ಪುಟ್ಟಣ್ಣ ಕಣಗಾಲ್‍ಗೆ ರಂಗನಾಯಕಿಯ ಗೌರವ!

Public TV
1 Min Read

ಬೆಂಗಳೂರು: ರಂಗನಾಯಕಿ ಎಂಬ ಹೆಸರು ಕೇಳಿದಾಕ್ಷಣವೇ ಕನ್ನಡದ ಪ್ರೇಕ್ಷಕರಿಗೆ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನೆನಪಾಗುತ್ತಾರೆ. ಆರತಿಯವರ ಮನೋಜ್ಞ ಅಭಿನಯ ನೆನಪಾಗುತ್ತದೆ. ಆ ಕಾಲಕ್ಕೆ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿ ಸೂಪರ್ ಹಿಟ್ ಆಗಿದ್ದ ಈ ಚಿತ್ರ ಈವರೆಗೂ ತನ್ನೆಡೆಗಿನ ಕ್ರೇಜ್ ಆನ್ನು ಹಾಗೆಯೇ ಕಾಯ್ದಿಟ್ಟುಕೊಂಡು ಬಂದಿದೆ. ಇದೀಗ ದಯಾಳ್ ಪದ್ಮನಾಭನ್ ಅದೇ ಶೀರ್ಷಿಕೆಯನ್ನಿಟ್ಟುಕೊಂಡು ನಿರ್ದೇಶನ ಮಾಡಿರೋ ಚಿತ್ರ ಇದೇ ನವೆಂಬರ್ ಎಂಟರಂದು ತೆರೆಗಾಣುತ್ತಿದೆ.

ಒಂದು ಯಶಸ್ವೀ ಚಿತ್ರದ ಶೀರ್ಷಿಕೆಯಲ್ಲಿಯೆ ಹೊಸಾ ಚಿತ್ರಗಳು ತೆರೆ ಕಾಣೋದೇನು ಹೊಸತಲ್ಲ. ಆದರೆ ಕಥೆ ಪೂರಕವಾಗಿ, ಮೂಲ ಚಿತ್ರದ ಘನತೆಯನ್ನು ಮತ್ತಷ್ಟು ಮಿರುಗಿಸುವಂಥಾ ಕಥೆಗಳು ದೃಷ್ಯ ರೂಪ ಪಡೆಯೋದು ಮಾತ್ರ ಅಪರೂಪದ ಬೆಳವಣಿಗೆ. ಆರಂಭದಲ್ಲಿ ಕಣಗಾಲ್ ನಿರ್ದೇಶನದ ರಂಗನಾಯಕಿ ಎಂಬ ಶೀರ್ಷಿಕೆಯನ್ನು ತಮ್ಮ ಚಿತ್ರಕ್ಕಿಡೋ ಸಂದರ್ಭ ಬಂದಾಗ ಖುದ್ದು ದಯಾಳ್ ಅವರೇ ತಲ್ಲಣಿಸಿದ್ದರಂತೆ. ರಂಗನಾಯಕಿಯ ಹೆಸರಿಗೆ ಕುಂದುಂಟಾಗದಂತೆ ಈ ಸಿನಿಮಾ ನಿರ್ದೇಶನ ಮಾಡಲು ತನ್ನಿಂದ ಸಾಧ್ಯವಾಗುತ್ತದಾ ಎಂದು ಕೇಳಿಕೊಂಡಿದ್ದರಂತೆ.

ಇದೀಗ ರಂಗನಾಯಕಿ ರೆಡಿಯಾಗಿ ನಿಂತಿದೆ. ದಯಾಳ್ ಕೂಡಾ ನಿರಾಳ ಭಾವದಿಂದಿದ್ದಾರೆ. ಇದು ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೆ ಗೌರವ ಸೂಚಿಸುವ ರೀತಿಯಲ್ಲಿ ಮೂಡಿ ಬಂದಿದೆ ಎಂಬ ಸಾರ್ಥಕ ಭಾವ ಅವರಲ್ಲಿದೆ. ಈ ಚಿತ್ರ ಗೋವಾ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್‍ಗೆ ಆಯ್ಕೆಯಾಗಿರೋದೇ ಒಂದು ಗೌರವದ ವಿಚಾರ. ಅದು ಪುಟ್ಟಣ್ಣ ಕಣಗಾಲ್ ಅವರಂಥಾ ಮೇರು ನಿರ್ದೇಶಕನಿಗೆ ಸಲ್ಲಿಸೋ ಮಹಾ ಗೌರವ ಎಂಬುದರಲ್ಲಿ ಎರಡು ಮಾತಿಲ್ಲ. ಬಿಡುಗಡೆ ಪೂರ್ವದಲ್ಲಿಯೇ ಇಷ್ಟೊಂದು ಮಿಂಚುತ್ತಿರೋ ರಂಗನಾಯಕಿ ಬಿಡುಗಡೆಯ ನಂತರ ದೇಶ ಮಟ್ಟದಲ್ಲಿ ಸದ್ದು ಮಾಡಲಿದೆ ಎಂಬ ನಂಬಿಕೆ ಚಿತ್ರತಂಡದಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *