ಚಂದನವನದ ‘ಚಂಡ’ನಿಗೆ ಇಂದು ಸಿಗುತ್ತಾ ಬೇಲ್..?

Public TV
3 Min Read

ಬೆಂಗಳೂರು: ಮಾರುತಿಗೌಡ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಸ್ಯಾಂಡಲ್‍ವುಡ್ ಕರಿಚಿರತೆ ದುನಿಯಾ ವಿಜಯ್ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಮಧ್ಯಾಹ್ನ 3 ಗಂಟೆಗೆ ಜಿಮ್ ಟ್ರೇನರ್ ಮಾರುತಿಗೌಡ ಮೇಲೆ ಹಲ್ಲೆ ಪ್ರಕರಣ ಸಂಬಂಧ ಜಾಮೀನು ಅರ್ಜಿ ಆದೇಶ ಪ್ರಕಟವಾಗಲಿದೆ. ಈ ಹಿಂದೆ ವಿದ್ವತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂಬ ಕಾರಣಕ್ಕೆ ಶಾಸಕ ಹ್ಯಾರೀಸ್ ಪುತ್ರ ನಲಪಾಡ್‍ಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿತ್ತು. ಇತ್ತ ಮಾರುತಿಗೌಡ ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವಿಜಯ್‍ಗೆ ಜಾಮೀನು ಸಿಗೋದು ಅನುಮಾನವಾಗಿದೆ.

ದುನಿಯಾ ವಿಜಯ್ ರೌಡಿ ಅಲ್ಲ. ಇದೊಂದು ಆಕಸ್ಮಿಕವಾಗಿ ನಡೆದ ಘಟನೆ. ವಿಜಿ ಓರ್ವ ಸೆಲೆಬ್ರೆಟಿ ಎಂಬ ಕಾರಣಕ್ಕೆ ಪ್ರಕರಣವನ್ನು ಇಷ್ಟು ದೊಡ್ಡದಾಗಿ ಮಾಡಲಾಗುತ್ತಿದ್ದು, ನನ್ನ ಕಕ್ಷಿದಾರರಿಗೆ ಜಾಮೀನು ನೀಡಬೇಕೆಂದು ವಿಜಿ ಪರ ವಕೀಲರು ವಾದ ಮಂಡಿಸಿದ್ದರು. ದುನಿಯಾ ವಿಜಿ ಹಲವು ಬಾರಿ ಜಗಳ ಮಾಡಿಕೊಂಡಿದ್ದಾರೆ. ಇವರ ಮೇಲೆ ಇಂತಹ ಪ್ರಕರಣಗಳು ಪದೇ ಪದೇ ದಾಖಲಾಗುತ್ತಿವೆ. ಒಂದು ವೇಳೆ ಜಾಮೀನು ನೀಡಿದರೆ, ತಮ್ಮ ಪ್ರಭಾವ ಬಳಸಿ ಸಾಕ್ಷಿಗಳ ಮೇಲೆ ಒತ್ತಡ ಹೇರುತ್ತಾರೆ. ಆದ್ದರಿಂದ ಆರೋಪಿ ದುನಿಯಾ ವಿಜಯ್ ಆ್ಯಂಡ್ ಟೀಂಗೆ ಜಾಮೀನು ನೀಡಕೂಡದು ಎಂದು ಎಸ್‍ಪಿಪಿ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಬಲ ವಾದ ಮಂಡಿಸಿದ್ದರು.

ಶನಿವಾರ ನಡೆದಿದ್ದೇನು?
ಶನಿವಾರ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯುತಿತ್ತು. ಈ ಕಾಂಪಿಟೇಷನ್ ನೋಡಲು ದುನಿಯಾ ವಿಜಿ ಮತ್ತು ತಂಡ ಬಂದಿತ್ತು. ಈ ವೇಳೆ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಮತ್ತು ದುನಿಯಾ ವಿಜಿ ನಡುವೆ ಮಾತಿನ ಚಕಮಕಿ ನಡೆದಿದೆ. ಆದರೆ ಗಲಾಟೆ ವಿಕೋಪಕ್ಕೆ ತಿರುಗಿ ದುನಿಯಾ ವಿಜಯ್ ಗ್ಯಾಂಗ್, ಮಾರುತಿಗೌಡನ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿ ಹಾಕಿಕೊಂಡು ಕಿಡ್ನಾಪ್ ಮಾಡಿದ್ದಾರೆ. ದುನಿಯಾ ವಿಜಿ, ಮಣಿ ಮತ್ತು ಪ್ರಸಾದ್ ಸಹಚರರಿಂದ ಈ ಕೃತ್ಯ ನಡೆದಿದೆ.

ವಿಜಿ ವಿರುದ್ಧ ಸಾಲು ಸಾಲು ಪ್ರಕರಣಗಳು:
ಮಾಸ್ತಿಗುಡಿ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಇಬ್ಬರು ಖಳನಟರು ನೀರಿನಲ್ಲಿ ಮುಳುಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ಮಾಪಕ ಸುಂದರ್ ಪಿ ಗೌಡ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ವಿಜಯ್ ಸಹಾಯ ಮಾಡಿದ್ದರು. ಅಲ್ಲದೇ ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ನಾಪತ್ತೆ ಕೂಡ ಆಗಿದ್ದರು. ನಂತರ ವಿಜಯ್ ಗಾಗಿ ಬಲೆ ಬೀಸಿದ್ದ ಪೊಲೀಸರು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಬಂಧಿಸಿದ ನಂತರ ಡಿಸಿಪಿ ಶರಣಪ್ಪ ಅವರು ವಿಜಿಗೆ ವಾರ್ನಿಂಗ್ ಮಾಡಿ ಕಳುಹಿಸಿದ್ದರು. ಅದಕ್ಕೂ ಮೊದಲು ಸಿಕೆ ಅಚ್ಚುಕಟ್ಟು ಠಾಣೆಯಲ್ಲೇ ಮತ್ತೊಂದು ಕೇಸ್ ನಲ್ಲಿ ವಿಜಿ ಅರೆಸ್ಟ್ ಆಗಿದ್ದರು. ವೃದ್ಧ ವ್ಯಕ್ತಿಯೊಬ್ಬರ ಎದೆಗೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದರು. ಈ ಕುರಿತು ವೃದ್ಧ ವ್ಯಕ್ತಿ ವಿಜಿ ವಿರುದ್ಧ ದೂರು ದಾಖಲಿಸಿದ್ದರು. ಆ ಸಂದರ್ಭದಲ್ಲೂ ಕರಿಚಿರತೆ ಅರೆಸ್ಟ್ ಆಗಿದ್ದು, ತದನಂತರ ಬೇಲ್ ಪಡೆದು ಹೊರ ಬಂದಿದ್ದರು.

ಮೇ 31 2018 ರಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪದ ಮೇರೆಗೆ ಚೆನ್ನಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ವಿಜಿ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಐಪಿಸಿ ಕಲಂ 353 (ಪೊಲೀಸ್ ಆಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು), ಐಪಿಸಿ ಕಲಂ 255 (ಕರ್ತವ್ಯ ನಿರತ ಪೊಲೀಸ್ ಜೊತೆ ವಾಗ್ವಾದಕ್ಕಿಳಿದಿದ್ದು) ಸಂಬಂಧ ವಿಜಯ್ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು.

ಜನವರಿ 18 2013 ರಂದು ಪತ್ನಿ ನಾಗರತ್ನ ಅವರಿಗೆ ಜೀವ ಬೆದರಿಕೆ ಹಾಕಿದ್ದರು. ಅಲ್ಲದೇ ವಿಜಿ ಸಂಬಂಧಿ ಶಿವಶಂಕರಗೌಡ ಎಂಬಾತನಿಗೆ ಹಲ್ಲೆಗೆ ಮುಂದಾಗಿದ್ದರು. ಈ ಎರಡೂ ಪ್ರಕರಣಗಳ ಸಂಬಂಧ ವಿಜಿ ವಿರುದ್ಧ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಜನವರಿ 17 2013 ರಲ್ಲಿ ಕೌಟುಂಬಿಕ ನ್ಯಾಯಲಯದಲ್ಲಿ ವಿಚ್ಚೇದನಕ್ಕೆ ಪತ್ನಿ ಅರ್ಜಿ ಸಲ್ಲಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *