ಏಕಾಂಗಿಯಾಗಿ ಬದುಕನ್ನು ಅಂತ್ಯ ಮಾಡಿಕೊಂಡಿರೋದು ಬೇಜಾರಿನ ಸಂಗತಿ: ಮಾಳವಿಕಾ

Public TV
1 Min Read

‘ಮಠ’ (Mata) ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ (Guruprasad) ಆತ್ಯಹತ್ಯೆಯ ಸುದ್ದಿ ಕೇಳಿ ಸ್ಯಾಂಡಲ್‌ವುಡ್ ನಟ, ನಟಿಯರು ಕಂಬನಿ ಮಿಡಿದಿದ್ದಾರೆ. ಇದೀಗ 20 ವರ್ಷಗಳ ಹಿಂದೆ ‘ಮನ್ವಂತರ’ ಧಾರಾವಾಹಿಯಲ್ಲಿ ಗುರುಪ್ರಸಾದ್ ಜೊತೆ ಕೆಲಸ ಮಾಡಿದ್ದರ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಹಿರಿಯ ನಟಿ ಮಾಳವಿಕಾ (Malavika) ಹಂಚಿಕೊಂಡಿದ್ದಾರೆ. ಏಕಾಂಗಿಯಾಗಿ ಬದುಕನ್ನು ಅಂತ್ಯಗೊಳಿಸಿಕೊಂಡಿರೋದು ಬೇಜಾರಿನ ಸಂಗತಿ ಎಂದಿದ್ದಾರೆ. ಇದನ್ನೂ ಓದಿ:ಆತ್ಮಹತ್ಯೆ ಮಾಡಿಕೊಂಡ ಪತಿ ಗುರುಪ್ರಸಾದ್‌ ನೋಡಲು ಕಣ್ಣೀರಿಡುತ್ತಲೇ ಧಾವಿಸಿದ 2ನೇ ಪತ್ನಿ

ಹೀಗೆಲ್ಲಾ ಆಗಿದ್ರೂ ಅವರ ಕುಟುಂಬಸ್ಥರು ಎಲ್ಲಿ ಅಂತ ಅಚ್ಚರಿ ಆಗುತ್ತಿದೆ. ಏಕಾಂಗಿಯಾಗಿ ಬದುಕನ್ನು ಅಂತ್ಯಗೊಳಿಸಿಕೊಂಡಿರೋದು ಭಾರೀ ಬೇಜಾರಿನ ಸಂಗತಿ. ಎಷ್ಟೋ ಜನರಿಗೆ ಅದೆಷ್ಟೋ ಕಷ್ಟಗಳು ಇರುತ್ತವೆ. ಕಲಾವಿದರು ಕೂಡ ಮನುಷ್ಯರೇ ತಾನೇ. ಎಲ್ಲರಿಗೂ ಬುದ್ಧಿವಾದ ಹೇಳುತ್ತಿದ್ದ ವ್ಯಕ್ತಿಯಾಗಿದ್ದರು. ಅವರು ತುಂಬಾ ಓದಿಕೊಂಡಿದ್ದರು. ಬಹಳ ಪ್ರತಿಭಾನ್ವಿತರಾಗಿದ್ದರು. ಹಾಗಿದ್ರೂ ಕೂಡ ಈ ರೀತಿಯ ನಿರ್ಣಯ ತೆಗೆದುಕೊಳ್ಳಬಾರದಿತ್ತು.

‘ಮನ್ವಂತರ’ ಸೀರಿಯಲ್‌ಗೆ ಸಹಾಯಕ ನಿರ್ದೇಶಕರಾಗಿ ಗುರುಪ್ರಸಾದ್‌ ಕೆಲಸ ಶುರು ಮಾಡಿದರು. ಅವರು ಸೆಟ್‌ನಲ್ಲಿ ವಿಪರೀತ ಮಾತನಾಡೋರು. ಸದಾ ಉತ್ಸಾಹದಿಂದ ಓಡಾಡಿಕೊಂಡಿದ್ದರು. 20 ವರ್ಷಗಳ ಹಿಂದೆಯೇ ಅವರ ಬರವಣಿಗೆ ಚೆನ್ನಾಗಿತ್ತು. ಅಷ್ಟೆಲ್ಲಾ ತಿಳಿದುಕೊಂಡವರು ಹೀಗೆ ಮಾಡಿಕೊಂಡಿರೋದು ಸರಿಯಲ್ಲ. ಅವರ ಆತ್ಮಹತ್ಯೆಯ ನಿರ್ಧಾರವನ್ನು ಯಾಕೆ ಯಾರ ಕೈಯಿಂದಲೂ ತಪ್ಪಿಸೋಕೆ ಆಗಿಲ್ಲ ಅದೇ ಬೇಜಾರು. ಅವರಿಗೆ 52 ವರ್ಷ, ಸಾಯೋ ಅಂತಹ ವಯಸ್ಸೇ ಅಲ್ಲ. ಅದೆಷ್ಟು ಜನ ಬದುಕು ಕಟ್ಟಿಕೊಳ್ಳುತ್ತಿರುತ್ತಾರೆ. ಅವತ್ತು ಯಾರಾದರೂ ಅವರ ಮನೆಗೆ ಹೋಗಿ ಬಿಟ್ಟಿದ್ರೆ, ಕರೆ ಮಾಡಿದಿದ್ರೆ ಈ ಅನಾಹುತವನ್ನು ತಪ್ಪಿಸಬಹುದಿತ್ತು ಎಂದು ಮಾಳವಿಕಾ ಭಾವುಕರಾಗಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳೋದ್ದಕ್ಕೆ ಸಾಲದ ಹೊರೆ ಕೂಡ ಕಾರಣವಾಗಿರಬಹುದು. ಆದರೆ ಬದುಕಿಗಿಂತ ಯಾವ ಕಾರಣನೂ ದೊಡ್ಡದಲ್ಲ. ಸೋಲನ್ನು ಯಾರು ಅನುಭವಿಸಲ್ಲ? ಸೋಲು ಮತ್ತು ಗೆಲುವು ಜೀವನದ ಒಂದು ಭಾಗವಾಗಿದೆ. ಸೋತವರು ಮತ್ತೆ ಬಂದು ಗೆದ್ದಿದ್ದು ಇದೆ. ಯಾಕೆ ಹೀಗೆ ಮಾಡಿಕೊಂಡರು ಇದು ನಿಜಕ್ಕೂ ನೋವಿನ ಸಂಗತಿ ಎಂದಿದ್ದಾರೆ ನಟಿ.

Share This Article