ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿಗಾಗಿ ಆಗ್ರಹಿಸಿ ಆದಿವಾಸಿಗಳ ಅಹೋರಾತ್ರಿ ಧರಣಿ

Public TV
1 Min Read

ರಾಮನಗರ: ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿ ನೀಡುವಂತೆ ಆಗ್ರಹಿಸಿ ಕನಕಪುರ ತಾಲೂಕಿನ ಮರಳವಾಡಿಯ ಬುಡಗಯ್ಯನ ದೊಡ್ಡಿ ಗ್ರಾಮಸ್ಥರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಅರಣ್ಯದಲ್ಲಿ ವಾಸವಿದ್ದ ಬಗ್ಗೆ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡಲು ಬಂದಿದ್ದ ಅಧಿಕಾರಿಗಳನ್ನು ಆದಿವಾಸಿ ಇರುಳಿಗ ಸಮುದಾಯದವರು ತಡೆದು, ಜಿಲ್ಲಾ ಉಪ ವಿಭಾಗಾಧಿಕಾರಿಯೇ ಸ್ಥಳಕ್ಕೆ ಬರಬೇಕು. ಈ ಹಿಂದೆ ನಡೆಸಿದ ಸರ್ವೆ ವರದಿ ಏನಾಯ್ತು ಎಂದು ತಿಳಿಸಬೇಕು ಎಂದು ಸರ್ವೇ ಕಾರ್ಯವನ್ನ ಅಡ್ಡಿಪಡಿಸಿದ್ದಾರೆ. ಅಲ್ಲದೇ ಸಂಜೆಯಾದರೂ ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ.

ಮರಳವಾಡಿ ಹೋಬಳಿ ಬುಡಗಯ್ಯನ ದೊಡ್ಡಿ ಗ್ರಾಮ ಸಮೀಪದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಅರಣ್ಯ ಭೂಮಿಯಲ್ಲಿ ಆದಿವಾಸಿಗಳು ವಾಸವಿದ್ದಾರೆ. ಈ ಹಿಂದೆ ಕೂಡ ನಾವು ಇಲ್ಲಿಯೇ ಅರಣ್ಯವಾಸಿಗಳಾಗಿ ವಾಸವಿದ್ದೆವು. ನಮ್ಮನ್ನು ಬಲವಂತವಾಗಿ ಇಲ್ಲಿಂದ ಒಕ್ಕಲೆಬ್ಬಿಸಲಾಯಿತು. ಅರಣ್ಯವಾಸಿಗಳ ಅರಣ್ಯ ಹಕ್ಕು ಕಾಯ್ದೆಯಡಿ ನಮಗೆ ಭೂಮಿ ಕೊಡುವುದಾಗಿ 93 ಮಂದಿಯಿಂದ ಅರ್ಜಿಯನ್ನು ಪಡೆದುಕೊಳ್ಳಲಾಗಿತ್ತು. ಆದರೆ ಇಲ್ಲಿಯವರೆಗೂ ಭೂಮಿ ಕೊಟ್ಟಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

2017ರಲ್ಲಿ ಇದೇ ರೀತಿ 93 ಮಂದಿ ಆದಿವಾಸಿಗಳು ಪ್ರತಿಭಟನೆ ನಡೆಸಿದ್ದ ಪರಿಣಾಮ ಸರ್ಕಾರವು ಸರ್ವೇ ನಡೆಸಿ ಭೂಮಿ ನೀಡುವಂತೆ ಸೂಚಿಸಿತ್ತು. ವಾಸವಿದ್ದ ಕುರುಹುಗಳನ್ನು ಆಧರಿಸಿ ಸರ್ವೇ ಮಾಡಿಸಿ ಶೀಘ್ರವೇ ಭೂಮಿ ನೀಡಿ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಇಲ್ಲಿಯ ತನಕ ನೀಡಿಲ್ಲ ಎಂದು ಪ್ರತಿಭಟನಾಕಾರರು ಅಹೋರಾತ್ರಿ ಹಾಗೂ ಅನಿರ್ಧಿಷ್ಟಾವಧಿ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಈಗಾಗಲೇ ಆದಿವಾಸಿ ಇರುಳಿಗರು ಅರಣ್ಯಕ್ಕೆ ಕಾಲಿಟ್ಟು ಟೆಂಟ್‍ಗಳನ್ನು ನಿರ್ಮಿಸಿಕೊಂಡು ಇದೇ ಸ್ಥಳದಲ್ಲಿ ವಾಸ ಮಾಡುವುದಾಗಿ ಮಕ್ಕಳು, ಮನೆಯವರನ್ನ ಕರೆದುಕೊಂಡು ಹೋಗಿ ಠಿಕಾಣಿ ಹೂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *