ಮೆದುಳು ಜ್ವರಕ್ಕೆ ಮೃತಪಟ್ಟ ಮಕ್ಕಳ ಸಂಖ್ಯೆ 108ಕ್ಕೆ ಏರಿಕೆ- 290 ಮಕ್ಕಳು ಆಸ್ಪತ್ರೆಗೆ ದಾಖಲು

Public TV
2 Min Read

ಪಾಟ್ನಾ: ಅಕ್ಯೂಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್(ಎಇಎಸ್)ಗೆ ಬಿಹಾರದ ಮುಜಾಫರ್​​​ನಗರ ತತ್ತರಿಸಿ ಹೋಗಿದ್ದು, ಈವರೆಗೆ ಮೆದುಳು ಜ್ವರಕ್ಕೆ ಬರೋಬ್ಬರಿ 108 ಮಕ್ಕಳು ಬಲಿಯಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ನಿತೀಶ್ ಕುಮಾರ್, ಶ್ರೀಕೃಷ್ಣ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು. ಜಿಲ್ಲಾಧಿಕಾರಿಗಳ ಪ್ರಕಾರ, ಮಿದುಳು ಜ್ವರದಿಂದ ಬಳಲುತ್ತಿದ್ದ 89 ಮಕ್ಕಳು ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟರೆ, 19 ಮಕ್ಕಳು ಕೇಜ್ರಿವಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಇನ್ನೂ 290 ಮಕ್ಕಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಮವಾರದಂದು ನಡೆದ ರಾಜ್ಯ ಆರೋಗ್ಯ ಇಲಾಖೆಯ ಸಭೆ ವೇಳೆ ಆರೋಗ್ಯ ಸಚಿವ ಮಂಗಲ್ ಪಾಂಡೆ ಅವರು ಮಕ್ಕಳು ಮೆದುಳು ಜ್ವರದಿಂದ ಸಾವನ್ನಪ್ಪುತ್ತಿರುವುದರ ಬಗ್ಗೆ ಮಾತನಾಡುವ ಬದಲು ಕ್ರಿಕೆಟ್ ಪಂದ್ಯದ ಕುರಿತು ಪ್ರಶ್ನಿಸುತ್ತಿದ್ದು ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿರುದಕ್ಕೆ ಉದಾಹರಣೆಯಾಗಿದೆ. ‘ಕ್ರಿಕೆಟ್ ಪಂದ್ಯದ ಫಲಿತಾಂಶ ಏನಾಯ್ತು?’ ಎಂದು ಸಚಿವರು ಪ್ರಶ್ನಿಸುತ್ತಿರುವುದು ಮತ್ತು ಮತ್ತೊಬ್ಬ ವ್ಯಕ್ತಿ `4ನೇ ವಿಕೆಟ್ ಹೊಗಿದೆ’ ಎಂದು ಸಭೆಯಲ್ಲಿ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಮಕ್ಕಳ ಸಾವಿನ ಕುರಿತು ರಾಜ್ಯದ ಸಚಿವರು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿರುವುದು ಸರ್ಕಾರಕ್ಕೆ ತೀವ್ರ ಮುಜುಗರ ಸೃಷ್ಟಿಸಿದ್ದು, ಸಚಿವರ ಈ ನಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಈ ಹಿಂದೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಹಾಯಕ ಸಚಿವ ಅಶ್ವಿನಿ ಕುಮಾರ್ ಚೌಬೆ ತೂಕಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಆ ಬಳಿಕ ಈ ಬಗ್ಗೆ ಚೌಬೆ ಅವರು ಸ್ಪಷ್ಟಿಕರಿಸಿ, ‘ನಾನು ನಿದ್ರಿಸುತ್ತಿರಲಿಲ್ಲ, ಪತ್ರಿಕಾಗೋಷ್ಠಿ ಬಗ್ಗೆ ಯೋಚಿಸುತ್ತಿದ್ದೆ’ ಎಂದು ಹೇಳಿದ್ದರು. ಆ ಬಳಿಕ ಸೋಮವಾರ ಸ್ವತಃ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರೇ, ಸಾವಿನ ಬಗ್ಗೆ ಪ್ರತಿದಿನ ಹೇಳಿಕೆಗಳನ್ನು ನೀಡುವುದಿಲ್ಲ ಎಂದಿದ್ದರು.

ಆಸ್ಪತ್ರೆಗೆ ದಾಖಲಾಗಿರುವವರು, ನೀಡಲಾಗುತ್ತಿರುವ ಚಿಕಿತ್ಸೆ, ಮೃತಪಟ್ಟ ಕುಟುಂಬಕ್ಕೆ ನೀಡುವ ಪರಿಹಾರ, ನೆರವುಗಳ ಕುರಿತು ವರದಿ ಸಲ್ಲಿಸುವಂತೆ ಮಾನವ ಹಕ್ಕುಗಳ ಆಯೋಗ ಆರೋಗ್ಯ ಸಚಿವಾಲಯಕ್ಕೆ ಕೇಳಿದೆ. ಹಾಗೆಯೇ ಈ ಬಗ್ಗೆ ನಾಲ್ಕು ವಾರದೊಳಗೆ ಉತ್ತರ ನೀಡುವಂತೆ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *