ದರ್ಶನ್‌ಗೆ ರಾಜಾತಿಥ್ಯ – ಪ್ರಭಾವಿ ಸಚಿವನಿಗೆ ಸಿಎಂ ಕ್ಲಾಸ್‌

Public TV
1 Min Read

ಬೆಂಗಳೂರು: ದರ್ಶನ್ (Darshan) ಐಶಾರಾಮಿ ಜೈಲುವಾಸದ ಹಿಂದೆ ಸಚಿವರೊಬ್ಬರ ಹೆಸರು ಕೇಳಿ ಬಂದಿದ್ದಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಗರಂ ಆಗಿದ್ದಾರೆ. ಸಚಿವ ನಾಗೇಂದ್ರನಿಗೆ ಏನಾಯ್ತು? ನಿನಗೂ ಹಾಗೆ ಆದರೆ ಏನ್ಮಾಡ್ತಿಯಾ ಎಂದು ಪ್ರಶ್ನಿಸಿ ಕ್ಲಾಸ್‌ ತೆಗೆದುಕೊಂಡಿದ್ದಾರೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ ಲಭ್ಯವಾಗಿದೆ.

ನೋಡಪ್ಪ ಇಂತಹ ವಿಚಾರಕ್ಕೆ ಹೋಗಬೇಡ. ಸಚಿವ ನಾಗೇಂದ್ರನಿಗೆ ಏನಾಯ್ತು, ನಿನಗೂ ಅದೇ ರೀತಿ ಆದ್ರೆ ಏನ್ಮಾಡ್ತೀಯಾ? ಇದರ ಹಿಂದೆ ನಿನ್ನ ಪಾತ್ರ ಇದ್ದರೆ ನಾಗೇಂದ್ರ ಹೋದಂತೆ ನೀನು ಹೋಗಬಹುದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿಎಂ ಪ್ರಶ್ನೆಗೆ, ಇಲ್ಲ ಸರ್, ಖಂಡಿತ ನನ್ನದೇನು ಇಲ್ಲ. ಅದಕ್ಕೂ ಯಾವುದೇ ಸಂಬಂಧ ಇಲ್ಲ. ಸುಮ್ಮನೇ ಯಾರೋ ಏನು ಮಾತನಾಡುತ್ತಾರೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಕೋರ್ಟ್‍ಗೆ ಹಾಜರಾಗದೇ ಕಳ್ಳಾಟ – ಗೋವಾದಲ್ಲಿ ಲಾಯರ್ ಜಗದೀಶ್ ಅರೆಸ್ಟ್

ಈ ಉತ್ತರಕ್ಕೆ ಮತ್ತೆ ಸಿಟ್ಟಾದ ಸಿಎಂ, ನಿನ್ನ ಪಾತ್ರ ಇದ್ಯೋ ಇಲ್ವೋ ಗೊತ್ತಿಲ್ಲ. ಆದರೆ ಒಂದ್ ಹೇಳ್ತೀನಿ. ಇಂತಹವರ ಸಹವಾಸ ಮಾಡಿದ್ರೆ, ನಾಗೇಂದ್ರನಿಗೆ ಆದಂತೆ ಆಗಬಹುದು, ಹುಷಾರಾಗಿರು ಎಂದು ಎಚ್ಚರಿಸಿದ್ದಾರೆ. ಸಿಎಂ ಎಚ್ಚರಿಕೆಗೆ, ಖಂಡಿತ ಸರ್. ನಾನು ಅವನ ವಿಚಾರದಲ್ಲಿ ಯಾವುದಕ್ಕೂ ಹೋಗಿಲ್ಲ, ಹೋಗುವುದು ಇಲ್ಲ ಎಂದಿದ್ದಾರೆ.

ದರ್ಶನ್‌ಗೆ ವಿಶೇಷ ಅತಿಥ್ಯ ಸಿಗಲು ಪ್ರಭಾವಿ ಸಚಿವರ‌ ಮೌಖಿಕ ಆದೇಶ ಕಾರಣ ಮೂಲಗಳಿಂದ ತಿಳಿದು ಬಂದಿತ್ತು. ಸಚಿವರು ದರ್ಶನ್‌ಗೆ ವಿಶೇಷ ಸೌಲಭ್ಯ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಜೈಲು ಸಿಬ್ಬಂದಿ ಸಹ ದರ್ಶನ್‌ ಖ್ಯಾತ ನಟನಾಗಿರುವ ಕಾರಣ ಜೈಲಿನ ನಿಯಮಗಳನ್ನು ಪಾಲಿಸಿರಲಿಲ್ಲ.  ಇದನ್ನೂ ಓದಿ: ಪಬ್ಲಿಕ್ ಹೀರೋ ವೆಂಕಟೇಶ್ ನೆಟ್ಟ ಗಿಡಗಳಿಗೆ 1.87 ಲಕ್ಷ ರೂ. ಮನರೇಗಾ ಬಿಲ್

ಜೈಲಿನ (Parappana Agrahara) ಒಳಗಡೆ ಚಯರ್‌ ನೀಡಬೇಕಾದರೂ ಅಧಿಕಾರಿಗಳ ಅನುಮತಿ ಬೇಕು. ಅನಾರೋಗ್ಯ ಇತ್ಯಾದಿ ಕಾರಣ ಸಂಬಂಧ ಜೈಲು ವೈದ್ಯರು ಸೂಚಿಸಿದರೆ ಮಾತ್ರ ಚಯರ್‌ ಮೇಲೆ ಕುಳಿತುಕೊಳ್ಳಲು ಅನುಮತಿ ನೀಡಲಾಗುತ್ತದೆ. ಆದರೆ ಪ್ರಭಾವಿ ಸಚಿವರ ಮೌಖಿಕ ಆದೇಶದಿಂದ ಅಧಿಕಾರಿಗಳು ದರ್ಶನ್‌ಗೆ ವಿಐಪಿ ಸೌಲಭ್ಯ ನೀಡಿದ್ದಾರೆ ಎನ್ನಲಾಗುತ್ತಿದೆ.

 

Share This Article