ಶಿವಣ್ಣಗೆ ನಾಯಕಿಯಾಗುವ ಲಕ್ಕಿ ಚಾನ್ಸ್ ಗಿಟ್ಟಿಸಿಕೊಂಡ ರುಕ್ಮಿಣಿ ವಸಂತ್

Public TV
2 Min Read

ಸ್ಯಾಂಡಲ್‌ವುಡ್‌ಗೆ (Sandalwood) ಭರವಸೆಯ ನಟಿ ಸಿಕ್ಕಿದ್ದಾರೆ. ರಿಲೀಸ್ ಆಗಿದ್ದು ಒಂದೇ ಸಿನಿಮಾ ಆಗಿದ್ರೂ ಕೂಡ ಸಾಲು ಸಾಲು ಸಿನಿಮಾ ಅವಕಾಶ ಬಾಚಿಕೊಳ್ತಿದ್ದಾರೆ. ಅವರೇ ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ನಾಯಕಿ ರುಕ್ಮಿಣಿ ವಸಂತ್. ಸದ್ಯ ಶಿವರಾಜ್‌ಕುಮಾರ್ ನಟನೆಯ ‘ಭೈರತಿ ರಣಗಲ್‌’ಗೆ (Bhairathi Rangal) ನಾಯಕಿಯಾಗುವ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟಿದ್ದಾರೆ.

5 ವರ್ಷಗಳ ಹಿಂದೆ ಬಂದಿದ್ದ ‘ಮಫ್ತಿ’ (Mufti) ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಆ ಸಮಯದಲ್ಲೇ ಶಿವಣ್ಣ ಸೀಕ್ವೆಲ್ ಮಾಡುವ ಬಗ್ಗೆ ಮಾತನಾಡಿದ್ದರು. ನಂತರ ಅದು ಸೀಕ್ವೆಲ್ ಅಲ್ಲ ಪ್ರೀಕ್ವೆಲ್ ಅನ್ನೋದ ಖಚಿತವಾಗಿತ್ತು. ಚಿತ್ರದಲ್ಲಿ ಸೆಂಚುರಿ ಸ್ಟಾರ್ ಮಾಫಿಯಾ ಡಾನ್ ‘ಭೈರತಿ ರಣಗಲ್’ ಪಾತ್ರದಲ್ಲಿ ಅಬ್ಬರಿಸಿದ್ದರು. ರಾಕ್ಷಸನಂತಹ ಪಾತ್ರದಲ್ಲಿ ಶಿವಣ್ಣ ಹೆಚ್ಚು ಡೈಲಾಗ್‌ಗಳಿಲ್ಲದೇ ಕಣ್ಣಿನಲ್ಲೇ ನಟಿಸಿ ಕಮಾಲ್ ಮಾಡಿದ್ದರು. ಆ ಪಾತ್ರ ಪ್ರೇಕ್ಷಕರನ್ನು ಆವರಿಸಿಕೊಂಡಿತ್ತು. ಇದೀಗ ‘ಭೈರತಿ ರಣಗಲ್’ ಯಾರು? ಆತನ ಹಿನ್ನೆಲೆ ಏನು ಎನ್ನುವುದನ್ನು ತೆರೆ ತರಲಾಗುತ್ತಿದೆ. ಇದೀಗ ಶಿವಣ್ಣಗೆ ಜೋಡಿಯಾಗುವ ನಾಯಕಿಯ ಅನಾವರಣವಾಗಿದೆ.

ಗೀತಾ ಶಿವರಾಜ್‌ಕುಮಾರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ‘ಭೈರತಿ ರಣಗಲ್’ ಚಿತ್ರಕ್ಕೆ ಯುವನಟಿ ರುಕ್ಮಿಣಿ ವಸಂತ್ ನಾಯಕಿ ಎಂದು ಚಿತ್ರತಂಡ ಅನೌನ್ಸ್ ಮಾಡಿದ್ದಾರೆ. ಇತ್ತೀಚಿಗೆ ನಡೆದ ಚಿತ್ರದ ಮುಹೂರ್ತ ಸಮಾರಂಭದಲ್ಲಿ ನಾಯಕಿ ಬಗ್ಗೆ ಕೇಳಲಾದ ಪ್ರಶ್ನೆಗೆ ನಿರ್ದೇಶಕ ನರ್ತನ್ ಪ್ರತಿಕ್ರಿಯೆ ನೀಡಿದ್ದರು. ನಾಯಕಿಯ ಪಾತ್ರಕ್ಕೆ ಬಹಳ ಪ್ರಾಮುಖ್ಯತೆಯಿದೆ. ಹಾಗಾಗಿ ಆ ಪಾತ್ರಕ್ಕೆ ಯಾರು ಸೂಕ್ತ ಎಂದು ಎನಿಸುತ್ತಾರೋ ಅವರನ್ನೇ ಆಯ್ಕೆ ಮಾಡುತ್ತೀವಿ ಎಂದಿದ್ದರು. ಈಗ ನಟಿ ರುಕ್ಮಿಣಿ ಅವರ ಆಯ್ಕೆಯಾಗಿದೆ. ಇದನ್ನೂ ಓದಿ:ಆ ಸಂಬಂಧ ಅರ್ಧಕ್ಕೆ ನಿಂತು ಹೋಯಿತು, ಆದ್ರೆ ನನಗೆ ಮದುವೆ ಬಗ್ಗೆ ನಂಬಿಕೆಯಿದೆ- ನಟಿ ವೈಷ್ಣವಿ

ಮೊದಲ ಬಾರಿಗೆ ಶಿವರಾಜ್‌ಕುಮಾರ್‌ಗೆ ನಾಯಕಿಯಾಗಿ ತೆರೆಹಂಚಿಕೊಳ್ಳಲು ನಟಿ ರುಕ್ಮಿಣಿ ರೆಡಿಯಾಗಿದ್ದಾರೆ. ಎಂದೂ ಮಾಡಿರದ ಪಾತ್ರದಲ್ಲಿ ನಟಿ ಜೀವತುಂಬಲಿದ್ದಾರೆ. ಜೂನ್ 10ರಿಂದ ಶೂಟಿಂಗ್ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ. ಸದ್ಯ ರುಕ್ಮಿಣಿ, ವಿಜಯ್ ಸೇತುಪತಿ ಜೊತೆ ಮಲೇಷಿಯಾದಲ್ಲಿ ತಮಿಳು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

‘ಘೋಸ್ಟ್’ ಶ್ರೀನಿ ನಿರ್ದೇಶನದ ‘ಬೀರ್‌ಬಲ್’ ಚಿತ್ರಕ್ಕೆ ನಾಯಕಿ ನಟಿಯಾಗಿ ಬೆಂಗಳೂರು ಬ್ಯೂಟಿ ರುಕ್ಮಿಣಿ ಎಂಟ್ರಿ ಕೊಟ್ಟರು. ಮೊದಲ ಸಿನಿಮಾದಲ್ಲೇ ನಟಿ ಗಮನ ಸೆಳೆದರು. ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ‘ಬಾನದಾರಿಯಲಿ’, ರಕ್ಷಿತ್ ಶೆಟ್ಟಿ ಜೊತೆ ‘ಸಪ್ತಸಾಗರದಾಚೆ ಎಲ್ಲೋ’, ಶ್ರೀಮುರಳಿ ಜೊತೆ ‘ಬಘೀರ’ ಸಿನಿಮಾ ತೆರೆಗೆ ಬರೋದ್ದಕ್ಕೆ ರೆಡಿಯಾಗಿದೆ. ತಮಿಳಿನ ನಟ ವಿಜಯ್ ಸೇತುಪತಿ (Vijay Seethupathi) ಜೊತೆ ರುಕ್ಮಿಣಿ ನಟಿಸುತ್ತಿದ್ದಾರೆ. ಈ ಬೆನ್ನಲ್ಲೇ ಶಿವಣ್ಣ ಜೊತೆ ನಟಿಸುವ ಬಂಪರ್ ಆಫರ್ ಕನ್ನಡದ ಯುವನಟಿಗೆ ಸಿಕ್ಕಿದೆ.

Share This Article