ಶ್ರೇಯಸ್ ಪಡ್ಡೆಹುಲಿಯಾದದ್ದರ ಹಿಂದಿದೆ ಪರಿಶ್ರಮದ ಕಹಾನಿ!

Public TV
1 Min Read

ಬೆಂಗಳೂರು: ಪಡ್ಡೆಹುಲಿ ಚಿತ್ರದ ನವನಾಯಕ ಶ್ರೇಯಸ್ ಅವರ ಶ್ರದ್ಧೆ ಎಂಥಾದ್ದೆಂಬುದರ ಝಲಕುಗಳು ಈಗಾಗಲೇ ಅನಾವರಣಗೊಂಡಿವೆ. ಶ್ರೇಯಸ್ ಅವರಲ್ಲೊಬ್ಬ ಪಳಗಿದ ನಟನ ಚಹರೆಯನ್ನ ಕಂಡು ಪ್ರೇಕ್ಷಕರು ಕೂಡಾ ಥ್ರಿಲ್ ಆಗಿದ್ದಾರೆ. ಎಂ.ರಮೇಶ್ ರೆಡ್ಡಿ ನಿರ್ಮಾಣ ಮಾಡಿರೋ ಈ ಚಿತ್ರ, ಗುರುದೇಶಪಾಂಡೆಯವರ ನಿರ್ದೇಶನದಲ್ಲಿ ಇದೇ ಏಪ್ರಿಲ್ 19ರಂದು ತೆರೆ ಕಾಣಲು ರೆಡಿಯಾಗಿದೆ.

ಈ ಹಿಂದೆ ರಾಜಾಹುಲಿ ಎಂಬ ಸೂಪರ್ ಹಿಟ್ ಕೊಟ್ಟಿದ್ದವರು ನಿರ್ದೇಶಕ ಗುರು ದೇಶಪಾಂಡೆ. ಅವರು ಪಡ್ಡೆಹುಲಿ ಚಿತ್ರವನ್ನೂ ಕೂಡಾ ರಾಜಾಹುಲಿಯಂತೆಯೇ ಬಲು ಕಾಳಜಿಯಿಂದ ರೂಪಿಸಿದ್ದಾರೆ. ಪ್ರತಿಯೊಂದರಲ್ಲಿಯೂ ಪರಿಪೂರ್ಣತೆ ಬಯಸುವ ಗುರುದೇಶಪಾಂಡೆ ಆ ದಿಸೆಯಲ್ಲಿಯೇ ಶ್ರೇಯಸ್ ಅವರನ್ನು ಪಳಗಿದ ನಟನಂತೆ ರೂಪಿಸಿದ್ದಾರೆ.

ಈ ಸಿನಿಮಾಗಾಗಿಯೇ ದೈಹಿಕವಾಗಿಯೂ ಫಿಟ್ ಆಗಿರೋ ಶ್ರೇಯಸ್ ನಟನೆಯಲ್ಲಿಯೂ ತರಬೇತಿ ಪಡೆದುಕೊಂಡಿದ್ದಾರೆ. ಡ್ಯಾನ್ಸ್, ಫೈಟ್ ಸೇರಿದಂತೆ ಈ ಚಿತ್ರಕ್ಕೆ ಏನೇನು ಬೇಕೋ ಅದೆಲ್ಲದರಲ್ಲಿಯೂ ಪಳಗಿಕೊಂಡಿದ್ದಾರೆ. ಎಂಥಾ ರಿಸ್ಕೀ ಸನ್ನಿವೇಶಗಳಿದ್ದರೂ ಮತ್ತೊಂದು ಯೋಚನೆ ಮಾಡದೆ ಅಖಾಡಕ್ಕಿಳಿದು ಬಿಡುತ್ತಿದ್ದ ಶ್ರೇಯಸ್ ಅವರ ಬದ್ಧತೆಯ ಬಗ್ಗೆ ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಇಡೀ ಚಿತ್ರತಂಡದಲ್ಲೊಂದು ಮೆಚ್ಚುಗೆಯಿದೆ.

ಇಂಥಾ ಪರಿಶ್ರಮಕ್ಕೆ ಯಾವತ್ತಿದ್ದರೂ ಫಲ ಇದ್ದೇ ಇರುತ್ತೆ. ಹೀಗೆ ಶ್ರಮ ವಹಿಸಿ ಬಂದವರನ್ನು ಕನ್ನಡದ ಸಹೃದಯಿ ಪ್ರೇಕ್ಷಕರು ದೂರ ತಳ್ಳಿದ ಉದಾಹರಣೆಗಳೇ ಇಲ್ಲ. ಪಡ್ಡೆಹುಲಿಯನ್ನೂ ಕೂಡಾ ಪ್ರೇಕ್ಷಕರು ಅಂಥಾದ್ದೇ ಮನಸ್ಥಿತಿಯೊಂದಿಗೆ ಸ್ವೀಕರಿಸಿ ಗೆಲ್ಲಿಸೋ ಎಲ್ಲ ಲಕ್ಷಣಗಳೂ ದಟ್ಟವಾಗಿವೆ.

Share This Article
Leave a Comment

Leave a Reply

Your email address will not be published. Required fields are marked *