ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ (Radhika Pandit) ಈ ಬಾರಿಯ ಗಣೇಶ ಚತುರ್ಥಿ ಹಬ್ಬವನ್ನ ಅಮ್ಮನ ಮನೆಯಲ್ಲಿ ಆಚರಿಸಿದ್ದಾರೆ. ಮಕ್ಕಳಾದ ಐರಾ ಹಾಗೂ ಯಥರ್ವ್ ಜೊತೆ ತವರು ಮನೆಯಲ್ಲಿ ಗಣೇಶ ಪೂಜೆ ಮಾಡಿ ಬಾಳೆ ಎಲೆ ಊಟ ಸವಿದಿದ್ದಾರೆ. ರಾಧಿಕಾ ಕೊಂಕಣಿ ಸಮುದಾಯಕ್ಕೆ ಸೇರಿದವರಾಗಿದ್ದು, ಅವರ ಸಂಪ್ರದಾಯದಲ್ಲಿ ಗೌರಿ-ಗಣೇಶ ಹಬ್ಬಕ್ಕೆ ಮಾಡುವ ಖಾದ್ಯದ ಲಿಸ್ಟ್ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ ರಾಧಿಕಾ. ಹಬ್ಬದ ಫೋಟೋಗಳನ್ನ ತಮ್ಮ ಇನ್ಸ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
‘ಈ ಬಾರಿ ಹಬ್ಬ ಅಮ್ಮನ ಮನೆಯಲ್ಲಿ’ ಎಂದು ಹಬ್ಬದ ತಯಾರಿಯ ಫೋಟೋಗಳನ್ನೂ ಪೋಸ್ಟ್ ಮಾಡಿದ್ದಾರೆ. ಪುಟ್ಟ ಮಕ್ಕಳು ಅಮ್ಮನಿಗೆ ಅಡುಗೆ ಮಾಡಲು ಸಹಾಯ ಮಾಡ್ತಿರುವ ಫೋಟೋ ಹಾಗೂ ಊಟ ಮಾಡುವ ಎಲೆಯಲ್ಲಿ ಇದ್ದ ಖಾದ್ಯಗಳನ್ನೂ ತೋರಿಸಿದ್ದಾರೆ. ಮಕ್ಕಳು ಗಣೇಶನಿಗೆ ಆರತಿ ಮಾಡಿ ಪೂಜೆ ಮಾಡಿದ್ದಾರೆ. ಕೊಂಕಣಿ ಸಂಪ್ರದಾಯದಲ್ಲಿ ಗೌರಿ-ಗಣೇಶ ಹಬ್ಬಕ್ಕೆ ವಿಶೇಷವಾಗಿ ಮಾಡಲಾಗುವ ವೈನಡೋರಿಯಿಂದ ಹಿಡಿದು, ಪಥೋಳಿ, ಮೋದಕ, ಚಕ್ಲಿ, ನೆವ್ರಿ, ಫೋಡಿ, ಅಂಬೊಡೆ, ಕಾರಟೆ ಘಸ್ಸಿ ಎಲ್ಲವೂ ತಮಗೆ ಸಿಕ್ಕಿತು ಎಂದು ಹೇಳಿ ಖುಷಿಪಟ್ಟಿದ್ದಾರೆ ರಾಧಿಕಾ. ಊಟ ಹಾಗೂ ಪೂಜೆಯ ತಯಾರಿಗಾಗಿ ಪುಟ್ಟ ಮಕ್ಕಳು ಮಾಡಿರುವ ಸಹಾಯ ಹೃದಯ ಹಾಗೂ ಹೊಟ್ಟೆಯನ್ನು ತುಂಬಿತು ಎಂದಿದ್ದಾರೆ ರಾಧಿಕಾ. ಇದನ್ನೂ ಓದಿ: ಪುಟ್ಟ ಗಣೇಶನ ಹಿಡಿದು ಸಿಹಿ ಸುದ್ದಿ ಹಂಚಿಕೊಂಡ ಐಶ್ವರ್ಯ-ವಿನಯ್ ದಂಪತಿ
ಯಶ್ ಹಾಗೂ ರಾಧಿಕಾ ಸಕಲ ಹಬ್ಬಗಳನ್ನ ಸಂಪ್ರದಾಯವಾಗಿ ಆಚರಿಸುತ್ತಾರೆ. ಈ ಬಾರಿ ಯಶ್ ಮುಂಬೈನಲ್ಲಿ ಬಿಡುವಿಲ್ಲದೆ ಟಾಕ್ಸಿಕ್ ಚಿತ್ರೀಕರಣದಲ್ಲಿ ತೊಡಗಿದ್ದಾರೆ. 45 ದಿನಗಳ ಕಾಲ ಫೈಟ್ ಸೀಕ್ವೆನ್ಸ್ ಜರುಗಲಿದೆ. ಹೀಗಾಗಿ ಕುಟುಂಬದ ಜೊತೆ ಯಶ್ ಗೌರಿ-ಗಣೇಶ ಹಬ್ಬ ಆಚರಿಸಲಿಲ್ಲ. ಹೀಗಾಗಿ, ರಾಧಿಕಾ ಮಕ್ಕಳ ಸಮೇತ ಈ ಬಾರಿ ಬೆಂಗಳೂರಿನಲ್ಲೇ ಇರುವ ಅಮ್ಮನ ಮನೆಯಲ್ಲಿ ಹಬ್ಬ ಆಚರಿಸಿದ್ದಾರೆ.