ಅಂಜನಿಪುತ್ರ ಚಿತ್ರ ತಂಡಕ್ಕೆ ಮತ್ತೊಂದು ಸಂಕಷ್ಟ

Public TV
2 Min Read

ಬೆಂಗಳೂರು: ಅಂಜನಿಪುತ್ರ ಚಿತ್ರ ತಂಡಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ತನ್ನ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ದೂರಿನ ಅರ್ಜಿಯನ್ನು ಸಿಟಿ ಸಿವಿಲ್ ಕೋರ್ಟ್ ಮಾನ್ಯ ಮಾಡಿದೆ.

ಅಂಜನಿಪುತ್ರ ಚಿತ್ರದಲ್ಲಿ ವಕೀಲರ ಬಗ್ಗೆ ಅವಹೇಳನಕಾರಿ ಸಂಭಾಷಣೆ ಇದೆ. ಹೀಗಾಗಿ ಚಿತ್ರ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ವಕೀಲ ಜಿ. ನಾರಾಯಣಸ್ವಾಮಿ ಕೋರ್ಟ್ ನಲ್ಲಿ ದೂರು ಸಲ್ಲಿಸಿ ಮನವಿ ಮಾಡಿದ್ದರು. ಈ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಅಂಜನಿಪುತ್ರ ಸಿನಿಮಾವನ್ನು ಪ್ರದರ್ಶನ ಮಾಡದಂತೆ ಆದೇಶಿಸಿ ಜ. 3ಕ್ಕೆ ವಿಚಾರಣೆ ಮುಂದೂಡಿತ್ತು. ಇದನ್ನೂ ಓದಿ: ಅಂಜನಿಪುತ್ರ ಚಿತ್ರಕ್ಕೆ ತಡೆಯಾಜ್ಞೆ- ನಿರ್ಮಾಪಕ, ವಿತರಕ ಜಾಕ್ ಮಂಜು ಪ್ರತಿಕ್ರಿಯೆ

ಕೋರ್ಟ್ ಆದೇಶವಿದ್ದರೂ ಅಂಜನಿಪುತ್ರ ಸಿನಿಮಾ ಮಂದಿರಗಳಲ್ಲಿ ಪ್ರದರ್ಶನವಾಗುತ್ತಿರುವ ಹಿನ್ನೆಲೆಯಲ್ಲಿ ವಕೀಲ ಜಿ. ನಾರಾಯಣ ಸ್ವಾಮಿ ಸೇರಿದಂತೆ ಐವರು ವಕೀಲರು ನಿರ್ಮಾಪಕ, ನಿರ್ದೇಶಕರ ವಿರುದ್ಧ ನ್ಯಾಯಾಂಗ ನಿಂದನೆ ದೂರನ್ನು ನೀಡಿದ್ದರು. ಬುಧವಾರ ಈ ಅರ್ಜಿಯನ್ನು ನ್ಯಾ.ಐ.ಎಫ್. ಬಿದರಿ ಅವರಿದ್ದ ಪೀಠ ಮಾನ್ಯ ಮಾಡಿದೆ. ಇದನ್ನೂ ಓದಿ: ‘ಅಂಜನಿಪುತ್ರ’ ತಡೆಯಾಜ್ಞೆಗೆ ಪವರ್ ಸ್ಟಾರ್ ಪ್ರತಿಕ್ರಿಯಿಸಿದ್ದು ಹೀಗೆ

ಏನಿದು ಪ್ರಕರಣ?
“ನೀನು ಗಂಟೆ ಅಲ್ಲಾಡಿಸೋ ಹಾಗಿದ್ರೆ, ಕೋರ್ಟ್ ನಲ್ಲಿ ಅಲ್ಲಾಡ್ಸು. ಇಲ್ಲಿ ಅಲ್ಲಾಡಿಸಿದ್ರೆ ಕಟ್ ಮಾಡಿ ಬಿಡ್ತೀನಿ” ಎಂದು ರವಿ ಶಂಕರ್ ಇನ್ಸ್ ಪೆಕ್ಟರ್ ಆಗಿ ವಕೀಲರಿಗೆ ಹೇಳುವ ದೃಶ್ಯ ಸಿನಿಮಾದಲ್ಲಿದೆ. ಈ ಸಂಭಾಷಣೆಯಿಂದ ವಕೀಲರಿಗೆ ಅವಮಾನವಾಗಿದೆ. ಹೀಗಾಗಿ ಒಂದೋ ಅಂಜನಿಪುತ್ರ ಸಿನಿಮಾ ಪ್ರದರ್ಶನ ರದ್ದು ಮಾಡಿ, ಇಲ್ಲವೇ ವಕೀಲರ ಬಗೆಗಿನ ಅವಹೇಳನಕಾರಿ ಮಾತನ್ನು ತೆಗೆಯುವಂತೆ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು. ವಿಚಾರಣೆ ವೇಳೆ ಕೋರ್ಟ್ ಜ. 3ರವರೆಗೆ ಚಿತ್ರಪ್ರದರ್ಶನ ಮಾಡದಂತೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಈ ಸಂಬಂಧ ನೋಟಿಸ್ ಕೂಡ ಜಾರಿಯಾಗಿದೆ. ಆದರೆ ಆ ಸಂಭಾಷಣೆಯ ದೃಶ್ಯಾವಳಿಯನ್ನು ತೆಗೆದುಹಾಕದೇ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಚಿತ್ರಪ್ರದರ್ಶನ ಮಾಡಲಾಗುತ್ತಿದೆ ಎಂದು ವಕೀಲ ನಾರಾಯಣಸ್ವಾಮಿ ತಿಳಿಸಿದ್ದಾರೆ. ಇದನ್ನೂ ಓದಿ: ಅಂಜನಿಪುತ್ರದ ವಿರುದ್ಧ ನಾನು ದೂರು ನೀಡಿದ್ದು ಯಾಕೆ? ವಕೀಲ ನಾರಾಯಣಸ್ವಾಮಿ ಆರೋಪಿಸಿದ್ದು ಹೀಗೆ

ಸ್ಯಾಂಡಲ್ ವುಡ್ ಹನುಮಭಕ್ತ ಎ.ಹರ್ಷ ನಿರ್ದೇಶನದಲ್ಲಿ, ಎಮ್.ಎನ್.ಕುಮಾರ್ ನಿರ್ಮಾಣದಲ್ಲಿ ಅಂಜನಿಪುತ್ರ ಮೂಡಿಬಂದಿದ್ದು ಗುರುವಾರ ಬಿಡುಗಡೆಯಾಗಿತ್ತು. ಉಗ್ರಂ ಖ್ಯಾತಿಯ ರವಿಬಸ್ರೂರು ಅಂಜನಿಪುತ್ರ ಚಿತ್ರದ ಸಂಗೀತದ ಸಾರಥ್ಯ ವಹಿಸಿದ್ದಾರೆ. ಚಿತ್ರಕ್ಕೆ ಎಂ.ಎನ್. ಕುಮಾರ್ ಅವರು ಬಂಡವಾಳ ಹೂಡಿದ್ದಾರೆ.

 

 

Share This Article
Leave a Comment

Leave a Reply

Your email address will not be published. Required fields are marked *