ಯೂಟ್ಯೂಬರ್ ರಣವೀರ್‌ ಅಲಹಬಾದಿಯಾ ಕೀಳು ಹೇಳಿಕೆ ಕೇಸ್‌ – ರಾಖಿ ಸಾವಂತ್‌ಗೆ ಸಮನ್ಸ್

Public TV
2 Min Read

– ಫೆ.27ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್

ನವದೆಹಲಿ: ಇಂಡಿಯಾಸ್‌ ಗಾಟ್‌ ಲ್ಯಾಟೆಂಟ್ (India’s Got Latent) ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯಲ್ಲಿ ಯೂಟ್ಯೂಬರ್‌ ರಣವೀರ್‌ ಅಲಹಬಾದಿಯಾ ಅಶ್ಲೀಲ ಹೇಳಿಕೆಗಳನ್ನು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟಿ ರಾಖಿ ಸಾವಂತ್‌ಗೆ (Rakhi Sawant) ಮಹಾರಾಷ್ಟ್ರ ಸೈಬರ್‌ ಪೊಲೀಸರು ಸಮನ್ಸ್‌ ನೀಡಿದ್ದಾರೆ.

ಇದೇ ಫೆ.27 ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸುವಂತೆ ನಟಿಗೆ ಸಮನ್ಸ್‌ ನೀಡಿದ್ದಾರೆ. ಇದೇ ವೇಳೆ ರಣವೀರ್ ಅಲಹಬಾದಿಯಾ (Ranveer Allahbadia), ಸಮಯ್‌ ರೈನಾ, ಆಶಿಶ್ ಚಂಚಲಾನಿ, ಅಪೂರ್ವ ಮುಖಿಜಾ ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇತರ ಪ್ಯಾನಲಿಸ್ಟ್‌ಗಳಿಗೂ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸಮನ್ಸ್‌ ಜಾರಿಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚೆಗೆ ನಡೆದಿದ್ದ ಇಂಡಿಯಾಸ್‌ ಗಾಟ್‌ ಟ್ಯಾಲೆಂಡ್‌ ಶೋನಲ್ಲಿ ರಾಖಿ ಸಾವಂತ್‌ ಅತಿಥಿಯಾಗಿ‌ ಭಾಗವಹಿಸಿದ್ದರು. ಈ ಹಿನ್ನೆಲೆ ರಾಖಿ ಸಾವಂತ್‌ಗೆ ನೋಟಿಸ್‌ ನೀಡಲಾಗಿದೆ.

ಅಷ್ಟಕ್ಕೂ ಏನಿದು ವಿವಾದ?
ಯುಟ್ಯೂಬ್‌ ಚಾನೆಲ್‌ನಲ್ಲಿ ಮೂಡಿಬಂದ ʻಇಂಡಿಯಾಸ್‌ ಗಾಟ್‌ ಲ್ಯಾಟೆಂಟ್ʼ ಕಾಮಿಡಿ ರಿಯಾಲಿಟಿ ಶೋಗೆ ಬಂದಿದ್ದ ಸ್ಪರ್ಧಿಯೊಬ್ಬರ ಬಳಿ ಪೋಷಕರ ಲೈಂಗಿಕತೆಯ ಬಗ್ಗೆ ರಣವೀರ್‌ ಕೇಳಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆಯೇ ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ರಣವೀರ್‌ ಅಲ್ಲಾಬಾದಿಯಾ ಅವರ ಪಾಡ್‌ಕಾಸ್ಟ್‌ ಅನ್ನು ನಿಷೇಧಿಸುವಂತೆ ಆಗ್ರಹ ಕೇಳಿಬಂದಿತ್ತು. ಅಲ್ಲದೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಸೇರಿದಂತೆ ಹಲವು ನಾಯಕರೂ ರಣವೀರ್‌ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಸಂಬಂಧ ಪೊಲೀಸರು ದೂರು ಸಹ ದಾಖಲಿಸಿಕೊಂಡಿದ್ದಾರೆ.

ಕ್ಷಮೆ ಕೇಳಿದ ರಣವೀರ್ ಅಲ್ಲಾಬಾದಿಯಾ
ತಮ್ಮ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆಯೇ, ವಿಡಿಯೋ ಮೂಲಕ ಕ್ಷಮೆ ಕೇಳಿದ ರಣವೀರ್‌, ʻನನ್ನ ಹೇಳಿಕೆ ಸರಿಯಲ್ಲʼ, ಅದು ತಮಾಷೆಯೂ ಅಲ್ಲ. ಈ ಬಗ್ಗೆ ಎಲ್ಲರಲ್ಲೂ ಕ್ಷಮೆ ಕೇಳುತ್ತೇನೆ. ವೇದಿಕೆಗಳನ್ನು ಈ ರೀತಿಯೇ ಬಳಸಿಕೊಳ್ಳುತ್ತೀರಾ ಎಂದು ಹಲವರು ಕೇಳಿದ್ದೀರಿ. ಖಂಡಿತವಾಗಿ, ಈ ರೀತಿಯಾಗಿ ವೇದಿಕೆಯನ್ನು ಬಳಸಿಕೊಳ್ಳಲು ಇಷ್ಟಪಡುವುದಿಲ್ಲ. ಈಗ ಏನಾಗಿದೆಯೋ ಅದರ ಬಗ್ಗೆ ಯಾವುದೇ ವಿವರಣೆ, ಕಾರಣ ಅಥವಾ ಸ್ಪಷ್ಟನೆ ನೀಡುವುದಿಲ್ಲ. ನಿಮ್ಮ ಬಳಿ ಕ್ಷಮೆಯನ್ನು ಕೇಳುತ್ತೇನೆ ಎಂದು ಹೇಳಿದ್ದರು.

ಯಾರ‍್ಯಾರ ಮೇಲೆ ಕೇಸ್‌?
ಈ ವಿವಾದಕ್ಕೆ ಸಂಬಂಧಿಸಿದಂತೆ ಆಶೀಶ್ ಚಂಚ್ಲಾನಿ, ಜಸ್‌ಪ್ರೀತ್ ಸಿಂಗ್, ಅಪೂರ್ವಾ ಮಖಿಜಾ, ರಣವೀರ್ ಅಲಹಬಾದಿಯಾ, ಸಮಯ್ ರೈನಾ ಇತರರ ವಿರುದ್ಧ ಕೇಸ್‌ ದಾಖಲಾಗಿದೆ. ಇವರ ಮೇಲೆ ಅಶ್ಲೀಲತೆಯನ್ನು ಉತ್ತೇಜಿಸುವ ಚರ್ಚೆಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಲಾಗಿದೆ. ಇವರ ವಿರುದ್ಧ ವಿವಿಧ ಸೆಕ್ಷನ್‌ಗಳಡಿ ಗುವಹಾಟಿ ಪೊಲೀಸರು ಸಹ ಕೇಸ್ ದಾಖಲಿಸಿದ್ದಾರೆ. ಈ ಸಂಬಂಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಕೂಡ ಟ್ವೀಟ್ ಮಾಡಿದ್ದರು.

Share This Article