ಬೆಂಗಳೂರು: ಬಾಂಬ್ ಹೇಗೆ ತಯಾರಿಸಬೇಕೆಂದು ತಿಳಿಯಲು ಆದಿತ್ಯ ರಾವ್ ಉಗ್ರ ಸಂಘಟನೆ ಜೊತೆ ಸಂಪರ್ಕಕ್ಕೂ ಯತ್ನಿಸಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಡಬೇಕು ಎಂದು ನಿರ್ಧರಿಸಿದಾಗ ಉಗ್ರ ಸಂಟಘನೆಯನ್ನು ಸಂಪರ್ಕಿಸಲು ಆದಿತ್ಯ ಮುಂದಾಗಿದ್ದನು. ಬಾಂಬ್ ಹೇಗೆ ತಯಾರಿಸುತ್ತಾರೆ? ಯಾವ ವಸ್ತುಗಳು ಬೇಕು ಎನ್ನುವ ಬಗ್ಗೆ ತಿಳಿಯಲು ಉಗ್ರ ಸಂಟಘನೆಯ ಜೊತೆ ಸಂಪರ್ಕಿಸಲು ಯತ್ನಿಸಿದ್ದನು. ಆದರೆ ಕೊನೆಗೆ ಧೈರ್ಯ ಸಾಲದೇ ಸುಮ್ಮನಾಗಿದ್ದನು. ಬಳಿಕ ಯೂಟ್ಯೂಬ್ ನೋಡಿ ಆದಿತ್ಯ ಬಾಂಬ್ ತಯಾರಿಸಿದ್ದಾನೆ ಎನ್ನುವ ವಿಚಾರ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ. ಇದನ್ನೂ ಓದಿ: ಹೌದು, ಬಾಂಬ್ ಇಟ್ಟಿದ್ದು ನಾನೇ – ತಪ್ಪೊಪ್ಪಿಕೊಂಡ ಆದಿತ್ಯ ರಾವ್
ಒಂದು ಎರಡು ಬಾರಿ ತಯಾರಿಕೆಯ ವೇಳೆ ಬಾಂಬ್ ಸಿಡಿದು ಆರೋಪಿ ಕೈಗೆ ಏಟು ಮಾಡಿಕೊಂಡಿದ್ದನು. ಭಯ ಪಡುವ ವ್ಯಕ್ತಿತ್ವ ಹೊಂದಿದ್ದ ಈತನಿಗೆ ಧೈರ್ಯ ಇರಲಿಲ್ಲ ಎನ್ನುವ ವಿಚಾರ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಮಾನಸಿಕ ರೋಗಿಯಂತಿದ್ದ, ಯಾರೊಂದಿಗೂ ಮಾತನಾಡುತ್ತಿರಲಿಲ್ಲ: ಆದಿತ್ಯ ಸಹದ್ಯೋಗಿ
ಇಂದು ಮುಂಜಾನೆ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜ್ ಅವರ ಕಚೇರಿಗೆ ಆಗಮಿಸಿ ಆದಿತ್ಯ ರಾವ್ ಶರಣಾಗಿದ್ದಾನೆ. ಈ ವೇಳೆ ನಡೆದ ಪ್ರಾಥಮಿಕ ವಿಚಾರಣೆ ಸಮಯದಲ್ಲಿ ಆದಿತ್ಯ ರಾವ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದು ನಾನೇ ಎಂದು ಹೇಳಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಸಿಸಿಟಿವಿಯಲ್ಲಿ ತನ್ನ ಫೋಟೋ ಪ್ರಕಟವಾಗುತ್ತಿದ್ದ ಭಯಗೊಂಡಿದ್ದ ಆದಿತ್ಯ ರಾವ್ ಉಡುಪಿಯಿಂದ ಆಗಮಿಸಿ ಇಂದು ಶರಣಾಗಿದ್ದಾನೆ.