ಅಪ್ಪು ಆಶೀರ್ವಾದದಿಂದಲೇ ಯುವನಿಗೆ ಅಭಿಮಾನಿಗಳ ಪ್ರೀತಿ ಸಿಗುತ್ತಿರೋದು- ರಾಘವೇಂದ್ರ ರಾಜ್‌ಕುಮಾರ್

Public TV
2 Min Read

ದೊಡ್ಮನೆ ಕುಡಿ ಯುವರಾಜ್‌ಕುಮಾರ್ (Yuva Rajkumar)  ಅವರು ಏ.23ರಂದು ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನು (Birthday)  ಅಭಿಮಾನಿಗಳ ಜೊತೆ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಆಚರಿಸಿದ್ದಾರೆ. ಈ ವೇಳೆ ಪುನೀತ್ ಅವರನ್ನ ನೆನೆದು ಯುವ- ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಭಾವುಕರಾಗಿದ್ದಾರೆ.

ರಾಜ್ಯದ ಬೇರೆ ಬೇರೆ ಕಡೆಯಿಂದ ಬಂದು ಯುವ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಅಭಿಮಾನಿಗಳು ಮತ್ತು ಕುಟುಂಬದ ಜೊತೆಯಲ್ಲಿ ಯುವ ಹುಟ್ಟುಹಬ್ಬವನ್ನ  ಆಚರಿಸಿಕೊಂಡಿದ್ದಾರೆ. ಈ ವೇಳೆ ಅಪ್ಪುನ ನೆನೆದು ಮಗ ಯುವನಿಗೆ ರಾಘವೇಂದ್ರ ರಾಜ್‌ಕುಮಾರ್ ಸಲಹೆ ನೀಡಿದ್ದಾರೆ. ಹ್ಯಾಪಿ ಬರ್ತ್‌ಡೇ ಮಗನೆ. ಅಭಿಮಾನಿಗಳ ಆಶೀರ್ವಾದ ನಿನ್ನ ಮೇಲೆ ಸದಾ ಇರಲಿ. ಅವರನ್ನು ಚೆನ್ನಾಗಿ ನೋಡಿಕೋ ಎಂದು ಪುತ್ರನಿಗೆ ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ದಾರೆ. ಈ ಪ್ರೀತಿ ಸಿಗುತ್ತಿರುವುದು ಪುನೀತ್ ರಾಜ್‌ಕುಮಾರ್ (Puneeth Rajkumar) ಅವರಿಂದ ಎಂದು ಕೂಡ ರಾಘಣ್ಣ ಹೇಳಿದ್ದಾರೆ. ಇದನ್ನೂ ಓದಿ:ಹಾರ್ದಿಕ್ ಪಾಂಡ್ಯ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ಯಶ್ ವೀಡಿಯೋ ವೈರಲ್

ಈ ದಿನ ನಾನು ತಮ್ಮನನ್ನು ನೆನಪಿಸಿಕೊಳ್ಳಲೇಬೇಕು. ಅವನ ಆಶೀರ್ವಾದದಿಂದಲೇ ಇದೆಲ್ಲ ನಡೆಯುತ್ತಿರೋದು. ಅಪ್ಪು ಸಿನಿಮಾ ರಿಲೀಸ್ ಆದ್ಮೇಲೆ ತಮ್ಮನ ಬರ್ತ್‌ಡೇ ಆಗಿತ್ತು. ಆಗ ಕೂಡ ಅಭಿಮಾನಿಗಳು ಇದೇ ರೀತಿ ಸೆಲೆಬ್ರೇಟ್ ಮಾಡಿದ್ದರು. ಅದನ್ನು ನೋಡಿ ಅಪ್ಪಾಜಿ ಖುಷಿಪಟ್ಟಿದ್ದರು. ಆ ದೃಶ್ಯ ಇಂದು ನನಗೆ ನೆನಪಾಗುತ್ತಿದೆ. ಈ ವರ್ಷ ನನ್ನ ಮಗ ಸಿನಿಮಾ ಇಂಡಸ್ಟ್ರಿಯಲ್ಲಿ ಹುಟ್ಟುತ್ತಿದ್ದಾನೆ. ಮಗನ ಹುಟ್ಟುಹಬ್ಬ ಇಷ್ಟು ಜೋರಾಗಿ ಆಚರಣೆ ಮಾಡಿದರೆ ಯಾವ ತಂದೆಗೆ ಖುಷಿ ಆಗಲ್ಲ ಹೇಳಿ. ಅಭಿಮಾನಿ ದೇವರುಗಳು ಎಂದರೆ ನಿಜಕ್ಕೂ ದೇವರುಗಳು ಎಂದು ರಾಘಣ್ಣ ಹೇಳಿದ್ದಾರೆ. ಇದನ್ನೆಲ್ಲ ನೋಡೋಕೆ ನನ್ನ ಜೀವ ಇದೆಯಲ್ಲ ಅಂತ ನನಗೆ ಖುಷಿ ಆಗುತ್ತದೆ. ಜನರ ಆಶೀರ್ವಾದ ಅವನ ಮೇಲೆ ಯಾವಾಗಲೂ ಇರಲಿ. ಅವನ ಸಿನಿಮಾ ಶೂಟಿಂಗ್ ಈಗ ಶುರುವಾಗಿದೆ. ಅವನ ಮೇಲೆ ಭಾರ ಹಾಕಬೇಡಿ. ಚೆನ್ನಾಗಿ ಮಾಡು ಎಂದು ಹಾರೈಸಿ ಎಂದು ಅಭಿಮಾನಿಗಳಲ್ಲಿ ರಾಘವೇಂದ್ರ ರಾಜ್‌ಕುಮಾರ್ ಕೇಳಿಕೊಂಡಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದ ನಡುವೆ ಯುವ ರಾಜ್‌ಕುಮಾರ್ ಮಾತನಾಡಿ, ಅಭಿಮಾನಿಗಳ ಪ್ರೀತಿಗೆ ಚಿರಋಣಿ, ಈ ಪ್ರೀತಿಗೆ ಮಾತಿಲ್ಲ. ಯುವ ಸಿನಿಮಾ ನಡೆಯುತ್ತಿದೆ. ಡಿಸೆಂಬರ್‌ಗೆ ಸಿನಿಮಾ ರಿಲೀಸ್ ಆಗುತ್ತದೆ. ಸಿಕ್ಕಾಪಟ್ಟೆ ಖುಷಿಯಾಗುತ್ತಿದೆ. ಎಲ್ಲಾ ಕಡೆಯಿಂದ ಅಭಿಮಾನಿಗಳು ಬರುತ್ತಿದ್ದಾರೆ. ಪುನೀತ್ ಚಿಕ್ಕಪ್ಪನ ಬಗ್ಗೆ ಹೇಳೋಕೆ ಮಾತಿಲ್ಲ. ಕಂಠೀರವ ಸ್ಟುಡಿಯೋಗೆ ಹೋಗುತ್ತೇನೆ. ಅವರನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಮಾತನಾಡಿದ್ದಾರೆ.

ಈ ವೇಳೆ ಹೊಂಬಾಳೆ ಸಂಸ್ಥೆ (Hombale Films) ಕೂಡ, ‘ಯುವ’ ಸಿನಿಮಾ ಹೊಸ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಯುವ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.

Share This Article