ಬೆಂಗಳೂರು: ದುನಿಯಾ ವಿಜಯ್ ಮಾಸ್ತಿಗುಡಿ ಚಿತ್ರದ ನಂತರ ನಟಿಸುತ್ತಿರುವ ಚಿತ್ರ ಕುಸ್ತಿ. ಪ್ರತಿಭಾವಂತ ನಿರ್ದೇಶಕ ರಾಘು ಶಿವಮೊಗ್ಗ ನಿರ್ದೇಶನದ ಈ ಚಿತ್ರ ಈಗಾಗಲೇ ಟೀಸರ್ ಮೂಲಕ ವ್ಯಾಪಕ ಮೆಚ್ಚುಗೆ ಪಡೆದುಕೊಂಡಿದೆ. ಚಿತ್ರತಂಡ ಇದರ ಪ್ರತೀ ಪಾತ್ರಗಳಿಗೂ ಹುಡುಕಾಟದ ನಂತರವೇ ನಟ ನಟಿಯರನ್ನು ಆಯ್ಕೆ ಮಾಡಿಕೊಳ್ಳುತ್ತಿದೆ. ಅಂಥಾದ್ದೇ ವ್ಯಾಪಕ ಹುಡುಕಾಟದ ನಂತರ ಕುಸ್ತಿ ಚಿತ್ರಕ್ಕೆ ನಾಗಕನ್ನಿಕೆ ಖ್ಯಾತಿಯ ಅದಿತಿ ಪ್ರಭುದೇವ ನಾಯಕಿಯಾಗಿ ಆಯ್ಕೆಯಾಗಿದ್ದಾರೆ!
ಇದು ಅದಿತಿ ಪಾಲಿಗೆ ಬಿಗ್ ಬ್ರೇಕ್‍ನಂಥಾ ಅವಕಾಶ. ಕಿರುತೆರೆಯ ನಾಗಕನ್ನಿಕೆ ಧಾರಾವಾಹಿಯ ಮೂಲಕವೇ ನಾಯಕಿಯಾಗಿ ನಟನೆಗೆ ಎಂಟ್ರಿ ಕೊಟ್ಟಿದ್ದವರು ಅದಿತಿ. ಆ ನಂಥರದಲ್ಲಿ ಅಜೇಯ್ ರಾವ್ ಜೊತೆ ಧೈರ್ಯಂ ಚಿತ್ರದಲ್ಲಿ ನಟಿಸೋ ಮೂಲಕ ಅವರು ನಾಯಕಿಯಾಗಿ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ್ದರು. ಅದಾದ ನಂತರ ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದಲ್ಲಿಯೂ ಅದಿತಿ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ವಿಚಾರವಾಗಿಯೂ ಅವರು ಭರವಸೆ ಮೂಡಿಸಿದ್ದಾರೆ. ಇದೀಗ ಅದಿತಿ ಕುಸ್ತಿ ಚಿತ್ರದ ಅಖಾಡಕ್ಕಿಳಿದಿದ್ದಾರೆ.
ಗರಡಿ ಮನೆಯ ದೇಸೀ ಕುಸ್ತಿಯ ಸುತ್ತಲಿನ ರೋಚಕ ಕಥೆ ಹೊಂದಿರುವ ಚಿತ್ರ ಕುಸ್ತಿ. ಇದರ ಮುಖ್ಯ ಪಾತ್ರವೊಂದರ ಮೂಲಕ ದುನಿಯಾ ವಿಜಯ್ ಅವರ ಪುತ್ರನೂ ನಟನಾಗಿ ಎಂಟ್ರಿ ಕೊಡುತ್ತಿದ್ದಾನೆ. ಇದಕ್ಕಾಗಿ ತಾವೇ ಮುಂದೆ ನಿಂತು ವಿಜಿ ಮಗನಿಗೆ ದೈಹಿಕ ಕಸರತ್ತನ್ನು ಮಾಡಿಸಿದ್ದಾರೆ. ಫಿಟ್ನೆಸ್ ಬಗ್ಗೆ ಗಂಭೀರವಾಗಿರುವ ವಿಜಯ್ ಅವರು ಕುಸ್ತಿ ಚಿತ್ರಕ್ಕಾಗಿ ಮತ್ತಷ್ಟು ಕಸರತ್ತು ನಡೆಸಿದ್ದಾರೆ. ಇದೀಗ ಈ ಚಿತ್ರಕ್ಕೆ ಅದಿತಿ ಪ್ರಭುದೇವ್ ಎಂಟ್ರಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv