ಶಿವಣ್ಣನ ಮನ ಗೆದ್ದ ʻಲವ್ ಯೂ ಮುದ್ದುʼ ಜೋಡಿ – ಹ್ಯಾಟ್ರಿಕ್‌ ಹೀರೋ ಹೇಳಿದ್ದೇನು?

2 Min Read

ಸೋಷಿಯಲ್‌ ಮೀಡಿಯಾಗಳ (Social Media) ಮೂಲಕ ಸದ್ದು ಮಾಡಿದ್ದ ಜೋಡಿಯ ನೈಜ ಪ್ರೇಮಕಥೆಯನ್ನಾಧರಿಸಿದ ‘ಲವ್ ಯೂ ಮುದ್ದು’ ಸಿನಿಮಾ ಈಗ ಒಟಿಟಿಗೆ (OTT) ಬಂದಿದೆ. ಕಳೆದ ವರ್ಷ ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದ ಈ ಚಿತ್ರವನ್ನ ನೋಡಿ ʻಹ್ಯಾಟ್ರಿಕ್ ಹೀರೋʼ ಶಿವರಾಜ್ ​​ಕುಮಾರ್ (ShivarajKumar) ಕೂಡ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ.

ಹೌದು. ಕಳೆದ ವರ್ಷ ಸಮ್ಮೋಹಕ ಗೆಲುವುಗಳ ಸಾಲಿನಲ್ಲಿ ಕೆಮಿಸ್ಟ್ರಿ ಆಫ್ ಕರಿಯಪ್ಪ ಖ್ಯಾತಿಯ ಕುಮಾರ್ ನಿರ್ದೇಶನದ ‘ಲವ್ ಯೂ ಮುದ್ದು’ ಚಿತ್ರವೂ (Love You Muddu Film) ಸೇರಿಕೊಂಡಿದೆ. ಪ್ರೇಮಿಗಳ ನೈಜ ಕಥೆಯನ್ನಾಧರಿಸಿ ಈ ಸಿನಿಮಾ ರೂಪುಗೊಂಡಿತ್ತು. ಭಾಷೆ, ಗಡಿ ಮೀರಿ ಈ ಕಥನ ಕರುನಾಡ ಸಿನಿ ಪ್ರೇಮಿಗಳ ಮನ ಗೆದ್ದಿತ್ತು. ಇದೀಗ ಅಮೇಜಾನ್ ಪ್ರೈಮ್‌ನಲ್ಲಿಯೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪ್ರೈಮ್‌ನಲ್ಲಿ ಈ ಸಿನಿಮಾ ನೋಡಿ ಹ್ಯಾಟ್ರಿಕ್ ಹೀರೋ ಶಿವಣ್ಣ ಮೆಚ್ಚಿಕೊಂಡಿದ್ದಾರೆ. ಇದನ್ನೂ ಓದಿ: ದರ್ಶನ್ ಹೆಚ್ಚುವರಿ ಬ್ಲಾಂಕೆಟ್‌ ಸೌಲಭ್ಯಕ್ಕೆ ಕುತ್ತು – ಕಾರಾಗೃಹ ಡಿಜಿಪಿ ಹೊಸ ಆದೇಶ

ಸದಾ ಒಳ್ಳೆಯ ಕನ್ನಡ ಸಿನಿಮಾಗಳನ್ನ ಬೆಂಬಲಿಸುತ್ತಾ, ಸಿನಿಮಾ ತಂಡದ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಾ ಬರುತ್ತಿರುವವರು ಶಿವರಾಜ್‌ಕುಮಾರ್‌ ಅವರು ʻಲವ್ ಯೂ ಮುದ್ದುʼ ಚಿತ್ರವನ್ನ ನೋಡಿ, ನಾಯಕ ಸಿದ್ದು ಅವರಿಗೆ ಕರೆ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರತಂಡದ ಸಮೇತ ಭೇಟಿಯಾಗುವಂತೆ ಆಹ್ವಾನಿಸಿದ್ದಾರೆ. ಇದರಿಂದ ಖುಷಿಗೊಂಡ ಸಿದ್ದು ಮೂಲಿಮನಿ, ರೇಷ್ಮಾ, ಕುಮಾರ್, ನಿರ್ಮಾಪಕ ನರಸಿಂಹ ಮೂರ್ತಿ, ವಿತರಕ ಜಗದೀಶ್ ಗೌಡ ಸೇರಿದಂತೆ ತಮ್ಮ ತಂಡದೊಂದಿಗೆ ಕಂಠೀರವ ಸ್ಟುಡಿಯೋದಲ್ಲಿ ಶಿವಣ್ಣನನ್ನ ಭೇಟಿ ಮಾಡಿದ್ದಾರೆ. ಇದನ್ನೂ ಓದಿ: `ಘಾರ್ಗಾ’ ಚಿತ್ರದ ಟ್ರೈಲರ್ ರಿಲೀಸ್‌ – ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಕಂಡು ಸಿನಿಪ್ರಿಯರು ಫುಲ್‌ ಖುಷ್‌

ಚಿತ್ರೀಕರಣದ ನಡುವೆಯೂ ಬಿಡುವು ಮಾಡಿಕೊಂಡ ಶಿವಣ್ಣ, ʻಲವ್ ಯೂ ಮುದ್ದುʼ ಚಿತ್ರದ ಬಗ್ಗೆ ಹಾಡಿಹೊಗಳಿದ್ದಾರೆ. ʻಲವ್ ಯೂ ಮುದ್ದುʼ ಚಿತ್ರ ತನ್ನ ಕಂಟೆಂಟಿನ ಕಾರಣದಿಂದಲೇ ಪ್ರೇಕ್ಷಕರನ್ನ ಸೆಳೆದುಕೊಂಡಿತ್ತು. ಒಂದು ಸತ್ಯ ಕಥೆಯನ್ನ ನೈಜವಾಗಿ ಮನಸಿಗೆ ಸೋಕುವಂತೆ ಕಟ್ಟಿಕೊಟ್ಟಿದ್ದ ಕುಮಾರ್ ಪ್ರೇಕ್ಷಕರನ್ನ ಸೆಳೆದುಕೊಂಡಿದ್ದರು. ಬಾಯಿಂದ ಬಾಯಿಗೆ ಸದಭಿಪ್ರಾಯ ಹಬ್ಬಿಕೊಳ್ಳುವ ಮೂಲಕ ಈ ಸಿನಿಮಾ ಯಶಸ್ವೀ ಪ್ರದರ್ಶನ ಕಂಡಿತ್ತು. ಆ ನಂತರ ಅಮೇಜಾನ್ ಪ್ರೈಮ್‌ಗೆ ಎಂಟ್ರಿ ಕೊಟ್ಟಿದ್ದ ಲವ್ ಯೂ ಮುದ್ದು ಅಲ್ಲಿಯೂ ಯಶ ಕಾಣುತ್ತಿದೆ.

ಇಂತಹ ಹೊತ್ತಿನಲ್ಲಿ ಶಿವಣ್ಣನ ಮೆಚ್ಚುಗೆಯ ಮಾತುಗಳಿಂದ ಚಿತ್ರತಂಡ ಖುಷಿಗೊಂಡಿದೆ. ಕಿಶನ್ ಎಂಟರ್‌ಟೈನ್ಮೆಂಟ್ ಬ್ಯಾನರಿನಡಿಯಲ್ಲಿ ಕಿಶನ್ ಟಿ.ಎನ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಲಕ್ಷ್ಮಿಕಾಂತ್ ಟಿ.ಎಸ್ ಕಾರ್ಯಕಾರಿ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ. ಕೃಷ್ಣ ದೀಪಕ್ ಛಾಯಾಗ್ರಹಣ, ಅನಿರುದ್ಧ್ ಶಾಸ್ತ್ರಿ ಸಂಗೀತ ನಿರ್ದೇಶನ, ಸಿಎಸ್ ದೀಪು ಸಂಕಲನ ಈ ಚಿತ್ರಕ್ಕಿದೆ.

Share This Article