ಹಿರಿಯ ನಟಿ ಲೀಲಾವತಿ ನಿಧನಕ್ಕೆ ಗಣ್ಯರ ಸಂತಾಪ

Public TV
3 Min Read

ನ್ನಡ ಚಿತ್ರರಂಗ ಕಂಡ ಮೇರು ನಟಿ ಡಾ. ಲೀಲಾವತಿ (Leelavathi) ಅವರ ನಿಧನಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್, ಮಾಜಿ ಸಿಎಂ  ಕುಮಾರಸ್ವಾಮಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕನ್ನಡ ಚಿತ್ರರಂಗ ಕಂಡ ಮೇರು ನಟಿಯರಲ್ಲಿ ಲೀಲಾವತಿ ಅವರೂ ಒಬ್ಬರು. ಅವರೊಬ್ಬ ಕಲಾತಪಸ್ವಿ. ತಮ್ಮ ಮನೋಜ್ಞ ಅಭಿನಯದಿಂದ ಅಮ್ಮ ಎಂದೇ ಖ್ಯಾತಿ ಪಡೆದಿದ್ದರು. ಕಪ್ಪು ಬಿಳುಪು ಚಿತ್ರದಿಂದ ಆಧುನಿಕ ಚಿತ್ರರಂಗದವರೆಗೂ ಕ್ರಿಯಾಶೀಲರಾಗಿ ಕಲಾಸೇವೆ ಸಲ್ಲಿಸಿದ್ದರು ಎಂದು ಲೀಲಾವತಿ ಅವರನ್ನ ಡಿ.ಕೆ ಶಿವಕುಮಾರ್ ಅವರು ಸ್ಮರಿಸಿದ್ದಾರೆ. ಇತ್ತೀಚೆಗೆ ಅನಾರೋಗ್ಯದ ನಡುವೆಯೂ ನನ್ನ ಮನೆಗೆ ಬಂದು ಅವರು ಕಟ್ಟಿರುವ ಆಸ್ಪತ್ರೆ ಉದ್ಘಾಟನೆಗೆ ಆಹ್ವಾನಿಸಿದ್ದರು. ಅವರ ಇಚ್ಛೆಯಂತೆ ನಾನು ಹೋಗಿ ಆಸ್ಪತ್ರೆ ಉದ್ಘಾಟನೆ ಮಾಡಿ, ಆ ತಾಯಿಯ ಆಶೀರ್ವಾದ ಪಡೆದು ಬಂದಿದ್ದೆ. ಲೀಲಾವತಿ ಅಮ್ಮನವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಈ ನೋವಿನ ಕ್ಷಣದಲ್ಲಿ ನಾವು ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಅವರ ಜೊತೆ ನಿಲ್ಲುತ್ತೇವೆ ಎಂದು ಶಿವಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ:ಲೀಲಾವತಿ ಖಾಸಗಿ ವಿಷಯ ಹೇಳಿ ತುಂಬಾ ಅತ್ತಿದ್ದರು: ನಟಿ ಸರೋಜಾದೇವಿ

ಕನ್ನಡ ಚಿತ್ರರಂಗದ ಶ್ರೇಷ್ಠ ನಟಿಯರಲ್ಲಿ ಒಬ್ಬರು, ಬಹುಭಾಷಾ ಕಲಾವಿದರಾದ ಲೀಲಾವತಿ ಅವರ ನಿಧನದ ವಾರ್ತೆ ಕೇಳಿ ಬಹಳ ನೋವುಂಟಾಯಿತು. ನಾಯಕಿಯಾಗಿ ಮಾತ್ರವಲ್ಲದೆ, ಪೋಷಕ ಪಾತ್ರಗಳಿಗೂ ಜೀವ ತುಂಬಿ ಬೆಳ್ಳಿತೆರೆಯ ಮೇಲೆ ಅವುಗಳ ಹೆಜ್ಜೆ ಗುರುತುಗಳು ಮೂಡುವಂತೆ ಮಾಡಿದವರು ಅವರು. ಭಕ್ತ ಕುಂಬಾರ, ವೀರ ಕೇಸರಿ, ಭಾಗ್ಯದೇವತೆ, ಸೋತು ಗೆದ್ದವಳು, ನಂದಾದೀಪ, ವಿಧಿ ವಿಲಾಸ, ಸಂತ ತುಕಾರಾಂ, ರಣಧೀರ ಕಂಠೀರವ ಸೇರಿ ಅವರು ನಟಿಸಿದ್ದ ಅನೇಕ ಚಿತ್ರಗಳು ಕನ್ನಡಿಗರ ಮನೆ ಮನಗಳನ್ನು ತುಂಬಿರುತ್ತವೆ. ಲೀಲಾವತಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಪುತ್ರ ವಿನೋದ್ ರಾಜ್ ಅವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.

ಕನ್ನಡ ಚಿತ್ರರಂಗದ ಕಲಾ ಸರಸ್ವತಿ ಎಂದೇ ಖ್ಯಾತರಾಗಿದ್ದ ಹಿರಿಯ ನಟಿ ಲೀಲಾವತಿ ನಿಧನರಾಗಿರುವ ಸುದ್ದಿ ಕೇಳಿ ಮುನಸ್ಸಿಗೆ ದುಖವಾಯಿತು. ಅವರ ಅಗಲಿಕೆಯಿಂದ ಕನ್ನಡ ನಾಡು ಹಾಗೂ ಕಲಾರಂಗ ಒಬ್ಬ ಮನೆಯ ಹಿರಿಯರನ್ನು ಕಳೆದುಕೊಂಡು ಬಡವಾದಂತಾಗಿದೆ. ಅವರ ಪುತ್ರ ವಿನೋದ್ ರಾಜ್ ಅವರಿಗೆ ತಾಯಿಯ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ಲೀಲಾವತಿ ಅವರು ವಿಧಿವಶರಾದ ವಿಷಯ ತಿಳಿದು ಅತೀವ ದುಃಖವಾಗಿದೆ. ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ ಅವರ ಅಗಲಿಕೆಯಿಂದ ಕಲಾಪ್ರಪಂಚ ತನ್ನ ಮಾತೃಸದೃಶ ಕಲಾವಿದೆಯನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಅವರ ಕುಟುಂಬ ಹಾಗೂ ಅಭಿಮಾನಿ ವರ್ಗದವರಲ್ಲಿ ಸಂತಾಪಗಳನ್ನು ಸಲ್ಲಿಸುತ್ತೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಇನ್ನೂ ಲೀಲಾವತಿ ಅವರ ನಿಧನಕ್ಕೆ ಹಿರಿಯ ನಟಿ ಉಮಾಶ್ರೀ, ಬಿ. ಸರೋಜದೇವಿ, ಶಿವಣ್ಣ, ಲಹರಿ ವೇಲು ಸೇರಿದಂತೆ ಹಲವು ಚಿತ್ರರಂಗದ ಕಲಾವಿದರು ಸಂತಾಪ ಸೂಚಿಸಿದ್ದಾರೆ.

Share This Article