ನಟಿ ರಮ್ಯಾ ಮದುವೆಗೆ ಹುಡುಗ ಬೇಕಾಗಿದ್ದಾನೆ: ಹುಡುಕಿ ಕೊಡಿ ಪ್ಲೀಸ್..

Public TV
1 Min Read

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Ramya) ಮದುವೆ ವಿಚಾರ ಮತ್ತೆ ಪ್ರಸ್ತಾಪವಾಗಿದೆ. ಮಂಡ್ಯ ಕ್ಷೇತ್ರದ ಚುನಾವಣೆ ಪ್ರಚಾರಕ್ಕಾಗಿ ಆಗಮಿಸಿದ್ದ ರಮ್ಯಾರನ್ನು ಅಭಿಮಾನಿಗಳು ಅನೇಕ ಪ್ರಶ್ನೆಗಳನ್ನು ಕೇಳಿದರು. ಅದರಲ್ಲಿ ಪ್ರಮುಖವಾದದ್ದು ಮದುವೆ (Marriage) ಕುರಿತಾದ ಪ್ರಶ್ನೆ. ‘ರಮ್ಯಾ ಮದುವೆ ಯಾವಾಗ ಆಗುತ್ತಾರೆ?’ ಎನ್ನುವ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಅವರು, ನನಗೆ ಹುಡುಗ ಸಿಗುತ್ತಿಲ್ಲ. ನೀವೇ ಹುಡುಗನನ್ನು ಹುಡುಕಿಕೊಡಿ ಎಂದು ಮಾಧ್ಯಮದವರಿಗೆ ಜವಾಬ್ದಾರಿ ನೀಡಿದರು.

ಮುಂದುವರೆದು ಮಾತನಾಡಿದ ರಮ್ಯಾ, ‘ನನಗೂ ಹುಡುಗನ್ನ ನೋಡಿ ನೋಡಿ ಸಾಕಾಗೋಯ್ತು. ಮಂಡ್ಯದಲ್ಲೇ ಸ್ವಯಂವರನೇ ಮಾಡಿ’ ಎಂದು ಹಾಸ್ಯ ಚಟಾಕಿ ಬೇರೆ ಹಾರಿಸಿದರು. ರಮ್ಯಾ ಎಲ್ಲಿಗೆ ಹೋಗಲಿ ಮದುವೆ ವಿಚಾರ ಪ್ರಸ್ತಾಪವಾಗುತ್ತದೆ. ಆದರೆ, ಅವರು ಮಾತ್ರ ಅದನ್ನು ಕೂಲ್ ಆಗಿ ತಗೆದುಕೊಂಡು ಹಾಸ್ಯದಲ್ಲೇ ಮಾತನ್ನು ತೇಲಿಸಿ ಬಿಡುತ್ತಾರೆ. ಹಾಗಾಗಿ ನಗೆಚಾಟಿಕೆಯಲ್ಲೇ ಮದುವೆ ಪ್ರಸ್ತಾಪ ಮುಗಿದು ಹೋಗುತ್ತದೆ. ಇದನ್ನೂ ಓದಿ:ಗೃಹ ಪ್ರವೇಶದ ಸಂಭ್ರಮದಲ್ಲಿ ‘ರಾಧಾ ರಮಣ’ ನಟಿ ಕಾವ್ಯ ಗೌಡ

ಸಿನಿಮಾ ಮತ್ತು ರಾಜಕಾರಣದಿಂದ ದೂರ ಉಳಿದಿದ್ದ ರಮ್ಯಾ ಇತ್ತೀಚಿನ ದಿನಗಳಲ್ಲಿ ಮತ್ತೆ ಎರಡೂ ಕ್ಷೇತ್ರಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮದೇ ಬ್ಯಾನರ್ ಶುರು ಮಾಡಿ ಆ ಮೂಲಕ ಸಿನಿಮಾವೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ. ಇವರ ನಿರ್ಮಾಣದ ಚಿತ್ರಕ್ಕೆ ರಾಜ್ ಬಿ ಶೆಟ್ಟಿ ನಾಯಕ ಹಾಗೂ ನಿರ್ದೇಶಕ. ಇದೇ ಚಿತ್ರದ ಮೂಲಕ ರಮ್ಯಾ ನಟಿಯಾಗಿಯೂ ಕಮ್ ಬ್ಯಾಕ್ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಕೇವಲ ನಿರ್ಮಾಪಕಿಯಾಗಿ ಮಾತ್ರ ಉಳಿದರು.

ನಿರ್ಮಾಪಕಿಯ ನಂತರ ಸಿನಿಮಾದಲ್ಲೂ ನಟಿಸುತ್ತಿದ್ದು, ಧನಂಜಯ್ ಸಿನಿಮಾದಲ್ಲಿ ರಮ್ಯಾ ವಿಶೇಷ ಪಾತ್ರ ಮಾಡಲಿದ್ದಾರೆ. ಉತ್ತರಕಾಂಡ ಹೆಸರಿನಲ್ಲಿ ತಯಾರಾಗಬೇಕಿರುವ ಚಿತ್ರದಲ್ಲಿ ರಮ್ಯಾ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ಅಲ್ಲದೇ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲೂ ಸಕ್ರೀಯರಾಗಿದ್ದು, ಮಂಡ್ಯ ಸೇರಿದಂತೆ ಹಲವು ಕಡೆ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ.

Share This Article