ಮೊದಲ ಬಾರಿಗೆ ಡಬಲ್ ರೋಲ್ ನಲ್ಲಿ ಮಿಂಚಲಿದ್ದಾರಾ ರಾಕಿಂಗ್ ಸ್ಟಾರ್?

Public TV
2 Min Read

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿರುವ ಕೆಜಿಎಫ್ ಚಿತ್ರ ಭಾರಿ ಕೂತುಹಲ ಮೂಡಿಸಿದೆ. ದೊಡ್ಡ ಬಜೆಟ್ ನಲ್ಲಿ ತಯಾರಾಗುತ್ತಿರುವ ಈ ಚಿತ್ರದ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡುತ್ತಿಲ್ಲ. ಆದರೆ ಈಗ ಈ ಚಿತ್ರದಲ್ಲಿ ಯಶ್ ಡಬಲ್ ರೋಲ್‍ ನಲ್ಲಿ ಕಾಣಿಸಿಕೊಳ್ತಾರಾ ಅನ್ನೋ ಬಗ್ಗೆ ಚರ್ಚೆಯಾಗ್ತಿದೆ.

ಇದು ಕೋಲಾರದ ಗಣಿ ಮಾಫಿಯಾದ ಸುತ್ತ ಹೆಣೆದ ಕಥೆ. ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ ನಡೆದ ಸತ್ಯ ಘಟನೆಗಳನ್ನು ಇಟ್ಟುಕೊಂಡು ಸಿನಿಮ್ಯಾಟಿಕ್ ಟಚ್ ಕೊಟ್ಟಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ಇದಕ್ಕಾಗಿ ಯಶ್ ಮುಖದ ತುಂಬಾ ದಟ್ಟವಾದ ದಾಡಿ ಬಿಟ್ಟು, ಉದ್ದುದ್ದ ಕೂದಲನ್ನು ಜೋಪಾನ ಮಾಡಿದ ಸ್ಟಿಲ್ ಗಳನ್ನು ನೀವು ಈಗಾಗಲೇ ನೋಡಿದ್ದೀರಿ. ಆದರೆ ಯಾವುದೇ ಕಾರಣಕ್ಕೂ ಕಥೆಯಾಗಲಿ ಅಥವಾ ಯಶ್ ಪಾತ್ರದ ಡಿಟೇಲ್ಸ್ ಆಗಲಿ ಹೊರಬಿದ್ದಿಲ್ಲ.

ಈ ಚಿತ್ರದಲ್ಲಿ ಯಶ್ ಎರಡು ವಿಭಿನ್ನ ಶೇಡ್ ಗಳಲ್ಲಿ ನಟಿಸುತ್ತಿದ್ದಾರೆ ಎನ್ನುವುದು ಕೂಡ ಅವರವರೇ ಅಂದುಕೊಂಡಿದ್ದು, ಕಲ್ಪನೆ ಮಾಡಿಕೊಂಡಿದ್ದು. ಆದರೆ ಇಲ್ಲೊಂದು ಅನುಮಾನ ಏಳುವುದು ಸಹಜ. ಎಪ್ಪತ್ತರ ದಶಕದ ಯಶ್ ಮತ್ತು ಅಪ್‍ ಡೇಟ್ ವರ್ಶನ್ ಯಶ್ ಇಬ್ಬರೂ ಇರುತ್ತಾರಂತೆ. ಹಾಗಾದರೆ ಕೇವಲ ಒಬ್ಬ ವ್ಯಕ್ತಿಯೇ ಈ ರೀತಿ ಬದಲಾಗಲು ಸಾಧ್ಯ ಇಲ್ಲ.

ಡಬಲ್ ರೋಲ್ ನಲ್ಲಿ ಕಾಣಿಸಿದರೆ ಮಾತ್ರ ಇಪ್ಪತ್ತು ಮೂವತ್ತು ವರ್ಷಗಳ ಅಂತರದ ಕತೆ ಹೆಣೆಯಲು ಸಾಧ್ಯ. ಅದಲ್ಲದೆ ಕೆಜಿಎಫ್ ಎರಡು ಭಾಗಗಳಲ್ಲಿ ತೆರೆ ಕಾಣಲಿದೆ. ಏಪ್ರಿಲ್ ಅಥವಾ ಮಾರ್ಚ್ ನಲ್ಲಿ ಮೊದಲ ಭಾಗ, ಅದಾದ ಮೂರು ತಿಂಗಳ ನಂತರ ಎರಡನೇ ಭಾಗ. ಅದೇ ಡಬಲ್ ರೋಲ್ ಪಾತ್ರದ ಬಗ್ಗೆ ಕುತೂಹಲ ಮತ್ತು ಅನುಮಾನ ಮೂಡಿಸಿದೆ.

ಈಗಾಗಲೇ ಈ ಸಿನಿಮಾದ ಎರಡು ಸ್ಟಿಲ್‍ ಗಳು ಮಾತ್ರ ಹೊರಬಿದ್ದಿವೆ. ಇದೇ ಜನವರಿಯಲ್ಲಿ ಟೀಸರ್ ಬರಲಿದೆ. ಅದರಿಂದಾದರೂ ಯಶ್ ಡಬಲ್ ರೋಲ್ ಬಗ್ಗೆ ಮಾಹಿತಿ ಸಿಗಬಹುದು ಎನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಆದರೆ ಕನ್ನಡ ಚಿತ್ರರಂಗದಲ್ಲಿಯೇ ಅತಿ ಹೆಚ್ಚು ಬಜೆಟ್‍ನ ಸಿನಿಮಾ ಎನ್ನುವ ಕ್ರೆಡಿಟ್ ಹೊಂದಿರುವ ಈ ತಂಡ ಅಷ್ಟು ಸುಲಭವಾಗಿ ಗುಟ್ಟನ್ನು ಬಿಟ್ಟುಕೊಡಲು ಸಾಧ್ಯ ಇಲ್ಲ. ಬಹುಶಃ ಸಿನಿಮಾ ತೆರೆ ಕಂಡ ಮೇಲೆಯೇ ಅಸಲಿ ಸತ್ಯ ಹೊರಬೀಳುತ್ತದೆ. ಆದರೆ ವಿಶ್ಲೇಷಣೆ ಪ್ರಕಾರ ಯಶ್ ಡಬಲ್ ರೋಲ್‍ ನಲ್ಲಿ ಕಾಣಿಸುವುದು ನಿಜ ಎನಿಸುತ್ತದೆ.

https://www.youtube.com/watch?v=a2I0k579eMk

Share This Article
Leave a Comment

Leave a Reply

Your email address will not be published. Required fields are marked *