ಕ್ಯಾಕರಿಸಿ ಉಗೀತಾ ಇದ್ರೂ ಎಷ್ಟೂಂತ ಒರೆಸ್ಕೋತಿರಪ್ಪ- ಪ್ರಕಾಶ್ ರಾಜ್

Public TV
2 Min Read

ಬೆಂಗಳೂರು: ನಾನು ಉಗಿದೆ ಒರಸ್ಕೊಂಡ್ರಿ, ಈಗ ಜನ ಕ್ಯಾಕರಿಸಿ ಉಗೀತಿದ್ದಾರೆ ಎಷ್ಟೂಂತ ಒರೆಸ್ಕೋತಿರಪ್ಪ ಎಂದು ನಟ, ರಾಜಕಾರಣಿ ಪ್ರಕಾಶ್ ರಾಜ್ ಕೇಂದ್ರದ ನೆರೆ ಪರಿಹಾರ ತಡವಾಗುತ್ತಿರುವ ಕುರಿತು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಟ್ವಿಟ್ಟರ್‍ನಲ್ಲಿ ಹಲವರು ನೆರೆ ಪರಿಹಾರ ತಡವಾಗಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದ ಟ್ವೀಟ್‍ಗಳ ಚಿತ್ರಗಳನ್ನು ಹಾಕಿ ಸಾಲುಗಳನ್ನು ಬರೆದಿದ್ದಾರೆ. ನಾನು ಉಗಿದೆ ಒರೆಸಿಕೊಂಡಿರಿ, ಈಗ ಜನ ಕ್ಯಾಕರಿಸಿ ಉಗಿಯುತ್ತಿದ್ದಾರೆ ಎಷ್ಟೂಂತ ಒರೆಸಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿರುವ ಟ್ವೀಟ್‍ಗಳನ್ನು ಪ್ರಕಾಶ್ ರಾಜ್ ಹಂಚಿಕೊಂಡಿದ್ದು, ‘ಉತ್ತರ ಕರ್ನಾಟಕದ ಹೈಕಳು ಮೋದಿ-ಮೋದಿ, ನಾನು ಚೌಕಿದಾರ್ ಎಂದು ಕುಣ್ಕೊಂಡು ಬೆಂಗಳೂರಿನಿಂದ ರೈಲು ಹಿಡ್ಕೊಂಡು ಹೋಗಿ ವೋಟ್ ಗುದ್ದಿದ್ದೇ ಬಂತು! ಇಂದು ಅವರ ಅಪ್ಪ-ಅವ್ವ ಊರು-ಕೇರಿ, ಹೊಲ-ಮನೆ ಕಳೆದುಕೊಂಡು ನಿಂತವರೆ, ಯಾವ್ ಚೌಕಿದಾರನೂ ಕಾಣ್ತಿಲ್ಲ! ಎಂದು ಬರೆದುಕೊಂಡಿದ್ದ ಟ್ವೀಟ್ ಸೇರಿದಂತೆ ಇನ್ನೂ ಕೆಲವು ಚಿತ್ರಗಳನ್ನು ಹಾಕಿ ಪ್ರಕಾಶ್ ರಾಜ್ ಪ್ರಶ್ನಿಸಿದ್ದಾರೆ.

ನೆರೆ ಸಂತ್ರಸ್ತರಾಗಿರುವ ಮೋದಿ ಅಭಿಮಾನಿಗಳೇ, ಮೋದಿಯವರ ನಡೆಯನ್ನು ಇಷ್ಟ ಪಡದವರು ಭಾರತ ಬಿಟ್ಟು ಪಾಕಿಸ್ತಾನಕ್ಕೆ ಹೋಗಬೇಕು ಎಂಬ ಮಾತು ನೆರೆ ಪರಿಹಾರದ ವಿಚಾರಕ್ಕೂ ಅನ್ವಯಿಸುತ್ತದೆಯೇ? ರಾಜ್ಯದ ಬಹುತೇಕ ಶಾಸಕರು ಸಂಸದರು ನರೇಂದ್ರ ಮೋದಿಯವರ ಕೈ ಕುಲುಕುವ ಅವಕಾಶ ಸಿಕ್ಕರೆ ಜೀವನವೇ ಪಾವನವಾಗುತ್ತದೆ ಎಂದು ಯೋಚಿಸುವ ಸ್ಥಿತಿಯಲ್ಲಿದ್ದಾರೆ. ಹೀಗಿರುವಾಗ ನೆರೆ ಪರಿಹಾರಕ್ಕಾಗಿ ಇವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಾರೆ ಎಂದೆಲ್ಲ ಆಸೆ ಇಟ್ಟುಕೊಳ್ಳುವುದು ಶುದ್ಧ ಮೂರ್ಖತನ ಎಂದು ಪ್ರಶ್ನಿಸಿದ ಟ್ವೀಟ್‍ನ ಚಿತ್ರವನ್ನು ಸಹ ಪ್ರಕಾಶ್ ರಾಜ್ ತಮ್ಮ ಟ್ವೀಟ್‍ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ಘೋಷಣೆ ತಡವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭಾರೀ ಚರ್ಚೆ ನಡೆಯುತ್ತಿದ್ದು, ಬಹುತೇಕ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚಿಂತಕ ಚಕ್ರವರ್ತಿ ಸೂಲಿಬೆಲೆ ಸಹ ಈ ಕುರಿತು ಆಕ್ರೋಶ ವ್ಯಕ್ತಪಡಿಸಿ, ರಾಜ್ಯದ ಸಂಸದರ ವಿರುದ್ಧ ಕಿಡಿ ಕಾರಿದ್ದರು. ಕಾಂಗ್ರೆಸ್, ಜೆಡಿಎಸ್ ಸಹ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿವೆ.

Share This Article
Leave a Comment

Leave a Reply

Your email address will not be published. Required fields are marked *