ಸನಾತನ ಧರ್ಮದ ಬಗ್ಗೆ 100 ಬಾರಿ ಯೋಚಿಸಿ ಮಾತನಾಡಿ: ಕಾರ್ತಿ ವಿರುದ್ಧ ಪವನ್‌ ಕಲ್ಯಾಣ್‌ ಕಿಡಿ

Public TV
2 Min Read

ತಿರುಪತಿ ತಿರುಮಲ ದೇವಸ್ಥಾನದಲ್ಲಿ (Tirupati Tirumala Temple) ಭಕ್ತರಿಗೆ ಪ್ರಸಾದವಾಗಿ ನೀಡಿದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಇದೆ ಎಂಬುದು ದೃಢವಾಗಿರುವುದು ವರದಿಗಳಿಂದ ತಿಳಿದು ಬಂದಿದೆ. ಈ ಬೆನ್ನಲ್ಲೇ ಇದರ ವಿವಾದ ದೇಶದೆಲ್ಲೆಡೆ ಸಂಚಲನ ಮೂಡಿಸಿದೆ. ಹೀಗಿರುವಾಗ ಸಮಾರಂಭವೊಂದರಲ್ಲಿ ‘ಲಡ್ಡು ವಿಷಯ ಈಗ ಬೇಡ’ ಎಂದ ಕಾರ್ತಿ (Karthi) ಹೇಳಿಕೆಗೆ ಪವನ್ ಕಲ್ಯಾಣ್ (Pawan Kalyan) ಎಚ್ಚರಿಕೆ ಕೊಟ್ಟಿದ್ದಾರೆ. ಸನಾತನ ಧರ್ಮದ ವಿಚಾರದಲ್ಲಿ 100 ಬಾರಿ ಯೋಚಿಸಿ ಮಾತನಾಡಿ ಎಂದು ಗುಡುಗಿದ್ದಾರೆ. ಇದನ್ನೂ ಓದಿ:ಲೈಂಗಿಕ ಕಿರುಕುಳ ಆರೋಪ: ನಟ, ರಾಜಕಾರಣಿ ಮುಕೇಶ್ ಬಂಧನ

ಸಿನಿಮಾ ಸಮಾರಂಭವೊಂದರಲ್ಲಿ ಲಡ್ಡು ವಿಷಯ ಈಗ ಬೇಡ, ಅದು ಬಹಳ ಸೆನ್ಸಿಟಿವ್ ವಿಷಯ ಆಗಿದೆ ಎಂದ ತಮಿಳು ನಟ ಕಾರ್ತಿ ಹೇಳಿಕೆಯನ್ನು ಪವನ್ ಕಲ್ಯಾಣ್ ಖಂಡಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿ, ನಾನು ಸಿನಿಮಾ ಮಂದಿಗೆ ಎಚ್ಚರಿಕೆ ನೀಡಲು ಬಯಸುತ್ತೇನೆ. ನೀವು ಅದರ ಬಗ್ಗೆ ಮಾತನಾಡಲು ಹೋದರೆ, ಗೌರವದಿಂದ ಮಾತನಾಡಿ. ಅಥವಾ ಸ್ವಲ್ಪವೂ ಮಾತನಾಡಬೇಡಿ. ಆದರೆ ನೀವು ಅದರ ಬಗ್ಗೆ ತಮಾಷೆ ಮಾಡಿದರೆ ಅಥವಾ ಮೀಮ್ಸ್ ಮಾಡಿದರೆ ಜನರು ನಿಮ್ಮನ್ನು ಕ್ಷಮಿಸುವುದಿಲ್ಲ. ಇದು ಹಲವರಿಗೆ ತೀವ್ರ ನೋವಾಗಿದೆ ಎಂದಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಆರಂಭಕ್ಕೂ ಮೊದಲೇ ಕಂಟೆಸ್ಟೆಂಟ್ ಅನೌನ್ಸ್- ಯಾರದು?

ಬಳಿಕ ನೀವು ಲಡ್ಡುವಿನ ಬಗ್ಗೆ ತಮಾಷೆ ಮಾಡುತ್ತಿದ್ದೀರಿ. ನಿನ್ನೆಯ ಸಿನಿಮಾ ಸಮಾರಂಭದಲ್ಲಿ ಲಡ್ಡು ಹೇಗೆ ಸೂಕ್ಷ್ಮ ವಿಷಯವಾಗಿದೆ ಎಂದು ನಾನು ನೋಡಿದೆ. ನೀವು ಅದನ್ನು ಎಂದಿಗೂ ಹೇಳಬೇಡಿ, ಇಲ್ಲ. ದಯವಿಟ್ಟು ನೀವು ಎಂದಿಗೂ ಹೇಳುವ ಧೈರ್ಯ ಮಾಡಬೇಡಿ. ನಾನು ನಿಮ್ಮನ್ನು ನಟರಾಗಿ ಗೌರವಿಸುತ್ತೇನೆ, ಆದರೆ ಸನಾತನ ಧರ್ಮದ ವಿಷಯಕ್ಕೆ ಬಂದಾಗ, ದಯವಿಟ್ಟು ಒಂದು ಮಾತು ಹೇಳುವ ಮೊದಲು ನೀವು ನೂರು ಬಾರಿ ಯೋಚಿಸಿ ಮಾತನಾಡಿ ಎಂದು ಕಾರ್ತಿಗೆ ಪವನ್ ಕಲ್ಯಾಣ್ ಎಚ್ಚರಿಕೆ ನೀಡಿದ್ದಾರೆ.

ಇತ್ತ ಪವನ್ ಕಲ್ಯಾಣ್ ಗರಂ ಆಗುತ್ತಿದ್ದಂತೆ ಕಾರ್ತಿ ಕ್ಷಮೆ ಕೇಳಿದ್ದಾರೆ. ಪ್ರೀತಿಯ ಪವನ್ ಕಲ್ಯಾಣ್ ಅವರೇ ನಿಮ್ಮ ಬಗ್ಗೆ ನನಗೆ ಅತೀವ ಗೌರವವಿದೆ. ಉದ್ದೇಶಪೂರ್ವಕವಲ್ಲದೆ ನಡೆದ ಘಟನೆಗಳಿಗಾಗಿ ಕ್ಷಮೆಯನ್ನು ಕೇಳುತ್ತೇನೆ. ನಾನೂ ಒಬ್ಬ ವೆಂಕಟೇಶ್ವರನ ಭಕ್ತನಾಗಿ ಸಂಪ್ರದಾಯವನ್ನು ಹಿಡಿದಿಟ್ಟುಕೊಳ್ಳುತ್ತೇನೆ ಎಂದು ತನ್ನ ಎಕ್ಸ್ ಖಾತೆಯಲ್ಲಿ ನಟ ಬರೆದುಕೊಂಡಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ಸಿನಿಮಾ ಸಮಾರಂಭವೊಂದರಲ್ಲಿ ಕಾರ್ತಿಗೆ ನಿರೂಪಕಿ ಲಡ್ಡು ಕುರಿತು ಮಾತನಾಡಿದರು. ಲಡ್ಡು ಬೇಕಾ ಎಂದು ಜಾಹೀರಾತಿನ ಡೈಲಾಗ್ ಒಂದನ್ನು ತಮಾಷೆಗೆ ಹೇಳಿದರು. ಅದಕ್ಕೆ ಕಾರ್ತಿ, ಲಡ್ಡು ವಿಷಯ ಈಗ ಬೇಡ, ಅದು ಬಹಳ ಸೆನ್ಸಿಟಿವ್ ವಿಷಯ ಆಗಿದೆ, ಲಡ್ಡು ಈಗ ಬೇಡ ಎಂದು ನಗುತ್ತಾ ಹೇಳಿದರು, ಅದಕ್ಕೆ ನಿರೂಪಕಿ, ನಿಮಗಾಗಿ ಮೋತಿಚೂರ್ ಲಡ್ಡು ತರಿಸಿ ಕೊಡುತ್ತೇವೆ ಎನ್ನುತ್ತಾರೆ. ಈಗ ಬೇಡ, ಲಡ್ಡು ಈಗ ಬೇಡ ಎಂದು ನಗುತ್ತಾ ಕಾರ್ತಿ ಹೇಳಿದ್ದರು.

Share This Article