ಕೊರೊನಾ ಹೊತ್ತಲ್ಲಿ ಹರಿಪ್ರಿಯಾ ಮನೆಯಲ್ಲಿ ಕೊಡೋ, ತಗೋಳೊ ವ್ಯವಹಾರ

Public TV
3 Min Read

ಬೆಂಗಳೂರು: ಕೊರೊನಾ ಮಹಾಮಾರಿಯಿಂದಾಗಿ ಪ್ರಪಂಚವೇ ತಲ್ಲಣವಾಗಿದ್ದು, ನಿಗದಿಯಾಗಿದ್ದ ಮದುವೆ, ಸಭೆ ಸಮಾರಂಭಗಳನ್ನು ಸಹ ಮುಂದೂಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಟಿ ಹರಿಪ್ರಿಯಾ ಅವರ ಮನೆಯಲ್ಲಿ ಕೊಡೋ, ತಗೊಳೋ ವ್ಯವಹಾರ ನಡೆಯುತ್ತಿದೆಯಂತೆ. ಇದನ್ನು ಸ್ವತಃ ಅವರೇ ಖಚಿತಪಡಿಸಿದ್ದಾರೆ.

ಕೊರೊನಾ ಮಹಾಮಾರಿಯಿಂದಾಗಿ ಎಲ್ಲರೂ ಹೋಮ್ ಕ್ವಾರೆಂಟೈನ್‍ನಲ್ಲಿದ್ದಾರೆ. ಇದರಿಂದಾಗಿ ಹಲವು ಮದುವೆ, ಸಭೆ ಸಮಾರಂಭಗಳು ಸಹ ಮುಂದೂಡಲ್ಪಟ್ಟಿವೆ. ಇಂತಹ ತುರ್ತು ಪರಿಸ್ಥತಿ ಸಂದರ್ಭದಲ್ಲಿ ನಟಿ ಹರಿಪ್ರಿಯಾ ಒಂದು ಅಚ್ಚರಿಯ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಅವರ ಪೋಸ್ಟ್ ನೋಡಿದರೆ ಆರಂಭದಲ್ಲಿ ಖಂಡಿತ ಆಶ್ಚರ್ಯವಾಗುತ್ತದೆ. ಇದೇನಪ್ಪಾ ಕೊರೊನಾ ಹೊತ್ತಲ್ಲಿ ಅನ್ನಿಸುತ್ತದೆ.

ಹೌದು ಈ ಕುರಿತು ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಹೊಸದಾಗಿ ರಚಿಸಿರುವ ತಮ್ಮ ಬ್ಲಾಗ್‍ನಲ್ಲಿ ಸಹ ಈ ಕುರಿತು ತಿಳಿಸಿದ್ದಾರೆ. ಇದೇನಪ್ಪ ಇದ್ದಕ್ಕಿದ್ದಂತೆ ಎಂದು ಆಶ್ಚರ್ಯ ಪಡಬೇಡಿ ಅವರು ಹೇಳಿರುವುದು ಬೇರೆ ಕೊಡುಕೊಳ್ಳುವಿಕೆ. ಅದೇನಪ್ಪಾ ಅಂತೀರಾ, ಹೌದು ನಟ, ನಟಿಯರು ಈ ಕುರಿತು ಪೋಸ್ಟ್ ಮಾಡಿದಾಗ ಈ ಕುರಿತು ಚರ್ಚೆಯಾಗುವುದು ಸಾಮಾನ್ಯ. ಈ ಕುರಿತು ಟ್ವಿಟ್ಟರ್ ಹಾಗೂ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿರುವ ಅವರು, “ನಮ್ಮನೇಲಿ ನಡೀತಿದೆ ಕೊಡೋ ತಗೊಳೋ ಮಾತುಕತೆ” ಎಂದು ಕನ್ನಡದಲ್ಲಿ ಬರೆದು, “ನಿಮ್ಮ ಆಶೀರ್ವಾದ ಬೇಕಿದೆ. ಹೆಚ್ಚಿನ ಮಾಹಿತಿಗೆ ನನ್ನ ಬ್ಲಾಗ್ ಓದಿ” ಎಂದು ತಮ್ಮ ಹೊಸ ಬ್ಲಾಗ್‍ನ ಲಿಂಕ್ ಹಂಚಿಕೊಂಡಿದ್ದಾರೆ.

ಬ್ಲಾಗ್‍ನಲ್ಲಿ ಕೊರೊನಾ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ತಮಗಾದ ಅನುಭವಗಳ ಕುರಿತು ಹಂಚಿಕೊಂಡಿರುವ ಅವರು, ಈಗ ಎಲ್ಲಿ ನೋಡಿದ್ರೂ ಕೊಡೋ ತಗೋಳೋ ಮಾತುಕತೆ. ಇಡೀ ದೇಶಾನೇ ಲಾಕ್‍ಡೌನ್ ಆಗಿದೆ, ಇರೋ ಮದ್ವೆಗಳೇ ಮುಂದಕ್ ಹೋಗಿವೆ, ಈಗ ಯಾರು ಕೊಡೋ ತಗೊಳೋ ವಿಷಯ ಮಾತಾಡ್ತಾರೆ ಅಂದ್ಕೋಬೇಡಿ. ಪರಿಸ್ಥಿತಿ ಹೇಗೇ ಇದ್ರೂ ಈಗ ಆ ಮಾತುಕತೆ ನಡೀತಿರೋದಂತೂ ಪಕ್ಕಾ. ನಮ್ಮನೇಲೇ ಅಂಥ ಮಾತುಕತೆ ನಡ್ದಿದೆ. ಹಹಹ? ಮದ್ವೆ ಅಂದ್ಕೊಂಡ್ರಾ? ಅಲ್ವೇ ಅಲ್ಲ. ಅದ್ಕೆ ಕಾರಣ, ಮತ್ತೆ ಅದೇ ಕೊರೊನಾ!!

ನೀವು `ಲವ್ ಇನ್ ದ ಟೈಮ್ ಆಫ್ ಕಾಲರಾ’ ಅಂತ ನಾವೆಲ್ ಬಗ್ಗೆ ಕೇಳಿದ್ದೀರಲ್ವ? ಅದೇ ಥರ ಇದು `ಎಕ್ಸ್‍ಚೇಂಜ್ ಇನ್ ದ ಟೈಮ್ ಆಫ್ ಕೊರೊನಾ’ ಅಂತ ಹೇಳ್ಬೋದು. ಯಾಕ್ ಗೊತ್ತಾ? ಈಗ ಎಲ್ಲ ಬಂದ್ ಆಗಿದೆ. ಎಷ್ಟ್ ದುಡ್ ಕೊಡ್ತೀವಿ ಅಂದ್ರೂ ಕೆಲವಂತೂ ಸಿಗ್ತಾನೇ ಇಲ್ಲ. ಕೆಲವು ಅಂಗಡಿಗಳು ಓಪನ್ ಇದ್ರೂ ಸ್ಟಾಕ್ ಇಲ್ಲ.

ಹಿಂದಿನ ಕಾಲದಲ್ಲಿ ಬಾರ್ಟರ್ ಸಿಸ್ಟಮ್ ಅಂತ ಇತ್ತಂತಲ್ವಾ, ಆ ಥರ ನಮ್ ಮನೇಲೂ ಕೊಡೋ ತಗೊಳೋ ಮಾತುಕತೆ ಈ ಕ್ವಾರಂಟೈನ್ ಟೈಮಲ್ಲಿ ನಡ್ದಿತ್ತು. ನನ್ ಫ್ರೆಂಡ್ ಮನೆ ನಾಯಿಗಳಿಗೆ ಡಾಗ್ ಫುಡ್ ಇರ್ಲಿಲ್ಲ. ಅವರು ನಮ್ ಮನೆ ಅಕ್ವೇರಿಯಮ್ಮಲ್ಲಿರೋ ಮೀನುಗಳಿಗೆ ಫಿಷ್ ಫುಡ್ ಕೊಟ್ಟು ಡಾಗ್ ಫುಡ್ ತಗೊಂಡ್ ಹೋದ್ರು. ಹಾಗೇ ತುಂಬಾ ಕಡೆ ತುಂಬಾ ವಸ್ತು ಎಕ್ಸ್‍ಚೇಂಜ್ ಮಾಡ್ಕೊಂಡಿದ್ ಕೇಳಿದ್ದೆ.

ಇಷ್ಟೇ ಅಲ್ಲ.. ಇತ್ತೀಚೆಗೆ ನಮ್ಮ ರಿಲೇಟಿವ್ಸ್ ಮನೇಲಿ ತರಕಾರಿ ಖಾಲಿ ಆಗಿತ್ತು. ಅವರು ನಮ್ಮನೆಗೆ ಹಣ್ಣು ತಂದುಕೊಟ್ಟು ತರಕಾರಿ ತಗೊಂಡು ಹೋದ್ರು. ಹೀಗೆ ನಿಮ್ಮಲ್ಲೂ ತುಂಬಾ ಜನರ ಮನೇಲಿ ಆಗಿದೆ ಅಲ್ವಾ? ಈ ಥರ ಎಕ್ಸ್‍ಚೇಂಜ್‍ಗೆ ಹಳ್ಳಿ ಕಡೆ ಸಾಟಿ ವಿನಿಮಯ ಅಂತಾರಂತೆ. ನೋಡಿ.. ನಮ್ಮ ಹಳೇ ಪದ್ಧತಿಗೆ ಈಗ ಸರಿಸಾಟಿ ಯಾವುದೂ ಇಲ್ಲ. ಹಣ ಇದ್ರೆ ಸಾಕು, ಏನು ಬೇಕಾದ್ರೂ ತಗೋಬಹುದು ಅನ್ನೋದು ಸುಳ್ಳು. ಹಣಕ್ಕಿಂತ ಆ ದಿನದ ಅಗತ್ಯ ಪೂರೈಸಿಕೊಳ್ಳೋದೇ ಮುಖ್ಯ ಅಂತ ಇದರಿಂದ ಎಲ್ಲರಿಗೂ ಗೊತ್ತಾಗ್ತಿದೆ ಅನ್ನೋದೇ ದೊಡ್ಡ ಖುಷಿ ಎಂದು ತಮ್ಮ ಬ್ಲಾಗ್‍ನಲ್ಲಿ ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *