ಮನೆಗೆ ಬಂದ ರಣಧೀರನಿಗೆ ವಿಗ್ರಹ ತೋರಿಸಿದ ಭಂಡ

Public TV
1 Min Read

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಮಗಳ ಮದುವೆಯಲ್ಲಿ ಬ್ಯುಸಿಯಾಗಿದ್ದು, ಈಗ ಸ್ಯಾಂಡಲ್‍ವುಡ್‍ನ ಗಣ್ಯರು, ಸ್ನೇಹಿತರು, ಕುಟುಂಬದವರಿಗೆ ಮತ್ತು ಆಪ್ತರ ಮನೆಗೆ ಹೋಗಿ ಆಮಂತ್ರಣ ಪತ್ರಿಕೆ ನೀಡಿ ಮದುವೆಗೆ ಆಹ್ವಾನ ಮಾಡುತ್ತಿದ್ದಾರೆ.

ರವಿಚಂದ್ರನ್ ತಮ್ಮ ಪುತ್ರ ಮನೋರಂಜನ್ ಜೊತೆ ಜಗ್ಗೇಶ್ ಮನೆಗೆ ತೆರಳಿ ಮಗಳ ಮದುವೆ ಕರೆಯೋಲೆ ನೀಡಿದ್ದಾರೆ. ಈ ವೇಳೆ ಜಗ್ಗೇಶ್ ಮನೆಗೆ ಬಂದ ರಣಧೀರನಿಗೆ ತಮ್ಮ ಮನೆಯಲ್ಲಿರುವ ವಿಗ್ರಹವೊಂದನ್ನು ತೋರಿಸಿದ್ದಾರೆ. ರಣಧೀರ ಮನೆಗೆ ಎಂಟ್ರಿ ಕೊಟ್ಟಾಗ ಕಷ್ಟಕಾಲದಲ್ಲಿ ತಮಗೆ ಸಹಾಯ ಮಾಡಿದ್ದ ರವಿಚಂದ್ರನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ನಟ ಜಗ್ಗೇಶ್ ಕಷ್ಟಕಾಲದಲ್ಲಿದ್ದಾಗ ರವಿಚಂದ್ರನ್ ಅವರು ಜಗ್ಗೇಶ್‍ಗೆ ಹಣ ಸಹಾಯ ಮಾಡಿದ್ದರು. ಆದರೆ ಆ ಹಣದಿಂದ ಜಗ್ಗೇಶ್ ದಂಪತಿ ಒಂದು ದೇವರ ವಿಗ್ರಹವನ್ನು ತಂದು ದೇವರ ಮನೆಯಲ್ಲಿ ಇಟ್ಟುಕೊಂಡಿದ್ದರು. ಈಗ ಮಗಳ ಮದುವೆಗೆ ಆಹ್ವಾನಿಸಲು ಬಂದ ರವಿಚಂದ್ರನ್ ಅವರನ್ನು ದೇವರ ಮನೆಗೆ ಕರೆದುಕೊಂಡು ಹೋಗಿ ಆ ವಿಗ್ರಹವನ್ನು ತೋರಿಸಿದ್ದಾರೆ. ಆಗ ರವಿಚಂದ್ರನ್ ಅದನ್ನು ನೋಡಿ ಮೂಕವಿಸ್ಮಿತರಾಗಿದ್ದಾರೆ.

ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದೇನು?
ಇದನ್ನು ಜಗ್ಗೇಶ್ “ಮಗಳ ಮದುವೆಯ ಮಮತೆಯ ಕರೆಯೋಲೆಗಾಗಿ ಬಂದಾಗ ಭಂಡನ ಮಡದಿ ಜೊತೆಯಾದಾಗ. ರಣಧೀರನಿಗೆ ನನ್ನ ದೇವರಮನೆ ತೋರಿ ರಣಧೀರ ಭಂಡನಿಗೆ ಕಷ್ಟಕಾಲದಲ್ಲಿ ಕೊಟ್ಟ ಹಣದಿಂದ ಅಂದು ಕೊಂಡ ದೇವರ ವಿಗ್ರಹ ತೋರಿದಾಗ ಮೂಕವಿಸ್ಮಿತ ರಣಧೀರ” ಎಂದು ಬರೆದುಕೊಂಡಿದ್ದಾರೆ.

“ಕಷ್ಟಕಾಲದಲ್ಲಿ ನನಗೆ ಸಂಬಳ, ಪ್ರೀತಿ, ಉತ್ಸಾಹ ತುಂಬಿ ಭುಜ ತಟ್ಟಿದ ರಣಧೀರ ಮನೆಗೆ ಬಂದಾಗ ನನಗೆ ಹೆಮ್ಮೆಯಾಯಿತು. ಭವಿಷ್ಯ ನಾನು, ರಣಧೀರ, ಶಿವಣ್ಣ ಭಾವನಾತ್ಮಕವಾಗಿ ಬದುಕಿರುವ ಕಡೆಯ ತಲೆಮಾರು ಚಿತ್ರರಂಗಕ್ಕೆ ಅನ್ನಿಸಿತು ಮನ. ಹತ್ತಿದ್ದ ಏಣಿನಾ ಒದಿಬ್ಯಾಡ. ನನ್ನ ಹಾಡಿನ ಸಾಲಿನಂತೆ ಬದುಕಿರುವೆ ಕೊನೆಯವರೆಗೂ. ನೂರ್ಕಾಲ ದೀರ್ಘ ಸುಮಂಗಲಿಯಾಗಿ ಬಾಳಿ ಎಂದು ಶುಭ ಹಾರೈಸಿ ರಣಧೀರನ ಮಗಳಿಗೆ. ಇಂತಿ ರಣಧೀರನ ಅನ್ನ ಉಂಡವ” ಎಂದು ಬರೆದುಕೊಂಡು ರವಿಚಂದ್ರನ್ ಮಾಡಿದ ಸಹಾಯವನ್ನು ಮೆಲುಕು ಹಾಕಿದ್ದಾರೆ.

ಮುಂದಿನ ತಿಂಗಳು ಮೇ 28 ಮತ್ತು 29 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಗೀತಾಂಜಲಿ ಮತ್ತು ಉದ್ಯಮಿ ಅಜಯ್ ಮದುವೆ ನಡೆಯಲಿದೆ.

https://www.instagram.com/p/BwrR8gkjIGS/

Share This Article
Leave a Comment

Leave a Reply

Your email address will not be published. Required fields are marked *