ಮೋದಿ, ಪ್ರತಾಪ್ ಸಿಂಹಗೆ ಪರೋಕ್ಷವಾಗಿ ಟಾಂಗ್ ನೀಡಿದ ನಟ ಪ್ರಕಾಶ್ ರೈ

Public TV
3 Min Read

ಬೆಂಗಳೂರು: ಹಿಂದೂ ಭಯೋತ್ಪಾದನೆ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ನಟ ಪ್ರಕಾಶ್ ರೈ ಈಗ ನಾನು ಯಾವುದೇ ಪಂಥ ಅಥವಾ ಬ್ರಾಂಡ್‍ ಗೆ ಸೇರಿದವಲ್ಲ, ನಾನು ಪ್ರಚಾರಕ್ಕಾಗಿ ಮಾತನಾಡಲ್ಲ, ರಾಜಕೀಯ ನನ್ನ ಕ್ಷೇತ್ರ ಅಲ್ಲ ಅಂತ ಹೇಳಿದ್ದಾರೆ.

ಪ್ರೆಸ್ ಕ್ಲಬ್ ಬೆಂಗಳೂರು ವರದಿಗಾರರ ಕೂಟದ ವತಿಯಿಂದ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ನನಗೆ ಯಾವ ಪಕ್ಷದ ಮೇಲೂ ನಂಬಿಕೆ ಇಲ್ಲ. ಈಗಿರುವ ಪಕ್ಷಗಳ ಮುಖವಾಣಿಯಾಗಿ ಇರಲು ಇಷ್ಟ ಪಡಲ್ಲ ಅಂದಿದ್ದಾರೆ.

ಪ್ರಕಾಶ್ ರೈ ಕೊಲ್ಲಿ ಅನ್ನುವ ಹೇಳಿಕೆ ಪ್ರತಿಕ್ರಿಯೆ ನೀಡಿದ ಅವರು, ಮಾತನಾಡುವರು ಮಾಡಲ್ಲ. ಇಂತಹ ಹೇಳಿಕೆಗಳನ್ನು ಅಯ್ಯೋ ಪಾಪ ಅಂತ ನೋಡ್ತಿನಿ. ಬರೀ ನನ್ನ ಬಗ್ಗೆ ಒಳ್ಳೆಯದ್ದನ್ನು ಮಾತ್ರ ಸ್ವೀಕರಿಸುವುದಿಲ್ಲ. ಬೇರೆಯವರ ಅಭಿಪ್ರಾಯ ನೋಡಬೇಕಲ್ಲ ಅಂತ ಹೇಳಿದ್ದಾರೆ.

ಜಿಎಸ್‍ಟಿ ಕೇವಲ ಬಿಜೆಪಿ, ಮೋದಿ ಮಾತ್ರ ತಂದಿದ್ದಲ್ಲ. ಆದ್ರೆ ಎಲ್ಲಾ ರಾಜ್ಯಗಳ ಸಿಎಂಗಳು ಕೂತು ಮಾತನಾಡಿ ಮಾಡಿರೋದು. ಜಿಎಸ್‍ ಟಿ ಬಗ್ಗೆ ಮಾತನಾಡಿದರೆ ತಪ್ಪಾಗಿ ತಿಳಿಯುತ್ತಾರೆ. ರೈ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾನೆ ಅನ್ನೋದು ಎಷ್ಟು ಸರಿ. ಕುಂಬಾರನ ನೋವು, ಜೇನು ಸಾಕಾಣಿಕೆಯವ ನೋವಿನ ಬಗ್ಗೆ ಮಾತನಾಡಿದ್ದೇನೆ ಅಂತ ಹೇಳಿದ್ರು.

ಬಿಜೆಪಿ ನಾಯಕನನ್ನು ಪ್ರಶ್ನೆ ಮಾಡಬೇಡ ಅಂಥ ಹೇಳಲಿ. ಅದು ಬಿಟ್ಟು ಸೊಂಟದ ಕೆಳಗಿನ ಮಾತುಗಳನ್ನಾಡುವುದು ಎಷ್ಟು ಸರಿ. ಮಗನ ಸಾವು ಎಷ್ಟು ನೋವು ಅನ್ನೋದು ತಂದೆಗೆ ಗೊತ್ತು. ಯಾರ ಪಕ್ಕದಲ್ಲಿ ಮಲಗಿದ್ದ ಅಂಥ ಮಾತನಾಡುವುದು ಎಷ್ಟು ಸರಿ ಹೇಳಿ ಅಂತ ಸಂಸದ ಪ್ರತಾಪ್ ಸಿಂಹ ವಿರುದ್ಧ ರೈ ಕಿಡಿಕಾರಿದ್ದಾರೆ.

ಮಾತೃ ಭಾಷೆ ಬಹಳ ಮುಖ್ಯ. ಕನ್ನಡ ಉಳಿಸೋಣ, ಬೆಳೆಸೋಣ. ಅಂತೆಯೇ ಬೇರೆ ಭಾಷೆಯನ್ನು ಕೂಡ ಕಲಿಯೋಣ. ಆದ್ರೆ ಹೇರಿಕೆ ಮಾಡುವುದು ಸರಿ ಅಲ್ಲ ಅಂದ ಅವರು, ಕಳೆದ ನಾಲ್ಕು ವರ್ಷಗಳಲ್ಲಿ ಹೆದರಿಸುವ ಪರಿಸ್ಥಿತಿ ಜಾಸ್ತಿಯಾಗುತ್ತಿದೆ. ಆದ್ರೆ ಹಿಂದೆ ಕೂಡ ಹತ್ತಿಕ್ಕುವ ಕೆಲಸ ಇತ್ತು. ಇಷ್ಟರ ಮಟ್ಟಿಗೆ ಇರಲಿಲ್ಲ. ಹಿಂದೆ ಕಾಂಗ್ರೆಸ್ ಅಧಿಕಾರದ ಬಗ್ಗೆ ಮಾತಾಡ್ತಾ ಇದ್ರು. ಆದ್ರೆ ಈಗ ಜಾತಿ, ಧರ್ಮ ಅಂತ ಮಾತಾಡ್ತಾರೆ. ಈಗ ಜನ ಎದ್ದು ನಿಂತು ಮಾತಾಡೋಕೂ ಹೆದರ್ತಾರೆ ಅಂತ ಮೋದಿ ಸರ್ಕಾರಕ್ಕೆ ರೈ ಟಾಂಗ್ ನೀಡಿದ್ರು.

ರಾಜಕೀಯ ನನ್ನ ಕೆಲಸ ಅಲ್ಲ. ಮುಂದೆ ರಾಜಕೀಯ ಪಕ್ಷ ಕಟ್ಟುವ ಉದ್ದೇಶ ಇಲ್ಲ. ನಾನು ಕಂಫರ್ಟ್ ಜೋನ್ ಗೆ ಬಂದ ಮೇಲೆ ಸುಮ್ಮನೇ ಕೂರುವುದು ಸತ್ತಂತೆ. ಈಗ ಮಾತನಾಡುವುದು ಎಸ್ಕೇಪಿಸಂ ಅನ್ನಿಸುತ್ತೆ ಆದ್ರೆ ಮಾತನಾಡುವುದು ನಿಲ್ಲಿಸಿ ಅನ್ನೋದು ಸರಿ ಇಲ್ಲ ಅಂದ್ರು.

ಇದೇ ವೇಳೆ ಸಿನಿಮಾ ಹಾಲ್‍ ಗಳಲ್ಲಿ ದೇಶಭಕ್ತಿ ಗೀತೆಗಳಿಗೆ ಎದ್ದು ನಿಲ್ಲುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹೆಚ್ಚು ಜನ ಎದ್ದು ನಿಲ್ತಾರೆ ಅನ್ನೋದು ನಂಬೋದಿಲ್ಲ. ಸಿನಿಮಾ ಮಂದಿರಗಳಲ್ಲಿ ಎದ್ದು ನಿಂತು ದೇಶಭಕ್ತಿ ತೋರಿಸ್ತಾರೆ ಅಂತ ನನಗೆ ಅನ್ನಿಸೋದಿಲ್ಲ. ದೇಶಭಕ್ತಿಯನ್ನು ಸಿನಿಮಾ ಮಂದಿರದಲ್ಲಿ ಎದ್ದು ನಿಂತು ತೋರಿಸುವ ಅವಶ್ಯಕತೆ ಇಲ್ಲ ಅಂತ ಅವರು ನುಡಿದ್ರು.

ಯಾವುದೇ ಪ್ರಶ್ನೆ ಇದ್ದರೇ ಅದನ್ನು ಸೆನ್ಸರ್ ಬೋರ್ಡ್‍ಗೆ ಕೇಳಿ. ಇಲ್ಲವಾದ್ರೆ ಸೆಟ್‍ ಗೆ ಹೋಗಿ ಒಡೆದು ಹಾಕುವುದು ಎಷ್ಟು ಸರಿ. ಸೆನ್ಸರ್ ಬೋರ್ಡ್ ಇದೆ. ಅದಕ್ಕೆ ಬಿಡಿ. ನೈತಿಕ ಪೊಲೀಸ್ ಗಿರಿ ಮಾಡಬೇಡಿ ಅಂತ ಪದ್ಮಾವತಿ ಸಿನಿಮಾ ವಿವಾದದ ವಿಚಾರದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು.

ಕನ್ನಡ ಧ್ವಜದಿಂದ ಕನ್ನಡಕ್ಕೆ ನಿಜವಾಗಲೂ ಗುರುತಿಸುವಿಕೆ ಸಿಗೋದಾದ್ರೆ ಸಿಗಲಿ. ಡಬ್ಬಿಂಗ್ ಚಿತ್ರ ನೋಡಬೇಡಿ ಅನ್ನೋ ಪ್ರಚಾರ, ಹೋರಾಟಗಳು ನಡೆಯಲಿ. ಅದು ಬಿಟ್ಟು ಡಬ್ಬಿಂಗ್ ಚಿತ್ರಕ್ಕೆ ತಡೆ ಮಾಡಿದ್ರೆ ಕಾನೂನು ಅಡ್ಡ ಬರುತ್ತೆ ಅಂದ್ರು.

 

Share This Article
Leave a Comment

Leave a Reply

Your email address will not be published. Required fields are marked *