ಗೌರಿಯನ್ನು ಮೌನ ಮಾಡಿದಾಗ ನಾನು, ನನ್ನಂತಹ ಹಲವರು ಹುಟ್ಟುತ್ತಾರೆ: ಪ್ರಕಾಶ್ ರೈ

Public TV
2 Min Read

ಬೆಂಗಳೂರು: ಬದುಕಿದ್ದಾಗ ಜನಪರವಾಗಿ ಹಾಗೂ ಸಮಾಜದ ಒಳಿತಿಗಾಗಿ, ಅನ್ಯಾಯದ ವಿರುದ್ಧ ಧ್ವನಿಯೆತ್ತುವವರು ಮಡಿದಾಗ ಸಮಾಧಿ ಮಾಡಲ್ಲ. ಬದಲಾಗಿ ಬಿತ್ತುತ್ತೇವೆ. ಯಾಕಂದ್ರೆ ಅದು ಮತ್ತೆ ಮೊಳಕೆಯೊಡೆದು ಹಲವು ಮರಗಳಾಗಿ, ಹಲವು ಧ್ವನಿಗಳಾಗುತ್ತದೆ ಅಂತ ನಟ ಪ್ರಕಾಶ್ ರೈ ಹೇಳಿದ್ದಾರೆ.

ನಗರದಲ್ಲಿ ಗೌರಿ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ, ಇಲ್ಲಿ ನೆರೆದಿರುವ ಹಾಗೂ ಎಲ್ಲರೊಳಗೆ ಅಡಗಿರುವ ಗೌರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಮಾತು ಆರಂಭಿಸಿದ ಅವರು, ದುರುಳ, ರಾಕ್ಷಸರಿಗೆ ಒಂದು ವಿಷಯ ಅರ್ಥವಾಗೋದೇ ಇಲ್ಲ ಅಂತ ಹೇಳಿದ್ರು.

ಗೌರಿಯ ಹಂತಕರಿಗೆ ಗೌರಿಯ ಸಾವನ್ನು ವಿಜ್ರಂಭಿಸುವವರಿಗೆ ನಾನು ಹೇಳೋದು ಇಷ್ಟೇ, ನಾನು ಗೌರಿಯನ್ನು ಸಮಾಧಾನ ಮಾಡಲಿಲ್ಲ, ಬಿತ್ತಿದ್ದೇವೆ. ಅದು ಧ್ವನಿಗಳಾಗಿ ದೊಡ್ಡ ಧ್ವನಿಯಾಗೋದಕ್ಕೆ ಈ ಸಭೆ ಹಾಗೂ ವೇದಿಕೆಯೇ ಕಾರಣವಾಗಿದೆ. ಕೆಲವು ಮರಣಗಳೇ ಹಾಗೇ ಅದು ಸಾಯಲ್ಲ. ಬದಲಾಗಿ ಹುಟ್ಟಿಸುತ್ತೆ. ಒಬ್ಬ ವೆಮುಲನ ಮರಣ ಒಬ್ಬ ಕನ್ನಯ್ಯ ಕುಮಾರ್ ನನ್ನು ಹುಟ್ಟಿಸಿತ್ತು. ಹಲವು ದಲಿತರನ್ನು ಕೊಲೆ ಮಾಡಿದಾಗ ಜಿಗ್ನೇಶ್ ಮೆವಾನಿ ಹುಟ್ಟುತ್ತಾನೆ. ಗೌರಿಯನ್ನು ಮೌನ ಮಾಡಿದಾಗ ನಾನು, ನನ್ನಂತಹ ಹಲವರು ಹುಟ್ಟುತ್ತಾರೆ. ಸಹಜ ಸಾವಾದ್ರೆ ನಾವೆಲ್ಲರೂ ಶ್ರದ್ಧಾಂಜಲಿ ಸಲ್ಲಿಸಬೇಕು. ಆದ್ರೆ ಗೌರಿಯ ಸಾವನ್ನು ನೋಡಿ, ಧ್ವನಿಯನ್ನು ಹತ್ತಿಕ್ಕುವ ಎಲ್ಲ ಶಕ್ತಿಗಳ ವಿರುದ್ಧ ಹೋರಾಡುವ ಒಂದು ಶ್ರದ್ಧಾಂಜಲಿಯಾಗಿದೆ ಅಂತ ನುಡಿದ್ರು.

ಗೌರಿ ನನಗೆ 35 ವರ್ಷಗಳಿಂದ ಗೊತ್ತು ಅಂತ ಹೇಳುತ್ತಾನೆ ಬಂದಿದ್ದೆ. ಆದ್ರೆ ಅವಳನ್ನು ಇವರು ಕೊಂದಾಗಲೇ ಗೊತ್ತಾಗಿದ್ದು, ನನಗೆ ಗೊತ್ತಿರಲಿಲ್ಲ ಗೌರಿ ಅಂತ. ಇವತ್ತಿನ ದಿನ ನಾನ್ಯಾಕೆ ಧ್ವನಿಯೆತ್ತಿದ್ದೇನೆ ಅಂದ್ರೆ, ಗೌರಿ ನನ್ಯಾಕೆ ಒಬ್ಬಳೆ ಬಿಟ್ಟೆ ಅಂತ ನನನ್ನು ಕಾಡ್ತಿದ್ದಾಳೆ. ಯಾಕಂದ್ರೆ ದುರುಳರಿಗೆ ಧ್ವನಿಯೆತ್ತುವವರನ್ನು ಒಂಟಿಯನ್ನಾಗಿಸಿ ಭೇಟೆಯಾಡುವ ಅಭ್ಯಾಸ ಅಂತ ಹೇಳಿದರು.

ಇವತ್ತು ಇಷ್ಟು ಜನ ಗೌರಿಯಿಂದ ಉತ್ತೇಜಿತರಾಗಿ ತೀವ್ರವಾಗಿ ಮಾತಾಡ್ತಿದ್ದೇವೆ ಅಂದ್ರೆ, ನಮ್ಮಲ್ಲರೊಳಗೆ ಎಲ್ಲೋ ಒಂದು ಕಡೆ ಪಾಪಪ್ರಜ್ಞೆಯನ್ನು ಗೌರಿ ಚುಚ್ಚಿದ್ದಾಳೆ. ಇವರೆಲ್ಲರೂ ಹೇಳುತ್ತಾರಲ್ವ ಆಧ್ಯಾತ್ಮ, ಸ್ಪಿರೀಚುವಲ್ ಅಂತ ಆತರದ ಆಧ್ಯಾತ್ಮಗಳಿದ್ದರೆ, ಮೇಲೆ ನಿಂತು ನಮ್ಮನ್ನು ನೋಡ್ತಿದ್ದಾರೆ ಅಂತೀವಿ. ಆದ್ರೆ ಗೌರಿಯಂತವರು ಸತ್ರೆ ಅವರು ಮೇಲೆ ನಿಂತು ನೋಡಲ್ಲ. ನಮ್ಮೆಲ್ಲರೊಳಗೆ ಧ್ವನಿಯಾಗಿ ಮಾತಾಡ್ತಾರೆ. ಈ ಧ್ವನಿ ಇನ್ನೂ ಹೆಚ್ಚಾಗಲಿ ಅಂತ ಹೇಳಿದ್ರು.

ಪ್ರಪಚಂದಲ್ಲಿ ಯಾವ ಶಕ್ತಿಗಳು ಬಹಳ ವರ್ಷ ಉಳಿದಿದ್ದಿಲ್ಲ. ಐದು ವರ್ಷ ಇದ್ದಾರೆ. ಕಷ್ಟಪಟ್ಟು ಇನ್ನೂ ಐದು ವರ್ಷ ಇರಕ್ಕೆ ಪ್ರಯತ್ನಿಸುತ್ತಾರೆ. ಮುಂದೊಂದು ದಿನ ಅವರೂ ಹೋಗ್ತಾರೆ. ಆದ್ರೆ ನಮ್ಮ ಆತಂಕವೇನೆಂದರೆ, ಹೋಗೋರು ಹೋಗ್ತಾರೆ, ಆದ್ರೆ ಹೋಗಬೇಕಾದರೆ ಒಂದು 20 ವರ್ಷ ನಾವು ಶುಶ್ರೂಷೆ ಮಾಡಬೇಕಾದಂತಹ ಗಾಯಗಳನ್ನು ಉಂಟುಮಾಡಿ ಹೋಗ್ತಾರೆ. ಆ ನೋವನ್ನು ಕಮ್ಮಿ ಮಾಡಬೇಕಾಗಿದೆ. ಎಲ್ಲೋ ಈತರದ ವೇದಿಕೆಗಳಲ್ಲಿ ಹಂಚಿ ಮಾತಾಡೋದಲ್ಲ ಅಂತ ತಿಳಿಸಿದ್ರು.

ನಮ್ಮ ಮನೆಯಿಂದ ಹೊರಗೆ ಹೋದ್ರೆ ರಾಜಕೀಯ ಶುರುವಾಗುತ್ತೆ. ನಾವು ನಮ್ಮ ಮನಃ ಸಾಕ್ಷಿಯಿಂದ ಯೋಚನೆ ಮಾಡಿ ಈ ತರದ ಶಕ್ತಿಗಳು ಬರುತ್ತವೆ ಅನ್ನೋ ಗುರಿಯನ್ನು ನೋಡದೆ, ಸ್ವಲ್ಪ ಸುಮ್ಮನಾಗಿದ್ದರಿಂದ ಅವರು ದೊಡ್ಡ ಶಕ್ತಿಗಳಾಗಿದ್ದಾರೆ. ಇವರ ಬಣ್ಣ ಬಯಲು ಮಾಡುವ ಮೂಲಕ ಇನ್ನೂ ದೊಡ್ಡ ಮಟ್ಟದಲ್ಲಿ ನಾವು ಹೋರಾಟ ಮಾಡಬೇಕಾಗುತ್ತದೆ. ಈ ಶಕ್ತಿಗಳನ್ನು ಒಂದೆಡೆ ನಿಲ್ಲಿಸಿದ ಮೇಲೆಯೇ ನಾವು ಗೌರಿ ಶ್ರದ್ಧಾಂಜಲಿ ಸಲ್ಲಿಸುವುದು ಅಂತ ಅವರು ಹೇಳಿದ್ರು.

Share This Article
Leave a Comment

Leave a Reply

Your email address will not be published. Required fields are marked *