ಶ್ರುತಿಯಿಂದ ಹರಿಪ್ರಿಯಾ – ಹೆಸರು ಬದಲಾಯಿಸಿದ ಕಥೆ ಬಿಚ್ಚಿಟ್ಟ ನಟಿ

Public TV
2 Min Read

– 12 ವರ್ಷಗಳ ಹಿಂದೆ ಹರಿಪ್ರಿಯಾ ಇರಲಿಲ್ಲ

ಬೆಂಗಳೂರು: ಸಾಮಾನ್ಯವಾಗಿ ಅನೇಕ ನಟ-ನಟಿಯರು ಸಿನಿಮಾರಂಗಕ್ಕೆ ಬಂದ ಮೇಲೆ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ. ಅದೇ ರೀತಿ ಸ್ಯಾಂಡಲ್‍ವುಡ್ ನಟಿ ಹರಿಪ್ರಿಯಾ ಕೂಡ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಹೇಳಿದ್ದಾರೆ.

ನಟಿ ಹರಿಪ್ರಿಯಾ ಅವರ ಮೊದಲ ಹೆಸರು ಶ್ರುತಿ. ಮೊದಲ ಸಿನಿಮಾದ ನಂತರ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ನಟಿ ಹರಿಪ್ರಿಯಾ ಮೊದಲಿಗೆ ತುಳಿವಿನ ‘ಬಡಿ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಮಾಡುವಾಗ ಅವರ ಹೆಸರು ಶ್ರುತಿ ಎಂತಲೇ ಇತ್ತು. ಬಳಿಕ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಈ ಬಗ್ಗೆ ನಟಿ ಹರಿಪ್ರಿಯಾ ತಮ್ಮ ಬ್ಲಾಗ್‍ನಲ್ಲಿ ಬರೆದುಕೊಂಡಿದ್ದಾರೆ.

“ನಾನು ತುಳುವಿನ ‘ಬಡಿ’ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವಾಗಲೇ ಕನ್ನಡ ಸಿನಿಮಾದಲ್ಲಿ ಅಭಿನಯಿಸಲು ಆಫರ್ ಬಂದಿತ್ತು. ಈ ವೇಳೆ ‘ಬಡಿ’ ಸಿನಿಮಾದ ಸಹನಿರ್ದೇಶಕ ಸುಧಾಕರ್ ಬನ್ನಾಜೆ, ನನಗೆ ಹೆಸರು ಬದಲಿಸಿಕೊಳ್ಳಲು ಸಲಹೆ ಕೊಟ್ಟಿದ್ದರು. ಈಗಾಗಲೇ ಕನ್ನಡ ಇಂಡಸ್ಟ್ರೀಯಲ್ಲಿ ಶ್ರುತಿ ಹೆಸರಿನ ನಾಯಕಿ ಖ್ಯಾತಿ ಪಡೆದುಕೊಂಡಿದ್ದಾರೆ. ಹೀಗಾಗಿ ಹೆಸರು ಬದಲಾಯಿಸುವಂತೆ ಹೇಳಿದರು. ಆಸ್ಟ್ರೋಲಜಿ ಬಗ್ಗೆಯೂ ತಿಳಿದಿದ್ದ ಅವರು ನನ್ನ ತಾಯಿ ಬಳಿ ‘ಹ’ ಅಕ್ಷರದಿಂದ ಆರಂಭವಾಗುವ ಹೆಸರಿಡಲು ತಿಳಿಸಿದ್ದರು. ಅಮ್ಮ ಕೂಡ ‘ಹ’ ಅಕ್ಷರದಿಂದ ಆರಂಭವಾಗುವ ಹೆಸರಿನ ಪಟ್ಟಿಯನ್ನೇ ತಯಾರಿಸಿದ್ದರು” ಎಂದು ಹೇಳಿದ್ದಾರೆ.

ಬಹಳಷ್ಟು ಜನರಿಗೆ ತಮ್ಮ ಹೆಸರನ್ನು ಆಯ್ಕೆ ಮಾಡಿಕೊಳ್ಳಲಾಗುವುದಿಲ್ಲ, ಯಾಕೆಂದರೆ ಮಗುವಿದ್ದಾಗಲೇ ಹೆಸರಿಡಲಾಗುತ್ತದೆ. ಆದರೆ ನಾನು ಕೊನೆಯದಾಗಿ ‘ಹರಿಪ್ರಿಯಾ’ ಎಂಬ ಹೆಸರನ್ನು ಆಯ್ಕೆ ಮಾಡಿಕೊಂಡೆ. ಲಕ್ಷ್ಮೀ ಎಂದರೆ ದೇವರು ಹರಿಗೆ ತುಂಬ ಇಷ್ಟ ಎಂಬ ಕಾರಣಕ್ಕೆ ಇವರು ‘ಹರಿಪ್ರಿಯಾ’ ಎಂಬ ಹೆಸರನ್ನೇ ಆಯ್ಕೆ ಮಾಡಿಕೊಂಡಿದ್ದೆ. 12 ವರ್ಷಗಳ ಹಿಂದೆ ಈ ಹರಿಪ್ರಿಯಾ ಇರಲಿಲ್ಲ. ಶ್ರುತಿ ಎನ್ನುವವಳು ಇದ್ದಳು, ಮುಂದೆಯೂ ಇರುತ್ತಾಳೆ. ಈಗ ಹರಿಪ್ರಿಯಾ ಎಂಬ ಹೆಸರನ್ನು ಸಾಕಷ್ಟು ಜನರು ಗುರುತಿಸಿದ್ದಾರೆ. ಅಲ್ಲದೇ ಹರಿಪ್ರಿಯಾ ಎಂದು ಕರೆಯೋದನ್ನು ಕೇಳಿದರೆ ನನಗೆ ತುಂಬಾ ಸಂತೋಷವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

ಹರಿಪ್ರಿಯಾ ಹೆಸರಿನ ಬಗ್ಗೆಯೂ ಒಂದು ಕೊರಗು ಸಹ ಇದೆ ಎಂದು ಹೇಳಿಕೊಂಡಿದ್ದಾರೆ. ನನ್ನ ತಂದೆ ಹರಿಪ್ರಿಯಾ ಎಂಬ ಹೆಸರಿನಿಂದ ನನ್ನನ್ನು ಒಮ್ಮೆಯೂ ಕರೆದಿಲ್ಲ. ಅವರಿಗೆ ಮಗಳಿಗೆ ಈ ಹೆಸರಿದೆ ಎಂಬುದು ಸಹ ಗೊತ್ತಿಲ್ಲ. ಈಗಲು ಒಮ್ಮೆಯಾದರೂ ಅಪ್ಪ ನನ್ನನ್ನು ಹರಿಪ್ರಿಯಾ ಎಂದು ಕರೆದಿದ್ದರೆ ಎಂದು ಅನೇಕ ಬಾರಿ ಕಲ್ಪಿಸಿಕೊಳ್ಳುತ್ತೇನೆ ಎಂದು ನೋವಿನಿಂದ ಬರೆದುಕೊಂಡಿದ್ದಾರೆ. ತಂದೆ ಚಂದ್ರಸೇನಾ ಹರಿಪ್ರಿಯಾ ಅವರು ಚಿಕ್ಕವಯಸ್ಸಿನಲ್ಲಿದ್ದಾಲೇ ಮೃತಪಟ್ಟಿದ್ದಾರೆ.

“ಹರಿಪ್ರಿಯಾ ಎಂದು ಹೆಸರು ಬದಲಾಯಿಸಿಕೊಂಡ ನಂತರ ಸಿನಿಮಾಗಳಲ್ಲಿ ನನ್ನ ಪಾತ್ರವನ್ನು ಪರಿಚಯಿಸುವಾಗ ಹರಿಪ್ರಿಯಾ ಎಂದೇ ಇರುತ್ತದೆ. ಇಲ್ಲಿಯವರೆಗೂ ನನ್ನ ತಾಯಿ, ಸಹೋದರ, ಸಂಬಂಧಿಕರು ನನ್ನನ್ನು ಶ್ರುತಿ ಎಂದೇ ಕರೆಯುತ್ತಾರೆ. ಒಂದು ವೇಳೆ ಹರಿಪ್ರಿಯಾ ಎಂದು ಕರೆದರೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನನಗೆ ಈ ಎರಡೂ ಹೆಸರುಗಳು ತುಂಬಾ ಇಷ್ಟ. ವೈಯಕ್ತಿಕ ಬದುಕಿನಲ್ಲಿ ನಾನು ಶ್ರುತಿಯಾದರೆ, ವೃತ್ತಿ ಜೀವನದಲ್ಲಿ ಹರಿಪ್ರಿಯಾ” ಎಂದು ಹೆಸರು ಬದಲಾಯಿಸಿಕೊಂಡ ಕಥೆ ಬಿಚ್ಚಿಟ್ಟಿದ್ದಾರೆ.

https://www.instagram.com/p/B_4rPfIhxca/

Share This Article
Leave a Comment

Leave a Reply

Your email address will not be published. Required fields are marked *