂಗೆಡಿಸಿದೆ. ಮನೆಗಳ ಕೆಳಗೆ ಹೂತುಹೋಗಿರುವವರನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಭೂಕಂಪದ ತೀವ್ರತೆಗೆ ಸುಮಾರು 2,500 ಮಂದಿ ಗಾಯಗೊಂಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ ವಿಪತ್ತು ಸಂಭವಿಸುತ್ತಿದ್ದಂತೆ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಫ್ಘಾನ್ ವಿದೇಶಾಂಗ ಸಚಿವ ಮೌಲವಿ ಅಮೀರ್ ಖಾನ್ ಮುತ್ತಕಿ ಅವರೊಂದಿಗೆ ಮಾತನಾಡಿ, ದುರಂತದಲ್ಲಿ ನಾಗರಿಕರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅಫ್ಘಾನಿಸ್ತಾನದ ಸಂಕಷ್ಟದ ಸಮಯದಲ್ಲಿ ಅವರಿಗೆ ಸಹಾಯ ಮಾಡಲು, ಭಾರತವು ಡೇರೆಗಳು ಮತ್ತು ಆಹಾರ ಸಾಮಗ್ರಿಗಳನ್ನು ದೇಶಕ್ಕೆ ರವಾನಿಸಿದೆ ಎಂದು ಜೈಶಂಕರ್ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಫ್ಘಾನಿಸ್ತಾನಕ್ಕೆ ಹೆಚ್ಚಿನ ನೆರವು ನೀಡಲಾಗುವುದು ಎಂದಿದ್ದಾರೆ.

ಭಾರತ ಇಂದು ಕಾಬೂಲ್‌ನಲ್ಲಿ 1000 ಕುಟುಂಬ ಡೇರೆಗಳನ್ನು ತಲುಪಿಸಿದೆ. ಭಾರತೀಯ ಮಿಷನ್ 15 ಟನ್ ಆಹಾರ ಸಾಮಗ್ರಿಗಳನ್ನು ತಕ್ಷಣವೇ ಕಾಬೂಲ್‌ನಿಂದ ಕುನಾರ್‌ಗೆ ಸಾಗಿಸುತ್ತಿದೆ ಎಂದು ಜೈಶಂಕರ್‌ ತಿಳಿಸಿದ್ದಾರೆ.

ಭಾನುವಾರ ಮಧ್ಯರಾತ್ರಿಯ ಮೊದಲು ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಪಾಕಿಸ್ತಾನದ ಗಡಿಯಲ್ಲಿರುವ ಕುನಾರ್ ಪ್ರಾಂತ್ಯದಲ್ಲಿ ಅತ್ಯಂತ ಭೀಕರವಾದ ವಿನಾಶಕ್ಕೆ ಕಾರಣವಾಗಿದೆ. ಕುನಾರ್ ಪ್ರಾಂತ್ಯದಲ್ಲಿ ಮಾತ್ರ ಸುಮಾರು 800 ಜನರು ಸಾವನ್ನಪ್ಪಿದ್ದಾರೆ. ನೂರಾರು ಜನರು ಹತ್ತಿರದ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

ಅಫ್ಘಾನಿಸ್ತಾನದ ಭೂಕಂಪದ ಕೇಂದ್ರಬಿಂದು ಜಲಾಲಾಬಾದ್‌ನಿಂದ ಸುಮಾರು 27 ಕಿಲೋಮೀಟರ್ ದೂರದಲ್ಲಿತ್ತು. ಭೂಕಂಪವು ಭೂಮಿಯ ಮೇಲ್ಮೈಯಿಂದ ಎಂಟು ಕಿಲೋಮೀಟರ್ ಕೆಳಗೆ ಆಳದಲ್ಲಿ ಸಂಭವಿಸಿದೆ ಎಂದು ಯುಎಸ್‌ಜಿಎಸ್ ತಿಳಿಸಿದೆ.

ಕುನಾರ್ ಪ್ರಾಂತ್ಯದಲ್ಲಿ ನೂರ್ ಗುಲ್, ಸೋಕಿ, ವಾಟ್ಪುರ್, ಮನೋಗಿ ಮತ್ತು ಚಾಪಾ ದಾರಾ ಪ್ರದೇಶಗಳು ಅತಿ ಹೆಚ್ಚು ಹಾನಿಗೊಳಗಾಗಿವೆ. ದುರ್ಬಲವಾದ ಮಣ್ಣು ಮತ್ತು ಕಲ್ಲಿನಿಂದ ನಿರ್ಮಿಸಲಾದ ಇಡೀ ಹಳ್ಳಿಗಳು ಕುಸಿದಿವೆ. ಭೂಕುಸಿತಗಳು ಪ್ರಮುಖ ಮಾರ್ಗಗಳನ್ನು ಮುಚ್ಚಿಹಾಕಿವೆ. ಸಂವಹನ ಸ್ಥಗಿತವು ರಕ್ಷಣಾ ಮತ್ತು ಪರಿಹಾರ ಪ್ರಯತ್ನಗಳನ್ನು ಮತ್ತಷ್ಟು ಕುಂಠಿತಗೊಳಿಸಿದೆ.

Share This Article